ಕಾಫಿನಾಡಿನಲ್ಲಿ ಧಾರಾಕಾರ ಮಳೆ; ಬೃಹತ್ ಮರ ಧರಾಶಾಹಿ, ಕರೆಂಟ್ ಕಟ್, ಜನಜೀವನ ಅಸ್ತವ್ಯಸ್ತ - Chikkamagaluru Rain Update - CHIKKAMAGALURU RAIN UPDATE
🎬 Watch Now: Feature Video
Published : Jul 15, 2024, 7:16 PM IST
ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಇಂದು ಕೂಡ ಭಾರಿ ಮಳೆ ಸುರಿಯುತ್ತಿದ್ದು, ಮಲೆನಾಡಿನಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಮೂಡಿಗೆರೆ, ಚಾರ್ಮಾಡಿ ಕೊಟ್ಟಿಗೆಹಾರ, ಚಿಕ್ಕಮಗಳೂರು ನಗರ, ಕೊಪ್ಪ, ಎನ್ಆರ್ ಪುರ ಭಾಗಗಳಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಬಾರಿ ಗಾಳಿಯಿಂದಾಗಿ ಮೂಡಿಗೆರೆ, ಕೊಪ್ಪ ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ.
ನಗರದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ತುಂಬಾ ತೊಂದರೆ ಉಂಟಾಗುತ್ತಿದ್ದು, ವಾಹನ ಸಂಚಾರದಲ್ಲಿಯೂ ವ್ಯತ್ಯಯ ಕಂಡು ಬಂದಿದೆ. ಅಪಾಯದ ಮಟ್ಟ ಮೀರಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಹರಿಯುತ್ತಿದ್ದು, ಮಲೆನಾಡಿನ ಹಲವೆಡೆ ಉಕ್ಕಿ ಹರಿಯುತ್ತಿರುವ ಹಳ್ಳ ಕೊಳ್ಳಗಳಗಳಿಂದ ಜನರು ಹಳ್ಳದಾಟಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಕಳೆದ ರಾತ್ರಿಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಈ ಭಾಗದಲ್ಲಿಯೂ ಜನರು ತತ್ತರಿಸಿದ್ದಾರೆ. ಗಾಳಿ-ಮಳೆಗೆ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದಿದ್ದು, ಮೂಡಿಗೆರೆ ತಾಲೂಕಿನ ಕೋಗಿಲೆ ಗ್ರಾಮದ ಬಳಿ ಈ ಘಟನೆ ನಡೆದಿದೆ. ಶಾಲಾ-ಕಾಲೇಜಿನಿಂದ ಬರುವ ಮಕ್ಕಳು ಪರದಾಟ ನಡೆಸುತ್ತಿದ್ದು, ಸ್ಥಳೀಯರಿಂದ ಮರ ತೆರವು ಕಾರ್ಯ ಭರದಿಂದ ಸಾಗಿದೆ. ಮೂರು ಗಂಟೆಗಳ ನಿರಂತರ ಕಾರ್ಯಾಚರಣೆ ಮೂಲಕ ಮರ ತೆರವು ಕಾರ್ಯ ನಡೆಯಿತು.