ನವದೆಹಲಿ: ತ್ವರಿತವಾಗಿ ಎಲೆಕ್ಟ್ರಾನಿಕ್ಸ್ ಟೆಸ್ಟಿಂಗ್ ಮಾಡುವ ಸರ್ಕಾರದ ನಿರ್ಧಾರ ಮೂಲ ಸಲಕರಣೆ ತಯಾರಕರು (ಒಇಎಂ) ತಮ್ಮ ಉತ್ಪನ್ನಗಳಿಗೆ ಅತ್ಯಂತ ಸೂಕ್ತವಾದ ಪರೀಕ್ಷಾ ವಿಧಾನವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಮಾರುಕಟ್ಟೆಗೆ ತಮ್ಮ ಎಲೆಕ್ಟ್ರಾನಿಕ್ ವಸ್ತುಗಳ ಬಿಡುಗಡೆಯನ್ನು ತ್ವರಿತಗೊಳಿಸುತ್ತದೆ ಎಂದು ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಸೋಮವಾರ ತಿಳಿಸಿದೆ.
2021 ರ ಕಡ್ಡಾಯ ನೋಂದಣಿ ಆದೇಶ (ಸಿಆರ್ಒ) ಅಡಿ ಉತ್ಪನ್ನಗಳಿಗೆ ಹೆಚ್ಚು ಪರಿಣಾಮಕಾರಿ ಸಮಾನಾಂತರ ಪರೀಕ್ಷಾ ಪ್ರಕ್ರಿಯೆಯನ್ನು ಸರ್ಕಾರ ಇತ್ತೀಚೆಗೆ ಪರಿಚಯಿಸಿದೆ. ಈ ಹೊಸ ವಿಧಾನವು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಪರೀಕ್ಷಿಸಲು ಮತ್ತು ನೋಂದಾಯಿಸಲು ಅಗತ್ಯವಿರುವ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಈ ಹಿಂದೆ ಇದ್ದ 16 - 20 ವಾರಗಳಿಂದ ಕೇವಲ 8 - 12 ವಾರಗಳಿಗೆ ಈ ಪ್ರಕ್ರಿಯೆ ಇಳಿಕೆಯಾಗಲಿದೆ.
"ಈ ಬೆಳವಣಿಗೆಯು ಒಇಎಂಗಳಿಗೆ ತಮ್ಮ ಉತ್ಪನ್ನಗಳಿಗೆ ಅತ್ಯಂತ ಸೂಕ್ತವಾದ ಪರೀಕ್ಷಾ ವಿಧಾನವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಪ್ರಮಾಣೀಕರಣದ ಸಮಯವನ್ನು ಕಡಿಮೆ ಮಾಡುತ್ತದೆ, ಮಾರುಕಟ್ಟೆಗೆ ಬಿಡುಗಡೆ ಮಾಡುವ ವಿಳಂಬ ಕಡಿಮೆ ಮಾಡುತ್ತದೆ ಮತ್ತು ಅಂತಿಮವಾಗಿ ಉದ್ಯಮಕ್ಕೆ ಹೆಚ್ಚು ಅನುಕೂಲಕರ ವ್ಯಾಪಾರ ವಾತಾವರಣಕ್ಕೆ ಕೊಡುಗೆ ನೀಡುತ್ತದೆ" ಎಂದು ಐಸಿಇಎ ಅಧ್ಯಕ್ಷ ಪಂಕಜ್ ಮೊಹಿಂದ್ರೂ ಹೇಳಿದರು.
ಯಾವುದೇ ಹೊಸ ಎಲೆಕ್ಟ್ರಾನಿಕ್ ವಸ್ತುಗಳ ಬಿಡುಗಡೆಗೆ ಅಗತ್ಯವಾದ ಪರೀಕ್ಷಾ ಪ್ರಮಾಣಪತ್ರಗಳನ್ನು ಪಡೆಯುವಲ್ಲಿ ಅನಗತ್ಯ ವಿಳಂಬದ ಬಗ್ಗೆ ಐಸಿಇಎ ನಿರಂತರವಾಗಿ ಉದ್ಯಮದ ಕಳವಳಗಳನ್ನು ವ್ಯಕ್ತಪಡಿಸುತ್ತಿದೆ. ಈ ನಿಟ್ಟಿನಲ್ಲಿ ಬಿಐಎಸ್, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ), ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (ಎಂಇಐಟಿವೈ) ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ (ಡಿಒಸಿಎ) ನಂತಹ ಸಂಬಂಧಿತ ಸರ್ಕಾರಿ ಸಂಸ್ಥೆಗಳೊಂದಿಗೆ ಉನ್ನತ ಉದ್ಯಮ ಸಂಸ್ಥೆ ಐಸಿಇಎ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.
ಸೆಪ್ಟೆಂಬರ್ 2022 ರಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಮೊಬೈಲ್ ಫೋನ್ಗಳನ್ನು ಗಮನದಲ್ಲಿಟ್ಟುಕೊಂಡು ಎಲೆಕ್ಟ್ರಾನಿಕ್ ವಸ್ತುಗಳ ಸಮಾನಾಂತರ ಪರೀಕ್ಷೆಯ ಕಾರ್ಯಸಾಧ್ಯತೆ ನಿರ್ಣಯಿಸಲು ಪ್ರಾಯೋಗಿಕ ಪ್ರಕ್ರಿಯೆಯನ್ನು ನಡೆಸಿತ್ತು. ಅದರ ಯಶಸ್ಸಿನ ನಂತರ, ಬಿಐಎಸ್ ಈ ವಿಧಾನವನ್ನು ವೈರ್ಲೆಸ್ ಇಯರ್ ಫೋನ್ಗಳು, ಹೆಡ್ಫೋನ್ಗಳು, ಲ್ಯಾಪ್ಟಾಪ್ಗಳು, ನೋಟ್ ಬುಕ್ಗಳು, ಟ್ಯಾಬ್ಲೆಟ್ಗಳು ಮತ್ತು ಮೊಬೈಲ್ ಫೋನ್ಗಳಂಥ 64 ಸಿಆರ್ಒ-ಅಧಿಸೂಚಿತ ಉತ್ಪನ್ನಗಳಿಗೆ ವಿಸ್ತರಿಸಿತ್ತು. ಜನವರಿ 9 ರಿಂದ ಬಿಐಎಸ್ ಅಧಿಕೃತವಾಗಿ ಸಮಾನಾಂತರ ಪರೀಕ್ಷೆಯನ್ನು ಶಾಶ್ವತವಾಗಿಸಿದೆ.
ಇದನ್ನೂ ಓದಿ : ಜಾಗತಿಕ ಪಿಸಿ ಮಾರಾಟ ಶೇ 14 ರಷ್ಟು ಕುಸಿತ; ಅಧ್ಯಯನ ವರದಿ