ಕೊಪ್ಪಳ: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಮೊಹರಂ - muharram celebration
🎬 Watch Now: Feature Video
Published : Jul 15, 2024, 7:37 PM IST
ಕೊಪ್ಪಳ: ಹಿಂದೂ, ಮುಸ್ಲಿಂ ಸಮುದಾಯದವರು ಧರ್ಮಬೇಧ ಮರೆತು ಮೊಹರಂ ಹಬ್ಬವನ್ನು ಭಾವೈಕ್ಯತೆಯಿಂದ ಅದ್ಧೂರಿಯಾಗಿ ಆಚರಿಸಿ, ಸಾಮರಸ್ಯ ಮೆರೆದರು.
ಕೊಪ್ಪಳ ತಾಲೂಕಿ ಹನಕುಂಟಿ ಗ್ರಾಮದಲ್ಲಿ ನಡೆಯುವ ಮೊಹರಂ ಹಬ್ಬದಲ್ಲಿ ಪ್ರತಿಷ್ಠಾಪಿಸಲಾಗುವ ಅಲಾಯಿ ದೇವರೊಂದು ಹಿಂದೂ ಸಮುದಾಯದ ಮನೆಯಿಂದಲೇ ಅಶೂರಖಾನಾಗೆ ಮೆರವಣಿಗೆ ಮೂಲಕ ಹೊರಡುತ್ತದೆ. ಹನಕುಂಟಿ ಗ್ರಾಮದ ಕುಬೇರಪ್ಪ ಬಡಿಗೇರ ಎಂಬುವವರ ಮನೆಯಿಂದ ಪ್ರತಿ ವರ್ಷ ಒಂದು ಅಲಾಯಿ ದೇವರು ಅಶೂರಖಾನಾಗೆ ಹೊರಡುತ್ತದೆ. ಕುಬೇರಪ್ಪ ಬಡಿಗೇರ ಅವರ ಮನೆಯಲ್ಲಿ ಅಲಾಯಿ ದೇವರನ್ನು ಅಲಂಕಾರ ಮಾಡಿ, ಪೂಜೆ ಪುನಸ್ಕಾರ, ನೈವೇದ್ಯ ಮಾಡಿದ ಬಳಿಕ ಅಶೂರಖಾನಕ್ಕೆ ಮೆರವಣಿಗೆ ಮೂಲಕ ಕಳಿಸಲಾಗುತ್ತದೆ.
ಹನಕುಂಟಿ ಗ್ರಾಮದ ಪರಂಪರೆ: ಅಲಾಯಿ ದೇವರ ಪಂಜಾಗಳನ್ನು ಪ್ರತಿ ವರ್ಷ ಸ್ವಚ್ಛಗೊಳಿಸಿದ ಬಳಿಕ ಅಶೂರಖಾನಾದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ವಿಶ್ವಕರ್ಮ ಸಮುದಾಯದವರ ಮನೆಯಲ್ಲಿ ಪಂಜಾಗಳನ್ನು ತೊಳೆಯಲು ಕೊಡಲಾಗುತ್ತದೆ. ಕುಬೇರಪ್ಪ ಬಡಿಗೇರ ಅವರು ಒಂದು ಪಂಜಾ ಮಾಡಿಸಿಕೊಟ್ಟಿದ್ದಾರೆ. ಅಂದಿನಿಂದ ಕುಬೇರಪ್ಪ ಅವರ ಮನೆಯಿಂದಲೇ ಮೊಹರಂ ಆಚರಣೆಯ ಏಳನೇ ದಿನದಂದು ಅಲಾಯಿ ದೇವರು ಮೆರವಣಿಗೆ ಮೂಲಕ ತೆರಳುವ ಪರಂಪರೆ ಶುರುವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಪ್ರತಿದಿನ ಜಾತಿ, ಧರ್ಮದ ಹೆಸರಿನಲ್ಲಿ ಬಡಿದಾಡಿಕೊಂಡು ಕೆಲವರು ತಮ್ಮ ಬೇಳೆ ಬೆಯಿಸಿಕೊಳ್ಳುವ ಪ್ರಸ್ತುತ ದಿನಗಳಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಮೊಹರಂ ಆಚರಣೆಯಲ್ಲಿ ಎಲ್ಲ ಸಮುದಾಯದವರು ಬೆರೆತು ಇತರರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಮಂಡ್ಯ: ವಿಜೃಂಭಣೆಯಿಂದ ನಡೆದ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವ, ತಾವರೆ ಎಲೆ ಪಂಕ್ತಿ ಭೋಜನ - topina timmappa uthsava