ಕಡಲ ನಡುವೆ ಶೌರ್ಯ ಪ್ರದರ್ಶಿಸಿದ 'ಕೋಸ್ಟ್ ಗಾರ್ಡ್': ವಿಡಿಯೋ ನೋಡಿ

By ETV Bharat Karnataka Team

Published : Feb 24, 2024, 8:49 AM IST

Updated : Feb 24, 2024, 12:30 PM IST

thumbnail

ಮಂಗಳೂರು(ದಕ್ಷಿಣ ಕನ್ನಡ): ಕಡಲ ನಡುವೆ ಬೆಂಕಿ ಅವಘಡಕ್ಕೆ ಸಿಲುಕಿದ ಹಡಗಿನ ರಕ್ಷಣೆ, ಕಡಲ್ಗಳ್ಳರ ಹಡಗು ಪತ್ತೆ ಮತ್ತು ವಶ ಕಾರ್ಯಾಚರಣೆ, ನೀರಲ್ಲಿ ಮುಳುಗುತ್ತಿದ್ದ ಮೀನುಗಾರರನ್ನು ಹೆಲಿಕಾಫ್ಟರ್​​ ಹಾಗೂ ಇಂಟರ್‌ಸೆಪ್ಟರ್ ಬೋಟ್​ ಮೂಲಕ ಮೇಲಕ್ಕೆತ್ತಿ ಜೀವರಕ್ಷಣೆ, ಗುಂಡು ಹಾರಿಸುವಿಕೆ, ಬೋರ್ಡಿಂಗ್ - ಹೀಗೆ ಸಮುದ್ರದ ನಡುವೆ ಕೋಸ್ಟ್ ಗಾರ್ಡ್​ಗಳ ಸಾಹಸಮಯ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ ಮಂಗಳೂರಿನ ಎನ್‌ಎಂಪಿಎ ಬಳಿಯ ಕಡಲಿನಲ್ಲಿ ನಡೆಯಿತು.

ಎನ್‌ಎಂಪಿಎಯಿಂದ ಸುಮಾರು 15 ನಾಟಿಕಲ್ ಮೈಲು ದೂರದ ಸಮುದ್ರದ ನಡುವೆ ಈ ಅಣಕು ಕಾರ್ಯಾಚರಣೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಸಮ್ಮುಖದಲ್ಲಿ ನಡೆಯಿತು. ಕೋಸ್ಟ್‌ಗಾರ್ಡ್‌ನ ಈ  ರಕ್ಷಣಾ ಅಣಕು ಕಾರ್ಯಾಚರಣೆಯಲ್ಲಿ 2 ಇಂಟರ್​​ಸೆಪ್ಟರ್, 2 ಡ್ರಾನಿಯರ್ಸ್, 1 ಅತ್ಯಾಧುನಿಕ ಹೆಲಿಕಾಫ್ಟರ್​​, 6 ಹಡಗುಗಳು, ಒಂದು ಕಡಲಾಚೆಯ ಗಸ್ತು ಹಡಗು, 3 ವೇಗದ ಗಸ್ತು ನೌಕೆಗಳು ಕೋಸ್ಟ್ ಗಾರ್ಡ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ತಮ್ಮ ಶೌರ್ಯ ಪ್ರದರ್ಶಿಸಿದವು.

2018ರಿಂದ ಕರಾವಳಿ ಕಡಲಿನಲ್ಲಿ ಕೋಸ್ಟ್‌ಗಾರ್ಡ್‌ನ ಕಡಲಾಚೆಯ ಗಸ್ತು ಹಡಗಾಗಿ ಕಾರ್ಯಾಚರಿಸುತ್ತಿರುವ 'ವಿಕ್ರಂ'ನೊಳಗೆ ಪ್ರವೇಶಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಅವರನ್ನು ಕೋಸ್ಟ್‌ಗಾರ್ಡ್ ಗೌರವದೊಂದಿಗೆ ಸ್ವಾಗತಿಸಲಾಯಿತು. ಎನ್‌ಎಂಪಿಎಯಿಂದ ಸಮುದ್ರದ ಸುಮಾರು 15 ನಾಟಿಕಲ್ ಮೈಲಿಗೆ ತೆರಳಿದ ಬಳಿಕ ಅಣಕು ಕಾರ್ಯಾಚರಣೆ ಆರಂಭಗೊಂಡಿತು.

ಇದನ್ನೂ ಓದಿ: ಡಬ್ಲ್ಯುಪಿಎಲ್ 2024: ಶಾರುಖ್​​ ಭರ್ಜರಿ ಡ್ಯಾನ್ಸ್; 'ನಾರಿ ಶಕ್ತಿ' ಬಗ್ಗೆ ಎಸ್​ಆರ್​ಕೆ ಗುಣಗಾನ

ಕೋಸ್ಟ್‌ಗಾರ್ಡ್‌ನ ರಕ್ಷಣಾ ಕಾರ್ಯಾಚರಣೆಯ ಅಣಕಿನ ಭಾಗವಾಗಿ ಸಮುದ್ರ ಮಧ್ಯೆ ಹಡಗಿಗೆ ಬೆಂಕಿ ಬಿದ್ದಾಗ ಅದನ್ನು ವಿಕ್ರಂನಲ್ಲಿದ್ದ ಬೃಹತ್ ನೀರಿನ ಸ್ಪಿಂಕ್ಲರ್‌ನಿಂದ ಸುಮಾರು ಒಂದು ಕಿ.ಮೀ.ದೂರಕ್ಕೆ ನೀರು ಹಾಯಿಸಿ ನಂದಿಸುವ ಕಾರ್ಯ ನಡೆಯಿತು ಹಾಗೂ ಸಮುದ್ರದಲ್ಲಿ ಕಡಲ್ಗಳ್ಳರ ಹಡಗನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವ ವೇಳೆ ಕೋಸ್ಟ್ ಗಾರ್ಡ್ ರಕ್ಷಣಾ ಹಡಗಿನಿಂದ ಕೆಂಪು,  ಹಸಿರು ಬಣ್ಣದ ಗುಂಡು ಹಾರಾಟ, ನೀರಿನಲ್ಲಿ ಮುಳುಗೇಳುತ್ತಾ ಅಪಾಯದಲ್ಲಿ ಸಿಲುಕಿದ್ದ ನಾವಿಕರ ರಕ್ಷಣೆಗಾಗಿ ಆಗಸದಲ್ಲಿ ಅತ್ತಿತ್ತ ಹಾರಾಡುತ್ತಾ ರಕ್ಷಣೆಗೆ ಧಾವಿಸಿದ ಹೆಲಿಕಾಪ್ಟರ್‌ನ ಸಾಹಸಮಯ ದೃಶ್ಯ ಕಂಡುಬಂತು.

Last Updated : Feb 24, 2024, 12:30 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.