ಕೇಪ್ ಕೆನವೆರಾಲ್: ಗಗನಚುಂಬಿ ಕಟ್ಟಡದಷ್ಟು ದೊಡ್ಡದಾದ ಕ್ಷುದ್ರಗ್ರಹವೊಂದು ಶುಕ್ರವಾರ ಭೂಮಿಯಿಂದ 1.7 ಮಿಲಿಯನ್ ಮೈಲಿಗಳಷ್ಟು ಹತ್ತಿರದಲ್ಲಿ ಹಾದು ಹೋಗಲಿದೆ ಎಂದು ನಾಸಾ ಹೇಳಿದೆ. ಆದಾಗ್ಯೂ, ಇದು ಭೂಮಿಯಿಂದ ಚಂದ್ರನಿಗೆ ಇರುವ ದೂರದ ಏಳು ಪಟ್ಟು ದೂರದಲ್ಲಿ ಹಾದು ಹೋಗುವುದರಿಂದ ಅದು ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿಲ್ಲ.
ನಾಸಾದ ಸೆಂಟರ್ ಫಾರ್ ನಿಯರ್ ಅರ್ಥ್ ಆಬ್ಜೆಕ್ಟ್ ಸ್ಟಡೀಸ್ ಅಂದಾಜಿನ ಪ್ರಕಾರ ಈ ಬಾಹ್ಯಾಕಾಶ ಬಂಡೆಯು 690 ಅಡಿಗಳಿಂದ 1,575 ಅಡಿ (210 ಮೀಟರ್ ಮತ್ತು 480 ಮೀಟರ್) ಉದ್ದವಿದೆ. ಈ ಕ್ಷುದ್ರಗ್ರಹವು ಗಾತ್ರದಲ್ಲಿ ನ್ಯೂಯಾರ್ಕ್ ನಗರದ ಎಂಪೈರ್ ಸ್ಟೇಟ್ ಕಟ್ಟಡ ಅಥವಾ ಚಿಕಾಗೋದ ವಿಲ್ಲೀಸ್ ಟವರ್ನಷ್ಟು ದೊಡ್ಡದಾಗಿದೆ.
2008 ರಲ್ಲಿ ಪತ್ತೆಯಾದ ಈ ಕ್ಷುದ್ರಗ್ರಹಕ್ಕೆ 2008 ಓಎಸ್ 7 (2008 OS7) ಎಂದು ಹೆಸರಿಸಲಾಗಿದೆ. ಇದು 2032 ರವರೆಗೆ ಮತ್ತೆ ಭೂಮಿಯ ಹತ್ತಿರಕ್ಕೆ ಬರಲಾರದು. ಈ ನಿರುಪದ್ರವಿ ಕ್ಷುದ್ರಗ್ರಹವು ಈ ವಾರ ಭೂಮಿಗೆ ಹತ್ತಿರ ಬರುವ ಮೂರು ಕ್ಷುದ್ರಗ್ರಹಗಳಲ್ಲೊಂದಾಗಿದೆ. ಒಟ್ಟಾರೆ ಮೂರು ಸಣ್ಣ ಕ್ಷುದ್ರಗ್ರಹಗಳು ಶುಕ್ರವಾರ ಭೂಮಿಯ ಹತ್ತಿರ ಹಾದು ಹೋಗಲಿವೆ. ಇವು ಹತ್ತಾರು ಮೀಟರ್ಗಳಿಗಿಂತ ಹೆಚ್ಚು ದೊಡ್ಡದಾಗಿಲ್ಲ. ಶನಿವಾರ ಇನ್ನೂ ಎರಡು ಕ್ಷುದ್ರಗ್ರಹಗಳು ಭೂಮಿಗೆ ಹತ್ತಿರ ಬರಲಿವೆ. ಭಾನುವಾರ, 2008 0S7 ನ ಅರ್ಧದಷ್ಟು ಗಾತ್ರದ ಕ್ಷುದ್ರಗ್ರಹವು 4.5 ಮಿಲಿಯನ್ ಮೈಲಿ (7.3 ಮಿಲಿಯನ್ ಕಿಲೋಮೀಟರ್) ದೂರದಲ್ಲಿ ಹಾದು ಹೋಗಲಿದೆ.
ಕ್ಷುದ್ರಗ್ರಹಗಳು ಸುಮಾರು 4.6 ಬಿಲಿಯನ್ ವರ್ಷಗಳ ಹಿಂದೆ ಸೌರವ್ಯೂಹ ಮತ್ತು ಅದರ ಗ್ರಹಗಳ ರಚನೆಯ ನಂತರ ಉಳಿದ ವಸ್ತುಗಳಿಂದ ಸೃಷ್ಟಿಯಾದ ಕಲ್ಲಿನ ಅವಶೇಷಗಳಾಗಿವೆ. ನಾಸಾ ಪ್ರಕಾರ, ಹೆಚ್ಚಿನ ಕ್ಷುದ್ರಗ್ರಹಗಳು ಮಂಗಳ ಮತ್ತು ಗುರುಗ್ರಹದ ನಡುವೆ ಇರುವ ಮುಖ್ಯ ಕ್ಷುದ್ರಗ್ರಹ ಪಟ್ಟಿಯಿಂದ ಹುಟ್ಟಿಕೊಂಡಿವೆ. ಪ್ರಸ್ತುತ 1 ಮಿಲಿಯನ್ಗಿಂತ ಹೆಚ್ಚು ಕ್ಷುದ್ರ ಗ್ರಹಗಳು ಬಾಹ್ಯಾಕಾಶದಲ್ಲಿವೆ ಎಂದು ನಾಸಾ ಹೇಳಿದೆ.
ಕ್ಷುದ್ರಗ್ರಹಗಳು ಸಾಮಾನ್ಯವಾಗಿ ಸೂರ್ಯನನ್ನು ಚಪ್ಪಟೆಯಾದ ಅಥವಾ ಅಂಡಾಕಾರದ ವೃತ್ತಗಳಲ್ಲಿ ಸುತ್ತುತ್ತವೆ. ಅಲ್ಲದೇ ಅವು ಆಗಾಗ ಅನಿಯಮಿತವಾಗಿ ತಿರುಗಿ ಬಾಹ್ಯಾಕಾಶದ ಮೂಲಕ ಬೀಳುತ್ತವೆ. ಕ್ಷುದ್ರಗ್ರಹಗಳನ್ನು ಸಾಮಾನ್ಯವಾಗಿ ಸಣ್ಣ ಗ್ರಹಗಳು ಎಂದೂ ಕರೆಯಲಾಗುತ್ತದೆ. ಇವು ಸುಮಾರು 326 ಮೈಲಿ (525 ಕಿಲೋಮೀಟರ್) ವ್ಯಾಸವನ್ನು ಹೊಂದಿರುವ ಅತಿದೊಡ್ಡ ಗಾತ್ರದಿಂದ ಹಿಡಿದು 33 ಅಡಿ (10 ಮೀಟರ್) ಗಿಂತ ಕಡಿಮೆ ಉದ್ದದ ಗಾತ್ರದ್ದಾಗಿರಬಹುದು.
ಇದನ್ನೂ ಓದಿ : ಡಿಸೆಂಬರ್ ತ್ರೈಮಾಸಿಕದಲ್ಲಿ ಐಪೋನ್ ಮಾರಾಟದಿಂದ ಆ್ಯಪಲ್ಗೆ $69.7 ಆದಾಯ