ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸಂವಹನ ಆಧಾರಿತ ಉಪಗ್ರಹವಾದ ಜಿಸ್ಯಾಟ್-ಎನ್2 ಅನ್ನು ಸಿರಿವಂತ ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದ ಸ್ಪೇಸ್ ಎಕ್ಸ್ನ 'ಫಾಲ್ಕನ್-'9 ವ್ಯೋಮನೌಕೆಯು ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿದೆ.
ಅಮೆರಿಕದ ಕೇಪ್ ಕೆನವೆಎಲ್ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದ್ದ GSAT-N2 ಉಪಗ್ರಹವು ಸ್ಪೇಸ್ ಎಕ್ಸ್ನ ರಾಕೆಟ್ನ ಸಹಾಯದಿಂದ ನಿಗದಿತ ಕಕ್ಷೆಗೆ ಸೇರಿದೆ ಎಂದು ಇಸ್ರೋದ ವಾಣಿಜ್ಯ ಅಂಗಸಂಸ್ಥೆಯಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಮಂಗಳವಾರ ತಿಳಿಸಿದೆ.
4.7 ಟನ್ ತೂಕವಿದ್ದ ಈ ಜಿಎಸ್ಎಟಿ-ಎನ್2 ಹೈ-ಥ್ರೂಪುಟ್ (ಎಚ್ಟಿಎಸ್) ಉಪಗ್ರಹವು ಸೇರಬೇಕಿದ್ದ ಜಿಯೋ - ಸಿಂಕ್ರೋನಸ್ ಟ್ರಾನ್ಸ್ಫರ್ ಕಕ್ಷೆಯನ್ನು ಯಶಸ್ವಿಯಾಗಿ ಮುಟ್ಟಿದೆ. ತನ್ನ ಪಥದಲ್ಲಿ ಅದು ಪರಿಭ್ರಮಣೆ ನಡೆಸುತ್ತಿದೆ. ಉಪಗ್ರಹ ಉತ್ತಮ ಸ್ಥಿತಿಯಲ್ಲಿದೆ. ಇಸ್ರೋದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ಎಂಸಿಎಫ್) ಅದರ ನಿಯಂತ್ರಣ ಸಾಧಿಸಿದೆ ಎಂದು ಎನ್ಎಸ್ಐಎಲ್ ತನ್ನ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.
ಉಪಗ್ರಹದ ಉದ್ದೇಶವೇನು?: ಬಾಹ್ಯಾಕಾಶ ಸೇರಿರುವ ಜಿಎಸ್ಎಟಿ-ಎನ್2 ಉಪಗ್ರಹವು ದೇಶದ ಬ್ರಾಡ್ಬ್ಯಾಂಡ್ ಸೇವೆ ಮತ್ತು ವಿಮಾನಗಳಲ್ಲಿ ಇಂಟರ್ನೆಟ್ ಸೇವೆಯನ್ನು ಒದಗಿಸಲು ನೆರವಾಗಲಿದೆ. ಯೋಜನೆಯ ಜೀವಿತಾವಧಿ 14 ವರ್ಷಗಳಾಗಿದ್ದು, ಉಪಗ್ರಹವನ್ನು ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಿಂದ ನಿಯಂತ್ರಣ ಸಾಧಿಸಲಾಗಿದೆ. ಉಪಗ್ರಹವು ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೌರ ಫಲಕಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ ಅದು ವಿವರಿಸಿದೆ.
ಮೊದಲ ಉಡಾವಣೆಯಲ್ಲೇ ಸ್ಪೇಸ್ ಎಕ್ಸ್ ಯಶಸ್ವಿ: ಇಸ್ರೋ ನಿರ್ಮಿತ ಉಪಗ್ರಹವನ್ನು ಎಲಾನ್ ಮಸ್ಕ್ ಮಾಲೀಕತ್ವದ ಸ್ಪೇಸ್‌ಎಕ್ಸ್ ಸಂಸ್ಥೆಯು ಇದೇ ಮೊದಲ ಬಾರಿಗೆ ಉಡ್ಡಯನ ಮಾಡಿತ್ತು. ಮೊದಲ ಅವಕಾಶದಲ್ಲೇ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೂಲಕ ಯಶಸ್ಸು ಸಾಧಿಸಿದೆ.
ಪ್ರಸ್ತುತ ಭಾರತೀಯ ರಾಕೆಟ್‌ಗಳು 4 ಟನ್‌ಗಿಂತ ಹೆಚ್ಚು ತೂಕದ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಆದ್ದರಿಂದ ಇಸ್ರೋ ಎಲಾನ್ ಮಸ್ಕ್ ಅವರ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದೆ. ಈ ಹಿಂದೆ ಇಸ್ರೋ ಭಾರವಾದ ಉಪಗ್ರಹಗಳನ್ನು ಫ್ರಾನ್ಸ್‌ನ ಏರಿಯನ್ ಸ್ಪೇಸ್ ಕನ್ಸೋರ್ಟಿಯಂ ಮೂಲಕ ಉಡಾವಣೆ ಮಾಡುತ್ತಿತ್ತು.
ವಿಮಾನಗಳಲ್ಲಿ ಇಂಟರ್ನೆಟ್ ನಿಯಮಗಳು: ಅಂತಾರಾಷ್ಟ್ರೀಯ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿದಾಗ ಇಂಟರ್ನೆಟ್ ಸ್ಥಗಿತವಾಗುತ್ತದೆ. ಕಾರಣ, ಭಾರತವು ಈ ಸೇವೆಯನ್ನು ಅನುಮತಿಸುವುದಿಲ್ಲ. ಆದರೆ, ಇತ್ತೀಚೆಗೆ ಭಾರತೀಯ ವಿಮಾನಗಳಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲು ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ. GSAT-N2 ಉಪಗ್ರಹದ ಮೂಲಕ ಈ ಸೇವೆಯನ್ನು ನೀಡಬಹುದಾಗಿದೆ.
ಇದನ್ನೂ ಓದಿ: ಭಾರತದ ಉಪಗ್ರಹ ಹೊತ್ತೊಯ್ದ ಸ್ಪೇಸ್ ಎಕ್ಸ್ ರಾಕೆಟ್; ಮಸ್ಕ್ ಜೊತೆ ಇಸ್ರೋ ಕೈಜೋಡಿಸಿದ್ದು ಏಕೆ?