ನವದೆಹಲಿ: ಭಾರತದಲ್ಲಿ ಇಂಟರ್ ನೆಟ್ ಚಂದಾದಾರರ ಸಂಖ್ಯೆ 2023 ರ ಡಿಸೆಂಬರ್ ಅಂತ್ಯದ ವೇಳೆಗೆ 936.16 ಮಿಲಿಯನ್ (93 ಕೋಟಿ)ಗೆ ತಲುಪಿದ್ದು, ತ್ರೈಮಾಸಿಕದಲ್ಲಿ ಶೇ 1.96 ರಷ್ಟು ಬೆಳವಣಿಗೆಯಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ ಇಂಟರ್ ನೆಟ್ ಬಳಕೆದಾರರ ಸಂಖ್ಯೆ 918.19 ಮಿಲಿಯನ್ ಆಗಿತ್ತು ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಮಂಗಳವಾರ ತಿಳಿಸಿದೆ.
936.16 ಮಿಲಿಯನ್ ಇಂಟರ್ ನೆಟ್ ಚಂದಾದಾರರ ಪೈಕಿ ವೈರ್ಡ್ ಇಂಟರ್ ನೆಟ್ ಚಂದಾದಾರರ ಸಂಖ್ಯೆ 38.57 ಮಿಲಿಯನ್ ಮತ್ತು ವೈರ್ ಲೆಸ್ ಇಂಟರ್ ನೆಟ್ ಚಂದಾದಾರರ ಸಂಖ್ಯೆ 897.59 ಮಿಲಿಯನ್ ಆಗಿದೆ. ಇದರಲ್ಲಿ ಬ್ರಾಡ್ಬ್ಯಾಂಡ್ ಇಂಟರ್ ನೆಟ್ ಚಂದಾದಾರರ ಸಂಖ್ಯೆ 904.54 ಮಿಲಿಯನ್ ಮತ್ತು ನ್ಯಾರೋ ಬ್ಯಾಂಡ್ ಚಂದಾದಾರರ ಸಂಖ್ಯೆ 31.62 ಮಿಲಿಯನ್ ಆಗಿದೆ ಎಂದು ವರದಿ ತಿಳಿಸಿದೆ.
ವೈರ್ ಲೆಸ್ ಬಳಸುವ ಪ್ರತಿ ಬಳಕೆದಾರರಿಂದ ಬರುವ ಮಾಸಿಕ ಸರಾಸರಿ ಆದಾಯ (ಎಆರ್ಪಿಯು) ಶೇಕಡಾ 1.93 ರಷ್ಟು ಹೆಚ್ಚಾಗಿದೆ. ಇದು ಸೆಪ್ಟೆಂಬರ್ನಲ್ಲಿ 149.66 ರೂ. ಇದ್ದದ್ದು ಡಿಸೆಂಬರ್ನಲ್ಲಿ 152.55 ರೂ.ಗೆ (ವರ್ಷದಿಂದ ವರ್ಷಕ್ಕೆ) ಏರಿಕೆಯಾಗಿದೆ.
ಟ್ರಾಯ್ ವರದಿಯ ಪ್ರಕಾರ, ಭಾರತದಲ್ಲಿ ದೂರವಾಣಿ ಚಂದಾದಾರರ ಸಂಖ್ಯೆ ಸೆಪ್ಟೆಂಬರ್ ಅಂತ್ಯದಲ್ಲಿ 1,181.13 ಮಿಲಿಯನ್ (1.18 ಬಿಲಿಯನ್ ಗಿಂತ ಹೆಚ್ಚು) ಇದ್ದುದು ಡಿಸೆಂಬರ್ ಅಂತ್ಯದ ವೇಳೆಗೆ 1,190.33 ಮಿಲಿಯನ್ (1.19 ಬಿಲಿಯನ್ ಗಿಂತ ಹೆಚ್ಚು) ಗೆ ಏರಿಕೆಯಾಗಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಶೇಕಡಾ 0.78 ರಷ್ಟು ಬೆಳವಣಿಗೆಯಾಗಿದೆ.
ಭಾರತದಲ್ಲಿ ಒಟ್ಟಾರೆ ದೂರಸಂಪರ್ಕ ದಟ್ಟಣೆ (ಟೆಲಿಡೆನ್ಸಿಟಿ) ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 84.76 ರಿಂದ ಶೇಕಡಾ 85.23 ಕ್ಕೆ ಏರಿದೆ. ನಗರ ಪ್ರದೇಶಗಳಲ್ಲಿ ದೂರವಾಣಿ ಚಂದಾದಾರರ ಸಂಖ್ಯೆ 658.46 ಮಿಲಿಯನ್ ನಿಂದ 662.56 ಮಿಲಿಯನ್ಗೆ ಹೆಚ್ಚಾಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ದೂರವಾಣಿ ಚಂದಾದಾರರ ಸಂಖ್ಯೆ 522.66 ಮಿಲಿಯನ್ನಿಂದ 527.77 ಮಿಲಿಯನ್ಗೆ ಏರಿಕೆಯಾಗಿದೆ.
"ಪೇ ಡಿಟಿಎಚ್ (ಡೈರೆಕ್ಟ್ ಟು ಹೋಮ್) ಒಟ್ಟು ಸಕ್ರಿಯ ಚಂದಾದಾರರ ಸಂಖ್ಯೆ ಸುಮಾರು 63.52 ಮಿಲಿಯನ್ಗೆ ತಲುಪಿದೆ. ಇದು ಡಿಡಿ ಫ್ರೀ ಡಿಶ್ (ದೂರದರ್ಶನದ ಉಚಿತ ಡಿಟಿಎಚ್ ಸೇವೆಗಳು) ಹೊರತುಪಡಿಸಿದ ಸಂಖ್ಯೆಯಾಗಿದೆ" ಎಂದು ಟ್ರಾಯ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಗೂಗಲ್, ಎನ್ವಿಡಿಯಾದ ಎಐ ತಂತ್ರಜ್ಞಾನದಿಂದ ಚಂಡಮಾರುತಗಳ ನಿಖರ ಮುನ್ಸೂಚನೆ ಸಾಧ್ಯ: ವರದಿ - Artificial intelligence