ಚಿಕ್ಕಮಗಳೂರು ದೇವಿರಮ್ಮ ದರ್ಶನ: ಬೆಟ್ಟ ಹತ್ತುವಾಗ ಬಿದ್ದು ಭಕ್ತರಿಗೆ ಗಾಯ - DEVIRAMMA HILL
🎬 Watch Now: Feature Video
Published : Nov 1, 2024, 4:24 PM IST
ಚಿಕ್ಕಮಗಳೂರು: ವರ್ಷಕ್ಕೊಮ್ಮೆ ದರ್ಶನ ನೀಡುವ ಚಿಕ್ಕಮಗಳೂರಿನ ಆದಿ ದೇವತೆ ದೇವಿರಮ್ಮ ಬೆಟ್ಟ ಹತ್ತಲು ಮಳೆಯ ನಡುವೆಯೂ ಸಾವಿರಾರು ಭಕ್ತರು ಆಗಮಿಸಿದ್ದರು. ಕಿರಿದಾದ ರಸ್ತೆಯಲ್ಲಿ ಜಾರಿಕೆ ಮಧ್ಯೆಯೂ ಹಗ್ಗ ಹಿಡಿದು ದೇವೀರಮ್ಮನ ಬೆಟ್ಟ ಹತ್ತಿದ್ದು, ಈ ವೇಳೆ ಕೆಲವು ಭಕ್ತರು ಜಾರಿ ಬಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಟ್ಟದಲ್ಲಿ ಪ್ರಜ್ಞೆ ತಪ್ಪಿ 25 ವರ್ಷದ ಯುವತಿ ಸಿಂಧು ಎಂಬಾಕೆ ಬಿದ್ದಿದ್ದರೆ, ಬೆಂಗಳೂರು ಮೂಲದ 30 ವರ್ಷದ ದಿವ್ಯಾ ಎಂಬ ಯುವತಿಗೆ ಕಾಲು ಮುರಿತವಾಗಿದೆ. ಲೋ ಬಿಪಿಯಿಂದ ಗುಡ್ಡದಲ್ಲೇ ಸುಸ್ತಾಗಿ ಮಂಗಳೂರಿನ 55 ವರ್ಷದ ಜಯಮ್ಮ ಚಿಕಿತ್ಸೆ ಪಡೆದರು. ತರೀಕೆರೆ ಮೂಲದ ವೇಣು ಎಂಬ ಯುವಕ ಜಾರಿ ಬಿದ್ದು ತಲೆಗೆ ಗಾಯವಾಗಿದೆ. ದೇವೀರಮ್ಮ ದರ್ಶನ ಪಡೆದು ಹಿಂದಿರುಗುವಾಗ ಮತ್ತೊಬ್ಬ ಯುವತಿ ಕಾಲು ಉಳುಕಿ, ಪ್ರಜ್ಞೆ ತಪ್ಪಿದ್ದಳು. ಯುವತಿಯನ್ನು ಬೇಲೂರು ತಾಲೂಕಿನ ಎಂಸಂದಿ ಗ್ರಾಮದ ಸಿಂಚನ ಎಂದು ಗುರುತಿಸಲಾಗಿದೆ. ಯುವತಿಯನ್ನು ತಕ್ಷಣ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಅಸ್ವಸ್ಥ ಭಕ್ತರನ್ನು ರಕ್ಷಣಾ ತಂಡ ಗುಡ್ಡದಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದೆ.
ಇದನ್ನೂ ಓದಿ: ವರ್ಷದಲ್ಲಿ ಒಂದು ದಿನ ಭಕ್ತರಿಗೆ ದರ್ಶನ ನೀಡುವ ಕಾಫಿನಾಡಿನ ದೇವಿರಮ್ಮ: ಬೆಟ್ಟಕ್ಕೆ ಹರಿದು ಬಂದ ಸಾವಿರಾರು ಜನ
ಎಸ್ಪಿ ಪ್ರತಿಕ್ರಿಯೆ: ದೇವಿರಮ್ಮ ದರ್ಶನದ ವೇಳೆ ಕಾಲ್ತುಳಿತ ವದಂತಿ ಸುಳ್ಳು, ಇದು ಸತ್ಯಕ್ಕೆ ದೂರವಾಗಿದೆ. ದರ್ಶನದ ವೇಳೆ ಇಬ್ಬರು ಮಹಿಳೆಯರು ಮಾತ್ರ ಪ್ರಜ್ಞೆ ತಪ್ಪಿದ್ದರು ಎಂದು ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಸ್ಪಷ್ಟನೆ ನೀಡಿದ್ದಾರೆ.
ಪ್ರಜ್ಞೆ ತಪ್ಪಿದವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಆ ಇಬ್ಬರು ಮಹಿಳೆಯರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಈ ಮಹಿಳೆಯರು ಉಪವಾಸ ಇದ್ದು ಬೆಟ್ಟ ಹತ್ತುತ್ತಿದ್ದ ಕಾರಣ ಪ್ರಜ್ಞೆ ತಪ್ಪಿ ಅಸ್ವಸ್ಥರಾಗಿದ್ದರು. ಇನ್ನುಳಿದಂತೆ ಮೂವರಿಗೆ ಕಾಲುಜಾರಿ ಸಣ್ಣಪುಟ್ಟ ಗಾಯಗಳಾಗಿದೆ. ಇವರನ್ನು ಪೊಲೀಸ್ ರಕ್ಷಣಾ ತಂಡ ರಕ್ಷಣೆ ಮಾಡಿ ತಮ್ಮ ಮನೆಗೆ ಕಳುಹಿಸಿ ಕೊಟ್ಟಿದೆ. ಆದರೆ ಕೆಲವು ಮಾಧ್ಯಮಗಳಲ್ಲಿ ಕಾಲ್ತುಳಿತ ಎಂಬ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದು, ಸತ್ಯಕ್ಕೆ ದೂರವಾದ ಮಾಹಿತಿ ಎಂದು ಎಸ್ಪಿ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಮಾಹಿತಿ ಬೇಕಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗಿ ವಿಕ್ರಂ ಅಮಟೆ ಸೂಚನೆ ನೀಡಿದ್ದಾರೆ.