Meta AI Classifier: ಮೆಟಾ ಮತ್ತೊಂದು ಹೊಸ ಟೂಲ್ ಹೊರತರುವ ಕೆಲಸದಲ್ಲಿ ನಿರತವಾಗಿದೆ. ಇನ್‌ಸ್ಟಾಗ್ರಾಮ್ ಸೈನ್ ಅಪ್ ಮಾಡುವವರು ಮಕ್ಕಳೋ ಅಥವಾ ವಯಸ್ಕರೋ ಎಂಬುದನ್ನು ಪತ್ತೆ ಹಚ್ಚುವುದು ಇದರ ಉದ್ದೇಶ.
ಮೆಟಾದ ಮೇಲೆ ಪ್ರಪಂಚದಾದ್ಯಂತ ಹಲವಾರು ಸರ್ಕಾರಿ ಸಂಸ್ಥೆಗಳು ನಿಗಾವಹಿಸುತ್ತಿವೆ. ಅದರಲ್ಲೂ ಇನ್‌ಸ್ಟಾಗ್ರಾಮ್ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಈ ಸಾಮಾಜಿಕ ಜಾಲತಾಣ ಬಳಕೆಯಿಂದ ಮಕ್ಕಳ ದೈಹಿಕ ಮತ್ತು ಮಾನಿಸಿಕ ಅಪಾಯಗಳು ಹೆಚ್ಚುತ್ತಿವೆ ಎಂದು ಸರ್ಕಾರಿ ಸಂಸ್ಥೆಗಳು ಹೇಳುತ್ತಿವೆ.
ಈಗಾಗಲೇ ಕೆಲವು ದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ರಾಪ್ತರು ಖಾತೆ ರಚಿಸದಂತೆ ಕ್ರಮಗಳನ್ನು ತೆಗೆದುಕೊಂಡಿವೆ. ಈಗಾಗಲೇ ಆಸ್ಟ್ರೇಲಿಯಾ ಸರ್ಕಾರ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ಪ್ರಸ್ತಾಪ ಮುಂದಿಟ್ಟಿದೆ.
ಇನ್‌ಸ್ಟಾಗ್ರಾಮ್ ಬಳಕೆದಾರರ ವಯಸ್ಸನ್ನು ಕಂಡುಹಿಡಿಯುವುದರ ಬಗ್ಗೆ ಮೆಟಾ ತನ್ನ ಬ್ಲಾಗ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ. ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳುವ ಅಪ್ರಾಪ್ತರನ್ನು ಕಂಡುಹಿಡಿಯುವುದಕ್ಕೆ ಹೊಸ ಎಐಚಾಲಿತ ಟೂಲ್ ಹೊರತರಲು ಯತ್ನಿಸಲಾಗುತ್ತಿದೆ ಎಂದು ಮೆಟಾ ಘೋಷಿಸಿದೆ. ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪ್ಲಾಟ್ಫಾರ್ಮ್ಗಳಲ್ಲಿ ಸೈನ್ ಇನ್ ಮಾಡುವಾಗ ಬಳಕೆದಾರರು ತಮ್ಮ ವಯಸ್ಸನ್ನು ನಮೂದಿಸುವ ಅಗತ್ಯವಿರುತ್ತದೆ. ಆಗ ಅನೇಕ ಬಳಕೆದಾರರು ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಮಾಹಿತಿ ನೀಡಿರುವುದು ಮೆಟಾ ಕಂಡುಕೊಂಡಿದೆ.
ವಯಸ್ಕರ ವರ್ಗೀಕರಣ ಎಂದು ಕರೆಯಲ್ಪಡುವ AI ಮಾದರಿಯು ಯಾರು ವಯಸ್ಕರು (18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಅಥವಾ ಅಪ್ರಾಪ್ತರು (13-17) ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಸೂಕ್ತವಾದ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಆಟೋಮೆಟಿಕ್ ಆಗಿ ಅನ್ವಯಿಸುತ್ತದೆ ಎಂದು ಮೆಟಾ ಹೇಳಿದೆ.
ಬಳಕೆದಾರರು ಅಪ್ರಾಪ್ತರೋ ಅಥವಾ ವಯಸ್ಕರೋ ಎಂಬುದನ್ನು ಕಂಡುಹಿಡಿಯಲು, ಆ ಬಳಕೆದಾರ ತನ್ನ ಸಾಮಾಜಿಕ ಖಾತೆಯನ್ನು ಯಾವಾಗ ರಚಿಸಿದ್ದಾನೆ, ಇತರರೊಂದಿಗೆ ಯಾವ ವಿಷಯ ಮತ್ತು ಸಂವಹನ ನಡೆಸಿದ್ದಾನೆ ಎಂಬ ಮಾಹಿತಿಯಂತಹ ಸಂಕೇತಗಳ ಮೇಲೆ ಎಐ ಮಾದರಿಗೆ ತರಬೇತಿ ನೀಡಲಾಗಿದೆ. ಬಳಕೆದಾರರು 18 ವರ್ಷದೊಳಗಿನವರು ಎಂದು ಎಐ ಅನುಮಾನಿಸಿದ್ರೆ ಅಂಥವರ ಖಾತೆಯನ್ನು ಈ ಹೊಸ ಫೀಚರ್ ಗುರುತಿಸಿ ಅವರ ಖಾತೆಯನ್ನು ಹದಿಹರಿಯದವರ ಅಕೌಂಟ್ ಆಗಿ ಮಾಡುತ್ತದೆ.
ಅಪ್ರಾಪ್ತರು ತಮ್ಮ ಅಕೌಂಟ್ ಬಳಸುತ್ತಿದ್ದಾರೆ ಎಂದು ವಯಸ್ಕರ ವರ್ಗೀಕರಣ (Adult Classifier) ಪತ್ತೆ ಮಾಡಿದ್ರೆ ಇನ್‌ಸ್ಟಾಗ್ರಾಮ್ ಅವರ ಖಾತೆಯನ್ನು ಅಟೋಮೆಟಿಕ್ ಪ್ರೈವೇಟ್ ಅಕೌಂಟ್ ಆಗಿ ಬದಲಾಯಿಸುತ್ತದೆ. ಅಷ್ಟೇ ಅಲ್ಲ, ಸ್ವಯಂಚಾಲಿತವಾಗಿ ಸೆಕ್ಯೂರಿಟಿ ಸೆಟಿಂಗ್ಗಳು ಅನ್ವಯಿಸುವ ಮೂಲಕ ಅಪರಿಚತರಿಗೆ ಮೆಸೇಜ್ ಕಳುಹಿಸುವುದನ್ನು ತಡೆಹಿಡಿಯುತ್ತದೆ.
ಈಗಾಗಲೇ ಮೆಟಾ ಅಪ್ರಾಪ್ತರ ಖಾತೆಗಳಿಗೆ ಕೆಲ ನಿರ್ಬಂಧಗಳನ್ನು ಹೇರಲಾಗಿದೆ. ಆದ್ರೂ ಸಹ ಹೊಸ ಟೂಲ್ನೊಂದಿಗೆ ಕೆಲವೊಂದು ಕ್ರಮಗಳನ್ನು ಬದಲಾಯಿಸಿದೆ. ಇನ್ನು ಅಪ್ರಾಪ್ತರು ತಮ್ಮ ಪೋಷಕರ ಅನುಮತಿಯಿಲ್ಲದೇ ಈ ಸೆಟ್ಟಿಂಗ್‌ಗಳನ್ನು ಬದಲಾಯಿಸಲಾಗುವುದಿಲ್ಲ ಎಂದು ಮೆಟಾ ಹೇಳಿದೆ.
ಇನ್ನು ಈ ಹೊಸ ಎಐ ಚಾಲಿತ ವಯಸ್ಕ ವರ್ಗೀಕರಣ ಉಪಕರಣದ ನಿಖರತೆ ತಿಳಿದು ಬಂದಿಲ್ಲ. ಆದ್ರೆ ಬ್ಲೂಮ್ಬರ್ಗ್ ಮಾಹಿತಿ ಪ್ರಕಾರ, ಸಾಫ್ಟ್ವೇರ್ನಿಂದ ತಪ್ಪಾಗಿ ಗುರುತಿಸಲ್ಪಟ್ಟ ಖಾತೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಈ ನಿರ್ಬಂಧಗಳನ್ನು ರದ್ದುಗೊಳಿಸಲು ಸಾಧ್ಯವಾಗುತ್ತದೆ. ಅದಕ್ಕೆ ಅಧಿಕೃತವಾದ ಗುರುತಿನ ಚೀಟಿ ಅಥವಾ ಸೆಲ್ಫಿ ಅಪ್ಲೋಡ್ ಮಾಡಬೇಕಾಗುತ್ತದೆ ಎಂದು ಮೆಟಾ ಹೇಳಿದೆ.
ಇದನ್ನೂ ಓದಿ: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸಲು ಹೊರಟ ಆಸ್ಟ್ರೇಲಿಯಾ