ಮುಂಬೈ (ಮಹಾರಾಷ್ಟ್ರ): ದೇಶದ ಗ್ರಾಹಕರಿಗೆ 5ಜಿ ನೆಟ್‌ವರ್ಕ್ ನೀಡುವ ಟೆಲಿಕಾಂ ಸಂಸ್ಥೆಗಳ ಪೈಕಿ ರಿಲಯನ್ಸ್ ಜಿಯೋ ಮುಂಚೂಣಿಯಲ್ಲಿದೆ. ತ್ವರಿತ ಮತ್ತು ಅತಿ ವೇಗದ ಕಾರ್ಯಕ್ಷಮತೆಯಲ್ಲಿ ಬೇರೆ ಯಾವುದೇ ಸಂಸ್ಥೆಗಳು ಜಿಯೋವನ್ನು ಮೀರಲು ಸಾಧ್ಯವಾಗುತ್ತಿಲ್ಲ ಎಂದು ಬ್ರಾಡ್ಬಾಂಡ್ ಟೆಸ್ಟಿಂಗ್ ಕಂಪನಿ ಓಕ್ಲಾ ತಿಳಿಸಿದೆ.
ಈ ವರ್ಷದ ಫೆಬ್ರವರಿ 29 ರ ಹೊತ್ತಿಗೆ ಭಾರತದಲ್ಲಿ 4.25 ಲಕ್ಷ ಬೇಸ್ ಟ್ರಾನ್ಸ್‌ಸಿವರ್ ಸ್ಟೇಷನ್‌ಗಳನ್ನು (ಬಿಟಿಎಸ್) ಸ್ಥಾಪಿಸಲಾಗಿದೆ. ಅದರಲ್ಲಿ 80 ಪ್ರತಿಶತದಷ್ಟು ನೆಟ್‌ವರ್ಕ್ ರಿಲಯನ್ಸ್ ಜಿಯೋಗೆ ಸೇರಿದೆ ಟೆಲಿಕಾಂ ಇಲಾಖೆ ತಿಳಿಸಿದೆ.
ರಿಲಯನ್ಸ್ ಜಿಯೋದ ಜೊತೆಗೆ ಭಾರ್ತಿ ಏರ್‌ಟೆಲ್ ಕೂಡ ದೇಶದಲ್ಲಿ 5ಜಿ ನೆಟ್‌ವರ್ಕ್ ವಿಸ್ತರಿಸಲು ಗಣನೀಯವಾಗಿ ಹೂಡಿಕೆ ಮಾಡಿದೆ. ಈ ಪ್ರಯತ್ನ ಫಲ ನೀಡಿದೆ. ಭಾರತವು 5ಜಿ ಲಭ್ಯತೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿದೆ. 2023 ರಲ್ಲಿ 5 ಜಿ ಜಾರಿಯಾದ ಮೊದಲ ಹಂತದಲ್ಲಿ ಶೇಕಡಾ 28.1 ರಿಂದ ನಾಲ್ಕನೇ ಕ್ವಾರ್ಟರ್ನಲ್ಲಿ ಅದು ಶೇಕಡಾ 52.0 ಪ್ರತಿಶತಕ್ಕೆ ಏರಿಕೆ ಕಂಡಿದೆ. ಆರಂಭದಿಂದಲೂ 5ಜಿ (5G SA) ನೆಟ್‌ವರ್ಕ್ ಗ್ರಾಹಕರಿಗೆ ತಲುಪಿಸುವಲ್ಲಿ ರಿಲಯನ್ಸ್ ಜಿಯೋವು ಎಲ್ಲ ಟೆಲಿಕಾಂಗಳಿಗಿಂತ ಮುಂದಿದೆ.
ಜಿಯೋದ 5ಜಿ ವ್ಯಾಪ್ತಿಯು ಅದರ ಲಭ್ಯತೆಯಿಂದಾಗಿ ಬಳಕೆದಾರರಲ್ಲಿ ಶೇಕಡಾ 68.8ರಷ್ಟು ದಾಖಲಿಸಿದೆ. ಪ್ರತಿಸ್ಪರ್ಧಿಯಾದ ಏರ್‌ಟೆಲ್ ಶೇಕಡಾ 30.3 ರಷ್ಟು ಗ್ರಾಹಕರನ್ನು ಗಳಿಸಿದೆ. ಕಡಿಮೆ ಬ್ಯಾಂಡ್ (700 MHz) ಮತ್ತು ಮಿಡ್ ಬ್ಯಾಂಡ್ (3.5 GHz) ಸ್ಪೆಕ್ಟ್ರಮ್‌ಗಳಿಂದ ವ್ಯಾಪಕವಾದ ಕವರೇಜ್, ಫೈಬರ್ ನೆಟ್‌ವರ್ಕ್‌ನೊಂದಿಗೆ ರಿಲಯನ್ಸ್ ಜಿಯೋ ತನ್ನ ಚಂದಾದಾರರಿಗೆ ಅಧಿಕ ವೇಗ ಮತ್ತು ತಡೆರಹಿತ ನೆಟ್‌ವರ್ಕ್ ನೀಡುವಲ್ಲಿ ಯಶಸ್ವಿಯಾಗಿದೆ.
ಸಾಮಾನ್ಯ ಬಳಕೆಯಲ್ಲಿ ಮಾತ್ರವಲ್ಲದೇ ರಿಲಯನ್ಸ್ ಜಿಯೋದ 5ಜಿ ನೆಟ್‌ವರ್ಕ್ ವೀಡಿಯೊ ಸ್ಟ್ರೀಮಿಂಗ್ ಮತ್ತು ಮೊಬೈಲ್ ಗೇಮಿಂಗ್‌ನಲ್ಲಿ ಸುಧಾರಿತ ಸೇವೆ ನೀಡಿದೆ. ಅದರ ವೇಗವಾದ ನೆಟ್ವರ್ಕ್ನಿಂದಾಗಿ ವಿಡಿಯೋಗಳ ಆರಂಭಿಕ ಸಮಯ ಭಾರೀ ಪ್ರಮಾಣದಲ್ಲಿ ಕಡಿತವಾಗಿದೆ. ಬಫರಿಂಗ್, ನೆಟ್‌ವರ್ಕ್ ಅಡೆತಡೆ ಇಲ್ಲವಾಗಿ ಸಲೀಸಾದ ಸ್ಟ್ರೀಮಿಂಗ್ ಅನುಭವವನ್ನು ಗ್ರಾಹಕರು ಪಡೆಯುತ್ತಿರುದಾಗಿ ಸ್ಪೀಡ್‌ಟೆಸ್ಟ್ ಸಂಸ್ಥೆ ಹೇಳಿದೆ.
ರಿಲಯನ್ಸ್ ಜಿಯೊದ 5ಜಿ ನೆಟ್‌ವರ್ಕ್ ಏರ್‌ಟೆಲ್‌ನ 5ಜಿ ನೆಟ್‌ವರ್ಕ್‌ಗಿಂತ ಮುಂದಿದೆ. ಜಿಯೋ 1.14 ಸೆಕೆಂಡುಗಳ ವಿಡಿಯೋ ಸ್ಟ್ರೀಮಿಂಗ್ ಮಾಡಿದರೆ, ಏರ್‌ಟೆಲ್ 1.99 ಸೆಕೆಂಡು ಸಮಯ ಪಡೆಯುತ್ತದೆ. ಜಿಯೋ 4ಜಿಯಿಂದ 5ಜಿ ಗೆ ವೀಡಿಯೊ ಪ್ರಾರಂಭದ ಸಮಯವು 0.85 ಸೆಕೆಂಡುಗಳಷ್ಟು ಕಡಿತವಾಗಿದೆ.
ಇದನ್ನೂ ಓದಿ: ಜಿಯೋ ಬಂಪರ್ ಆಫರ್: ಕೇವಲ ₹49 ರೂ.ಗಳಲ್ಲೇ IPL ಪಂದ್ಯಗಳನ್ನು ವೀಕ್ಷಿಸಿ! - Jio Cricket Plan