ನವದೆಹಲಿ: ಯೂಟ್ಯೂಬ್ ಶಾರ್ಟ್ಸ್ನಲ್ಲಿ ಮ್ಯೂಸಿಕ್ ವೀಡಿಯೊಗಳನ್ನು ರೀಮಿಕ್ಸ್ ಮಾಡಬಹುದಾದ ವೈಶಿಷ್ಟ್ಯವನ್ನು ಯೂಟ್ಯೂಬ್ ಪರಿಚಯಿಸಿದೆ. ಟಿಕ್ ಟಾಕ್ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಗೂಗಲ್ ಒಡೆತನದ ಯೂಟ್ಯೂಬ್ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಯೂಟ್ಯೂಬ್ ಕೊಲಾಬ್ (Collab) ಮತ್ತು ಫನ್ ಎಫೆಕ್ಟ್ಸ್ (fun effects) ನಂಥ ಹೊಸ ರೀಮಿಕ್ಸ್ ಸಾಧನಗಳನ್ನು ಶಾರ್ಟ್ಸ್ನಲ್ಲಿ ಪರಿಚಯಿಸಿತ್ತು.
"ಇಂದು ಶಾರ್ಟ್ಸ್ನಲ್ಲಿ ಮ್ಯೂಸಿಕ್ ವೀಡಿಯೊಗಳನ್ನು ರೀಮಿಕ್ಸ್ ಮಾಡುವ ವೈಶಿಷ್ಟ್ಯದೊಂದಿಗೆ ಇದನ್ನು ಸಂಪೂರ್ಣ ಹೊಸ ಹಂತಕ್ಕೆ ಕೊಂಡೊಯ್ಯಲಿದ್ದೇವೆ. ನಿಮ್ಮ ನೆಚ್ಚಿನ ಕಲಾವಿದರು ಮತ್ತು ಯೂಟ್ಯೂಬ್ನಲ್ಲಿ ಅವರ ಸಂಗೀತದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಸೃಜನಶೀಲರಾಗಲು ಇನ್ನೂ ಹೆಚ್ಚಿನ ಮಾರ್ಗಗಳನ್ನು ನಿಮಗಾಗಿ ಒದಗಿಸುತ್ತಿದ್ದೇವೆ" ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಶಾರ್ಟ್ಸ್ನಲ್ಲಿ ಮ್ಯೂಸಿಕ್ ವೀಡಿಯೊ ರೀಮಿಕ್ಸ್ ಮಾಡುವ ವಿಧಾನ: ಯೂಟ್ಯೂಬ್ ವೀಡಿಯೊದಿಂದ ನೇರವಾಗಿ ರೀಮಿಕ್ಸ್ ಮಾಡಲು ನಾಲ್ಕು ಆಪ್ಷನ್ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಲು "Remix" ಟ್ಯಾಪ್ ಮಾಡಿ: ಈಗ ಕಾಣಿಸುವ Sound, Green Screen, Cut and Collab ಇವುಗಳಲ್ಲಿ ನಿಮಗೆ ಬೇಕಾದುದನ್ನು ಆಯ್ಕೆ ಮಾಡಿ. ವೀಡಿಯೊದಿಂದ ಕೇವಲ ಧ್ವನಿಯನ್ನು ಮಾತ್ರ ತೆಗೆದುಕೊಂಡು ಅದನ್ನು ನಿಮ್ಮ ಶಾರ್ಟ್ಸ್ನಲ್ಲಿ ಬಳಸಬಹುದು. ಅಲ್ಲದೆ ಇತರ ಆಪ್ಷನ್ಗಳನ್ನು ಬಳಸಿ ನಿಮಗೆ ಬೇಕಾದಂತೆ ಮ್ಯೂಸಿಕ್ ವೀಡಿಯೊ ರೀಮಿಕ್ಸ್ ಮಾಡಬಹುದು.
ಯೂಟ್ಯೂಬ್ ಶಾರ್ಟ್ಸ್ ಅತ್ಯಂತ ಜನಪ್ರಿಯ ವೀಡಿಯೊ ಪ್ಲಾಟ್ಫಾರ್ಮ್ ಆಗಿ ಬೆಳವಣಿಗೆ ಹೊಂದಿದೆ. ಇದು ಪ್ರತಿದಿನ 50 ಬಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಶಾರ್ಟ್ಸ್ ನಲ್ಲಿನ ಹೊಸ ರೀಮಿಕ್ಸ್ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮದೇ ಆದ ಸಂಗೀತ ವೀಡಿಯೊಗಳ ಆವೃತ್ತಿಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಸೌಂಡ್, ಗ್ರೀನ್ ಸ್ಕ್ರೀನ್, ಕಟ್ ಮತ್ತು ಕೊಲಾಬ್ನಂತಹ ಆಯ್ಕೆಗಳೊಂದಿಗೆ ಬಳಕೆದಾರರು ತಮ್ಮ ಸೃಜನಶೀಲತೆಯನ್ನು ಬಳಸಿ ಶಾರ್ಟ್ಸ್ ಅನ್ನು ಪರ್ಸನಲೈಸ್ ಮಾಡಬಹುದು.
ಯೂಟ್ಯೂಬ್ ಶಾರ್ಟ್ಸ್ ಎಂಬುದು ನೀವು ಯೂಟ್ಯೂಬ್ ನಲ್ಲಿ ರಚಿಸಬಹುದಾದ ಅಥವಾ ವೀಕ್ಷಿಸಬಹುದಾದ ಲಂಬ, ಕಿರು-ರೂಪದ ವೀಡಿಯೊಗಳಾಗಿವೆ. ವೀಡಿಯೊ ವಿಭಾಗೀಕರಣ, ಅಪ್ಲಿಕೇಶನ್ ಆಧಾರಿತ ರೆಕಾರ್ಡಿಂಗ್ ಮತ್ತು ಸಂಗೀತ ಓವರ್ ಲೇಗಳಂಥ ವೈಶಿಷ್ಟ್ಯಗಳೊಂದಿಗೆ ನೀವು ಶಾರ್ಟ್ಸ್ ಅನ್ನು ಉತ್ತಮಗೊಳಿಸಬಹುದು. ಶಾರ್ಟ್ಸ್ 60 ಸೆಕೆಂಡುಗಳು ಅಥವಾ ಅದಕ್ಕಿಂತ ಕಡಿಮೆ ಇರುತ್ತವೆ. ಇವು ಇನ್ಸ್ಟಾಗ್ರಾಮ್ ರೀಲ್ಸ್ ಅಥವಾ ಸ್ನ್ಯಾಪ್ಚಾಟ್ಗಳಂತೆ ಕಣ್ಮರೆಯಾಗುವುದಿಲ್ಲ. ಜುಲೈ 2021 ರಲ್ಲಿ ಶಾರ್ಟ್ಸ್ ಜಾಗತಿಕವಾಗಿ 100 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಾರಂಭವಾಯಿತು.
ಇದನ್ನೂ ಓದಿ : ಚಂದ್ರ ಶಿಲೆಗಳ ವಿಶ್ಲೇಷಣಾ ಮಾಹಿತಿ ರವಾನಿಸಿದ ಜಪಾನ್ ನೌಕೆ: ಚಂದ್ರನ ಉಗಮ ಪತ್ತೆಗೆ ಸಹಕಾರಿ