ರಾಷ್ಟ್ರೀಯ ಹೆದ್ದಾರಿಯ ತುರ್ತು ರನ್ವೇಯಲ್ಲಿ IAF ವಿಮಾನಗಳ ಪ್ರಾಯೋಗಿಕ ಹಾರಾಟ-ವಿಡಿಯೋ - IAF Aircraft
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/20-03-2024/640-480-21027206-thumbnail-16x9-am.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Mar 20, 2024, 8:47 AM IST
ಬಾಪಟ್ಲಾ(ಆಂಧ್ರಪ್ರದೇಶ): ಭಾರತೀಯ ವಾಯುಪಡೆಯ ಫೈಟರ್ ಮತ್ತು ಸಾರಿಗೆ ವಿಮಾನಗಳು ಸೋಮವಾರ ಆಂಧ್ರ ಪ್ರದೇಶದ ಬಾಪಟ್ಲಾ ಜಿಲ್ಲೆಯ ಅಡ್ಡಂಕಿ ಸಮೀಪದ ರಾಷ್ಟ್ರೀಯ ಹೆದ್ದಾರಿ 16ರಲ್ಲಿರುವ ತುರ್ತು ಲ್ಯಾಂಡಿಂಗ್ ಫೆಸಿಲಿಟಿ ಏರ್‌ಸ್ಟ್ರಿಪ್‌ನಲ್ಲಿ ಯಶಸ್ವಿ ಟ್ರಯಲ್ ಕಾರ್ಯಾಚರಣೆ ನಡೆಸಿದವು.
ಎಸ್ಯು-30 ಮತ್ತು ಹಾಕ್ ಫೈಟರ್ ಜೆಟ್‌ಗಳು ಪ್ರಾಯೋಗಿಕ ಹಾರಾಟದ ಸಮಯದಲ್ಲಿ ಯಶಸ್ವಿಯಾಗಿ ಓವರ್‌ಶೂಟ್‌ಗಳನ್ನು ನಡೆಸಿದವು. ಆದರೆ ಎಎನ್-32 ಮತ್ತು ಡೋರ್ನಿಯರ್ ಸಾರಿಗೆ ವಿಮಾನಗಳು ರನ್‌ವೇಗೆ ಇಳಿದ ಬಳಿಕ ಸ್ಟ್ರಿಪ್‌ನಿಂದ ಟೇಕ್ ಆಫ್ ಆದವು.
ಕಳೆದ ವರ್ಷ ಇದೇ ರನ್ ವೇ ಮೇಲೆ ಇಳಿಯದೇ ವಿಮಾನಗಳ ಪ್ರಾಯೋಗಿಕ ಓಡಾಟ ನಡೆಸಲಾಗಿತ್ತು. ಆದರೆ ಸೋಮವಾರ ರನ್ ವೇ ಮೇಲೆ ವಿಮಾನಗಳನ್ನು ಯಶಸ್ವಿಯಾಗಿ ಇಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 16ರಲ್ಲಿ ಕೇಂದ್ರ ಸರ್ಕಾರ ತುರ್ತು ರನ್ ವೇ ನಿರ್ಮಿಸಿದೆ.
ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಟ್ರಯಲ್ ರನ್ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 16ರಲ್ಲಿರುವ ಕೋರಿಶಪಡು ಸೇತುವೆಯಿಂದ ಜೇ ಪಂಗುಳೂರು ಮಂಡಲದ ರೇಣಿಂಗವರಂವರೆಗಿನ 5.1 ಕಿ.ಮೀ ವ್ಯಾಪ್ತಿಯಲ್ಲಿ ತುರ್ತು ರನ್‌ವೇ ನಿರ್ಮಿಸಲಾಗಿದೆ. ಈ ರನ್‌ವೇಗೆ ಬೇರೆ ಯಾರೂ ಪ್ರವೇಶಿಸದಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ರನ್ ವೇ ಸಮೀಪದಲ್ಲಿ ಹೊಸದಾಗಿ ನಿರ್ಮಿಸಿರುವ ಕಟ್ಟಡದಲ್ಲಿಯೇ ರಾಡಾರ್ ವಾಹನದ ಜತೆಗೆ ಅತ್ಯಾಧುನಿಕ ತಂತ್ರಜ್ಞಾನದ ವಾಹನಗಳನ್ನೂ ಇರಿಸಲಾಗಿದೆ.
ಕಳೆದ ವರ್ಷದ ಪ್ರಾಯೋಗಿಕ ಓಡಾಟ: ಕಳೆದ ವರ್ಷ ರನ್ ವೇ ಮೇಲೆ ಇಳಿಯದೆ ಕಾರ್ಗೋ ವಿಮಾನಗಳ ಟ್ರಯಲ್ ಹಾರಾಟ ನಡೆಸಲಾಗಿತ್ತು. ಈ ವೇಳೆ ತುರ್ತು ಲ್ಯಾಂಡಿಂಗ್ ಪ್ರಯೋಗ ಯಶಸ್ವಿಯಾಗಿತ್ತು. ಭಾರತೀಯ ವಾಯುಸೇನೆಗೆ ಸೇರಿದ ನಾಲ್ಕು ವಿಮಾನಗಳು ರನ್ ವೇ ಮೇಲೆ ಹಾರಿ ನಿರ್ದಿಷ್ಟ ಎತ್ತರದಿಂದ ಟೇಕಾಫ್ ಆಗಿದ್ದವು. ಆ ಸಂದರ್ಭದಲ್ಲಿ, ವಿಮಾನದ ತುರ್ತು ಲ್ಯಾಂಡಿಂಗ್‌ಗೆ ಪರಿಸ್ಥಿತಿಗಳು ಸೂಕ್ತವಾಗಿವೆಯೇ ಎಂದು ರನ್‌ವೇಯನ್ನು ಪರೀಕ್ಷಿಸಲಾಗಿತ್ತು. ಕಳೆದ ವರ್ಷ ತಾತ್ಕಾಲಿಕ ರಾಡಾರ್ ತಂತ್ರಜ್ಞಾನವು ಸಹಕರಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗಿತ್ತು. ಅಂತಿಮವಾಗಿ ವಿಮಾನಗಳ ತುರ್ತು ಲ್ಯಾಂಡಿಂಗ್‌ಗೆ ರನ್‌ವೇ ಸಂಪೂರ್ಣ ಸೂಕ್ತವಾಗಿದೆ ಎಂದು ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿದ್ದರು.
ತರ್ತು ರನ್ವೇಗಳ ಅಗತ್ಯವೇನು?: ಯುದ್ಧ ಮತ್ತು ನೈಸರ್ಗಿಕ ವಿಕೋಪಗಳಂಥ ಸಂದರ್ಭಗಳಲ್ಲಿ ತುರ್ತು ಸೇವೆಗಳೊಂದಿಗೆ ಮಿಲಿಟರಿ ಅಗತ್ಯತೆಗಳನ್ನೂ ಪೂರೈಸಲು ಈ ರನ್‌ವೇ ನಿರ್ಮಿಸಲಾಗಿದೆ. ಇದರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 2018ರಲ್ಲಿ ಒಟ್ಟು 80 ಕೋಟಿ ರೂ. ನೀಡಿದೆ. ದೇಶಾದ್ಯಂತ ಇಂತಹ 20 ರನ್ ವೇಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಶುದ್ಧ ಸಸ್ಯಾಹಾರಿ ಗ್ರಾಹಕರಿಗಾಗಿ "ಪ್ಯೂರ್ ವೆಜ್ ಮೋಡ್" ಸೇವೆ ಆರಂಭಿಸಿದ ಜೊಮಾಟೊ