ನವದೆಹಲಿ: ಯೂಟ್ಯೂಬ್ನ ಜಾಹೀರಾತು ಆದಾಯದ ಪಾಲು ಪಡೆಯುವ ಪ್ರತೀ ನಾಲ್ವರು ಯೂಟ್ಯೂಬ್ ವೀಡಿಯೊ ಕ್ರಿಯೇಟರ್ಗಳ ಪೈಕಿ ಒಬ್ಬರು ಶಾರ್ಟ್ಸ್ ವೀಡಿಯೊಗಳಿಂದ ಆದಾಯ ಗಳಿಸುತ್ತಿದ್ದಾರೆ ಎಂದು ಕಂಪನಿ ಗುರುವಾರ ಹೇಳಿದೆ. ಕಳೆದ ವರ್ಷ ಶಾರ್ಟ್ಸ್ನಲ್ಲಿ ಆದಾಯ ಹಂಚಿಕೆಯನ್ನು ಜಾರಿಗೊಳಿಸಿದಾಗಿನಿಂದ, ಯೂಟ್ಯೂಬ್ ಪಾರ್ಟನರ್ ಪ್ರೋಗ್ರಾಂ (ವೈಪಿಪಿ) ಅಡಿಯಲ್ಲಿನ ಶೇಕಡಾ 25ಕ್ಕಿಂತ ಹೆಚ್ಚು ಚಾನೆಲ್ಗಳು ಈಗ ರೆವಿನ್ಯೂ ಸ್ಟ್ರೀಮ್ ಮೂಲಕ ಆದಾಯ ಗಳಿಸುತ್ತಿವೆ.
ಶಾರ್ಟ್ಸ್ ಅರ್ಹತಾ ಮಿತಿಗಳನ್ನು ಪೂರೈಸುವ ಮೂಲಕ ವೈಪಿಪಿಗೆ ಸೇರಿದ ಕ್ರಿಯೇಟರ್ಗಳ ಪೈಕಿ ಶೇಕಡಾ 80ಕ್ಕೂ ಹೆಚ್ಚು ಜನರು ಈಗ ಯೂಟ್ಯೂಬ್ನಲ್ಲಿ ಇತರ ವೈಪಿಪಿ ಹಣಗಳಿಕೆ ಮಾರ್ಗಗಳ ಮೂಲಕ ಹಣ ಗಳಿಸುತ್ತಿದ್ದಾರೆ. ದೀರ್ಘ-ರೂಪದ ಜಾಹೀರಾತು, ಫ್ಯಾನ್ ಫಂಡಿಂಗ್, ಯೂಟ್ಯೂಬ್ ಪ್ರೀಮಿಯಂ, ಬ್ರಾಂಡ್ ಕನೆಕ್ಟ್, ಶಾಪಿಂಗ್ ಮತ್ತು ಇತರ ವೈಶಿಷ್ಟ್ಯಗಳು ಇದರಲ್ಲಿ ಸೇರಿವೆ ಎಂದು ಗೂಗಲ್ ಒಡೆತನದ ಯೂಟ್ಯೂಬ್ ಪ್ಲಾಟ್ಫಾರ್ಮ್ ಹೇಳಿದೆ.
"ಇದರರ್ಥ ಶಾರ್ಟ್ಸ್ ಕ್ರಿಯೇಟರ್ಗಳಿಗೆ ಪ್ಲಾಟ್ಫಾರ್ಮ್ನಲ್ಲಿ ಈಗ ಹಣ ಗಳಿಕೆಯ ಇತರ ಮಾರ್ಗಗಳು ಮುಕ್ತವಾಗಿದ್ದು, ಕ್ರಿಯೇಟರ್ಗಳು ಲಾಭ ಗಳಿಸುತ್ತಿದ್ದಾರೆ" ಎಂದು ಕಂಪನಿ ತಿಳಿಸಿದೆ. ಕಳೆದ ಮೂರು ವರ್ಷಗಳಲ್ಲಿ ಯೂಟ್ಯೂಬ್ ಕ್ರಿಯೇಟರ್ಗಳು, ಕಲಾವಿದರು ಮತ್ತು ಮಾಧ್ಯಮ ಕಂಪನಿಗಳಿಗೆ 70 ಬಿಲಿಯನ್ ಡಾಲರ್ ಪಾವತಿಸಿದೆ.
"ಶಾರ್ಟ್ಸ್ನಲ್ಲಿ ಸರಾಸರಿ 70 ಬಿಲಿಯನ್ ದೈನಂದಿನ ವೀಕ್ಷಣೆಗಳು ಮತ್ತು ಹಣ ಗಳಿಸುವ ಹೊಸ ಮಾರ್ಗಗಳೊಂದಿಗೆ, ಶಾರ್ಟ್ಸ್ ಸಮುದಾಯವು ಹೊಸ ರೀತಿಯ ಸೃಜನಶೀಲತೆ ಮತ್ತು ಪ್ಲಾಟ್ ಫಾರ್ಮ್ನಲ್ಲಿ ಹೊಸ ಮಾರ್ಗಗಳೊಂದಿಗೆ ಅಭಿವೃದ್ಧಿ ಹೊಂದಲು ಪ್ರಾರಂಭಿಸುತ್ತಿದೆ" ಎಂದು ಯೂಟ್ಯೂಬ್ ಹೇಳಿದೆ.
ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಕ್ರಿಯೇಟರ್ ಅಲನ್ ಚಿಕಿನ್ ಚೌ, ಶಾರ್ಟ್ಸ್ನಲ್ಲಿ ಆದಾಯ ಹಂಚಿಕೆಯು ನಿಜವಾಗಿಯೂ ದೊಡ್ಡ ಪರಿವರ್ತನೆ ತಂದಿದೆ ಎಂದು ಹೇಳಿದರು. ಅಲನ್ ಚಿಕಿನ್ ಚೌ ಯೂಟ್ಯೂಬ್ನಲ್ಲಿ 38.7 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ.
"ಶಾರ್ಟ್ಸ್ ಮಾದರಿಯ ವೀಡಿಯೊಗಳನ್ನು ತಯಾರಿಸುವ ಕೆಲ ಆರಂಭಿಕ ಕ್ರಿಯೇಟರ್ಗಳಲ್ಲಿ ಒಬ್ಬನಾಗಿರುವ ಮತ್ತು ಯುಎಸ್ನಲ್ಲಿ ಅತ್ಯಧಿಕ ವೀಕ್ಷಣೆ ಹೊಂದಿದ ಚಾನೆಲ್ ಒಂದನ್ನು ಹೊಂದಿರುವ ನಾನು, ಶಾರ್ಟ್ಸ್ ಮಾದರಿಯು ಏನೆಲ್ಲ ಬದಲಾವಣೆಗಳನ್ನು ತಂದಿದೆ ಎಂಬುದನ್ನು ಕಂಡಿದ್ದೇನೆ. ಆದರೆ ಆದಾಯ ಹಂಚಿಕೆ ಯೋಜನೆಯು ನನ್ನ ವಹಿವಾಟನ್ನು ಸುಸ್ಥಿರವಾಗಿ ಬೆಳೆಯಲು ಸಹಾಯ ಮಾಡಿದೆ" ಎಂದು ಅವರು ತಿಳಿಸಿದರು.
ಕಂಪನಿಯು 16 ವರ್ಷಗಳ ಹಿಂದೆ ವೈಪಿಪಿಯನ್ನು ಪರಿಚಯಿಸಿತ್ತು. ಕೇವಲ ಬೆರಳೆಣಿಕೆಯಷ್ಟು ಕ್ರಿಯೇಟರ್ಗಳಿಂದ ಪ್ರಾರಂಭಿಸಿ ಇಂದು ಜಾಗತಿಕವಾಗಿ 3 ದಶಲಕ್ಷಕ್ಕೂ ಹೆಚ್ಚು ಯೂಟ್ಯೂಬ್ ಕ್ರಿಯೇಟರ್ಗಳಿದ್ದಾರೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: 'ಗ್ರೋಕ್' ಚಾಟ್ಬಾಟ್ ಎಲ್ಲ ಪ್ರೀಮಿಯಂ ಬಳಕೆದಾರರಿಗೆ ಶೀಘ್ರ ಲಭ್ಯ: ಎಲೋನ್ ಮಸ್ಕ್ - AI chatbot Grok