ನ್ಯೂಯಾರ್ಕ್ : ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಯೂಟ್ಯೂಬ್ ಮತ್ತು ಫೇಸ್ ಬುಕ್ ಅಮೆರಿಕದಲ್ಲಿನ ವಯಸ್ಕರು ಅತಿ ಹೆಚ್ಚು ಬಳಸುವ ಆನ್ ಲೈನ್ ಪ್ಲಾಟ್ ಫಾರ್ಮ್ಗಳಾಗಿವೆ ಎಂದು ವರದಿಯೊಂದು ತಿಳಿಸಿದೆ. ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಸಂಶೋಧನೆಯ ಪ್ರಕಾರ, ಅಮೆರಿಕದ ಪ್ರತಿ ಹತ್ತು ವಯಸ್ಕರ ಪೈಕಿ ಎಂಟು ಜನ (ಶೇ 83) ಯೂಟ್ಯೂಬ್ ಬಳಸುತ್ತಾರೆ.
ಶೇಕಡಾ 68 ರಷ್ಟು ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಆನ್ಲೈನ್ ಕ್ಷೇತ್ರದಲ್ಲಿನ ಮುಂಚೂಣಿ ಕಂಪನಿಯಾಗಿದ್ದು, ಶೇಕಡಾ 47 ರಷ್ಟು ಯುಎಸ್ ವಯಸ್ಕರು ಇನ್ಸ್ಟಾಗ್ರಾಮ್ ಬಳಸುತ್ತಾರೆ. ಪ್ಯೂ ರಿಸರ್ಚ್ನ ಇತ್ತೀಚಿನ ಸಂಶೋಧನೆಗಳ ಪ್ರಕಾರ ಯುಎಸ್ ಹದಿಹರೆಯದವರಲ್ಲಿ ಯೂಟ್ಯೂಬ್ ಅತ್ಯಧಿಕ ಜನಪ್ರಿಯವಾಗಿದೆ ಎಂದು ತಿಳಿದು ಬಂದಿದೆ.
"ಯೂಟ್ಯೂಬ್ ಮತ್ತು ಫೇಸ್ಬುಕ್ ಇವೆರಡು ಮಾತ್ರ ಎಲ್ಲಾ ವಯಸ್ಸಿನ ಬಹುತೇಕ ಜನ ಬಳಸುವ ಎರಡು ವೇದಿಕೆಗಳಾಗಿವೆ. ಯೂಟ್ಯೂಬ್ ಬಳಕೆಯನ್ನು ಗಮನಿಸಿದರೆ ಕಿರಿಯರು ಮತ್ತು ಹಿರಿಯ ವಯಸ್ಕರ ನಡುವೆ ಇನ್ನೂ ದೊಡ್ಡ ವಯಸ್ಸಿನ ಅಂತರವಿದೆ. ಆದಾಗ್ಯೂ, ಫೇಸ್ಬುಕ್ ವಿಚಾರದಲ್ಲಿ ವಯಸ್ಸಿನ ಅಂತರವು ತುಂಬಾ ಚಿಕ್ಕದಾಗಿದೆ" ಎಂದು ಪ್ಯೂ ರಿಸರ್ಚ್ ಸೆಂಟರ್ನ ಸಂಶೋಧನಾ ಸಹಾಯಕ ನಿರ್ದೇಶಕ ಜೆಫ್ರಿ ಗಾಟ್ಫ್ರೆಡ್ ವರದಿಯಲ್ಲಿ ತಿಳಿಸಿದ್ದಾರೆ.
ಟಿಕ್ಟಾಕ್ ಬಳಕೆದಾರರ ಸಂಖ್ಯೆ 2021 ರಿಂದ ವೃದ್ಧಿಯಾಗಿದೆ ಎಂದು 2023 ರ ಮೇ-ಸೆಪ್ಟೆಂಬರ್ನಲ್ಲಿ ನಡೆಸಿದ 5,733 ಯುಎಸ್ ವಯಸ್ಕರ ಸಮೀಕ್ಷೆಯನ್ನು ಆಧರಿಸಿದ ಸಂಶೋಧನೆಗಳು ಹೇಳಿವೆ. ಒಂದು ಸಮಯದಲ್ಲಿ ಕೆಲ ಯುಎಸ್ ಸಂಸದರು ಟಿಕ್ ಟಾಕ್ ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದು ಗಮನಾರ್ಹ.
ಯುಎಸ್ ವಯಸ್ಕರಲ್ಲಿ ಮೂರನೇ ಒಂದು ಭಾಗದಷ್ಟು (ಶೇಕಡಾ 33) ಜನ ವೀಡಿಯೊ ಆಧಾರಿತ ಪ್ಲಾಟ್ ಫಾರ್ಮ್ ಅನ್ನು ಬಳಸುತ್ತಾರೆ. ಇದು 2021 ಕ್ಕೆ ಹೋಲಿಸಿದರೆ (ಶೇಕಡಾ 21) ಶೇಕಡಾ 12 ರಷ್ಟು ಹೆಚ್ಚಾಗಿದೆ. ಯುಎಸ್ ವಯಸ್ಕರಲ್ಲಿ ಸುಮಾರು ಶೇಕಡಾ 27 ರಿಂದ 35 ರಷ್ಟು ಜನ ಪಿಂಟರೆಸ್ಟ್, ಟಿಕ್ ಟಾಕ್, ಲಿಂಕ್ಡ್ಇನ್, ವಾಟ್ಸ್ಆ್ಯಪ್ ಮತ್ತು ಸ್ನ್ಯಾಪ್ ಚಾಟ್ ಅನ್ನು ಬಳಸುತ್ತಾರೆ.
ಇದಲ್ಲದೆ, ಐವರಲ್ಲಿ ಒಬ್ಬರು ಎಕ್ಸ್ (ಹಿಂದೆ ಟ್ವಿಟರ್) ಮತ್ತು ರೆಡ್ಡಿಟ್ ಅನ್ನು ಬಳಸುತ್ತಾರೆ ಎಂದು ವರದಿ ಹೇಳಿದೆ. ಪುರುಷರಿಗಿಂತ ಮಹಿಳೆಯರು ಪಿಂಟರೆಸ್ಟ್ (ಶೇಕಡಾ 50 ಮತ್ತು ಶೇಕಡಾ 19), ಟಿಕ್ ಟಾಕ್ (ಶೇಕಡಾ 40 ಮತ್ತು ಶೇಕಡಾ 25) ಮತ್ತು ಇನ್ ಸ್ಟಾಗ್ರಾಮ್ (ಶೇಕಡಾ 54 ಮತ್ತು ಶೇಕಡಾ 39) ಬಳಸುವ ಸಾಧ್ಯತೆ ಹೆಚ್ಚು ಎಂದು ವರದಿ ತೋರಿಸಿದೆ.
ಇದನ್ನೂ ಓದಿ : 2023ರಲ್ಲಿ $307 ಬಿಲಿಯನ್ ಆದಾಯ ಗಳಿಸಿದ ಗೂಗಲ್