ಕಡಲಬ್ಬರಕ್ಕೆ ಮನೆ ಸಮುದ್ರಪಾಲು: 2 ದಿನದ ಹಿಂದೆ ಸ್ಥಳಾಂತರಗೊಂಡಿದ್ದ ಮನೆ ಮಂದಿ, ಪುರಸಭೆ ಅಧಿಕಾರಿಗಳಿಂದ ಪ್ರಾಣ ರಕ್ಷಣೆ - House destroyed - HOUSE DESTROYED
🎬 Watch Now: Feature Video
Published : Jun 28, 2024, 11:05 AM IST
ಉಳ್ಳಾಲ: ಉಚ್ಚಿಲ ಬಟ್ಟಪ್ಪಾಡಿ ಸಮುದ್ರತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಸೋಮೇಶ್ವರ ಪುರಸಭೆ ಅಧಿಕಾರಿಗಳು ಸ್ಥಳಾಂತರಗೊಳಿಸಿದ್ದ ಬೀಫಾತುಮ್ಮ ಮನೆ ಗುರುವಾರ ಸಂಜೆ ವೇಳೆ ಸಂಪೂರ್ಣ ಸಮುದ್ರಪಾಲಾಗಿದೆ. ಅಪಾಯದಲ್ಲಿರುವ ಇನ್ನೆರಡು ಮನೆಮಂದಿಯನ್ನು ಇಂದು ಸ್ಥಳಾಂತರಿಸಲಾಗಿದೆ.
ಮದನಿ ನಗರದಲ್ಲಿ ಸಂಭವಿಸಿದ ಘೋರ ದುರಂತದ ಹಿನ್ನೆಲೆಯಲ್ಲಿ ಇನ್ನೊಂದು ದುರಂತ ಸಂಭವಿಸದಿರಲಿ ಎಂಬ ಕಾರಣದಿಂದ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಾಡಿ, ತಹಶೀಲ್ದಾರ್ ಪ್ರದೀಪ್ ಕೋರ್ಡೇಕರ್ ಸಹಿತ ಹಲವು ಅಧಿಕಾರಿಗಳು ಜೂ.26 ಕ್ಕೆ ಉಚ್ಚಿಲ ಬಟ್ಟಪ್ಪಾಡಿಗೆ ತೆರಳಿ ಬೀಫಾತುಮ್ಮ ಮನೆಯ ಐದು ಮಂದಿಯನ್ನು ಸ್ಥಳಾಂತರಿಸಿದ್ದರು.
ಅವರು ಸಂಬಂಧಿಕರ ಮನೆಗೆ ತೆರಳಿ ಇಂದು ಕೋಟೆಕಾರಿನಲ್ಲಿರುವ ಬಾಡಿಗೆ ಮನೆಗೆ ತೆರಳಿದ್ದಾರೆ. ಈ ಬಾಡಿಗೆ ಮನೆಯ ಮೂರು ತಿಂಗಳ ಬಾಡಿಗೆ ಸರಕಾರ ಭರಿಸಲಿದೆ. ಇಂದು ಬೀಫಾತುಮ್ಮ ಮನೆ ಸಮುದ್ರಪಾಲಾಗುತ್ತಿದ್ದಂತೆ ಅಲಿಮಮ್ಮ ಕುಟುಂಬದ 11 ಮಂದಿ ಹಾಗೂ ಸೌದಾ ಎಂಬವರ ಮನೆಯ 6 ಮಂದಿಯನ್ನು ಅವರ ಸಂಬಂಧಿಕರ ಮನೆಗೆ ಸ್ಥಳಾಂತರಗೊಳಿಸಲಾಗಿದೆ.
ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸಮುದ್ರತೀರದ ಮನೆಮಂದಿ ಎಚ್ಚರಿಕೆಯಿಂದ ಇರಲು ಉಳ್ಳಾಲ ತಾಲೂಕು ತಹಶೀಲ್ದಾರ್ ಸೂಚಿಸಿದ್ದಾರೆ. ಅಗತ್ಯಬಿದ್ದಲ್ಲಿ ಅಪಾಯದಂಚಿನಲ್ಲಿ ಇರುವ ಇನ್ನಷ್ಟು ಮನೆಮಂದಿಗೆ ಬಾಡಿಗೆ ಮನೆಗಳನ್ನು ಗುರುತಿಸಿ ಮೂರು ತಿಂಗಳುಗಳ ಬಾಡಿಗೆಯನ್ನು ಸರಕಾರ ಭರಿಸಲಿದೆ ಎಂದಿದ್ದಾರೆ.