ತಿರುವನಂತಪುರಂ: ಕಾಕ್ಲಂಬಲಂ ಕೆಟಿಸಿಟಿ ಶಾಲೆ ಕೇರಳದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಶಾಲೆಗೆ ತೆರಳಿ ವಿದ್ಯಾರ್ಥಿಗಳನ್ನು ನಿಮ್ಮ ನೆಚ್ಚಿನ ಶಿಕ್ಷಕರು ಯಾರು ಅಂತಾ ಕೇಳಿದರೆ ತಟ್ಟಂತಾ ಹೇಳುವುದು ಈ ಶಿಕ್ಷಕಿಯ ಹೆಸರನ್ನ. ಮಕ್ಕಳ ನಾಲಿಗೆ ತುದಿಯಲ್ಲಿ ಹರಿದಾಡುವ ಆ ಹೆಸರು ಯಾರದ್ದು ಅಂತಾ ನಿಮಗೆಲ್ಲ ಅಚ್ಚರಿ ಆಗದಿರದು.
ಚಾಟ್ ಜಿಪಿಟಿ ಸಹಾಯದಿಂದ ರಚಿಸಲಾದ ಐರಿಸ್ ಎಂಬ ಎಐ ಶಿಕ್ಷಕಿ ವಿದ್ಯಾರ್ಥಿಗಳ ಹೃದಯವನ್ನು ಗೆದ್ದ ಟೀಚರ್ ಆಗಿದ್ದಾರೆ. ಈ ಎಐ ಟೀಚರ್ ಮುದ್ದಾದ ಹೆಸರು ಐರಿಸ್. ಕೇವಲ ಹತ್ತೇ ಹತ್ತು ಸೆಕೆಂಡ್ಗಳಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಈ ಶಿಕ್ಷಕಿ ಅರಳು ಹುರಿದಂತೆ ಉತ್ತರ ನೀಡುತ್ತಾರೆ. ಮಲಯಾಳಂನಲ್ಲಿ ಮಾತ್ರವಲ್ಲ ಇಂಗ್ಲಿಷ್, ಹಿಂದಿಯಲ್ಲಿ ಮಕ್ಕಳ ಪ್ರಶ್ನೆಗಳಿಗೆ ಪಟ ಪಟಾ ಅಂತಾ ಉತ್ತರ ನೀಡುತ್ತಾಳೆ ಐರಿಸ್. ಕೇರಳದಲ್ಲಿ ಇದೇ ಮೊದಲ ಬಾರಿಗೆ ಶಾಲೆಯೊಂದು AI ಶಿಕ್ಷಕರನ್ನು ಬೋಧನೆಗಾಗಿ ಪರಿಚಯಿಸಲಾಗಿದೆ. ತಿರುವನಂತಪುರಂ ಜಿಲ್ಲೆಯ ಕಲ್ಲಂಬಳಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಅನುದಾನರಹಿತ ಶಾಲೆಯಾದ KTCTಯಲ್ಲಿ AI ತಂತ್ರಜ್ಞಾನದಲ್ಲಿ ಕೆಲಸ ಮಾಡುವ ಹುಮನಾಯ್ಡ್ ಶಿಕ್ಷಕರನ್ನು ಹೊಂದುವ ಮೂಲಕ ವಿಶಿಷ್ಟ ಸಾಧನೆಯೊಂದನ್ನು ಮಾಡುತ್ತಿದೆ.
ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ, ನೀತಿ ಆಯೋಗದ ಯೋಜನೆಯಾದ ಅಟಲ್ ಟಿಂಕರಿಂಗ್ ಲ್ಯಾಬ್ (ATL) ನ ಪಠ್ಯೇತರ ಚಟುವಟಿಕೆಗಳ ಭಾಗವಾಗಿ AI ಶಿಕ್ಷಕರನ್ನು ಈ ಶಾಲೆಯಲ್ಲಿ ರಚನೆ ಮಾಡಲಾಗಿದೆ. ಹೌ&ವೈ, ಅಟಲ್ ಟಿಂಕರಿಂಗ್ ಲ್ಯಾಬ್‌ಗೆ ವೈಜ್ಞಾನಿಕ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುವ ಕಂಪನಿಗಳಲ್ಲಿ ಒಂದಾದ ಮೇಕರ್ಸ್ ಲ್ಯಾಬ್- ಸ್ಟಾರ್ಟ್ - ಅಪ್ ಕಂಪನಿಯು ರೂ.ಒಂದು ಲಕ್ಷ ವೆಚ್ಚದಲ್ಲಿ ಐರಿಸ್ ಟೀಚರ್ ಅನ್ನು ಸೃಷ್ಟಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳು ತಮ್ಮ ನೆಚ್ಚಿನ AI ಶಿಕ್ಷಕಿಯ ಸೃಷ್ಟಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಪುಟ್ಟ ವಿಜ್ಞಾನಿಗಳು ತಮ್ಮ ಆವಿಷ್ಕಾರಗಳನ್ನು ಮುಂದುವರಿಸಿದ್ದಾರೆ. ಸಹಜ ಶಿಕ್ಷಕರಂತೆ ಐರಿಸ್ಳನ್ನು ಇನ್ನಷ್ಟು ಸಂವಾದಾತ್ಮಕವಾಗಿಸುವಂತೆ ಮಾಡಲು ಹಗಲಿರಳು ಕೆಲಸ ಮಾಡಲಾಗುತ್ತಿದೆ. ಐರಿಸ್ ಅವರನ್ನು ಇನ್ನಷ್ಟು ಸುಧಾರಿಸಲು, ಈಗ ಇರುವ ದೋಷಗಳನ್ನು ಸರಿಪಡಿಸಲು ಕೆಲಸ ಮಾಡಲಾಗುತ್ತಿದೆ. ಆದರೆ, ಗದ್ದಲದ ವಾತಾವರಣದ ಸಮಯದಲ್ಲಿ ನಿರ್ದಿಷ್ಟ ಪ್ರಶ್ನೆಗಳನ್ನು ಗುರುತಿಸುವುದೇ ಸಂಶೋಧಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಆದರೂ ಐರಿಶ್ ತನ್ನ ಕ್ಯಾಮರಾ ಮೂಲಕ ಸಮಸ್ಯೆ ಸೃಷ್ಟಿಸುತ್ತಿರುವವರನ್ನ ಕಂಡು ಹಿಡಿಯುತ್ತಿದೆ. ಐರಿಸ್ ಹುಮನಾಯ್ಡ್ ತಂತ್ರಜ್ಞಾನವು ಚಾಟ್ ಜಿಪಿಟಿಯಲ್ಲಿನ ಪ್ರೋಗ್ರಾಂ ಅನ್ನು ಮಾರ್ಪಡಿಸುವ ಮೂಲಕ ಕಾರ್ಯನಿರ್ವಹಿಸುತ್ತಿದೆ. ಈ ಎಐ ಶಿಕ್ಷಕಿ ಮಾತನಾಡುವುದರ ಜೊತೆಗೆ, ಮುಂದಕ್ಕೆ ಮತ್ತು ಹಿಂದಕ್ಕೆ ಚಲಿಸುತ್ತಾರೆ ಹಾಗೂ ಕೈಕುಲಕುತ್ತಾರೆ. ಇದು ನಾಲ್ಕು ಚಕ್ರಗಳ ಮೂಲಕ ಚಲಿಸುತ್ತದೆ. ಐರಿಸ್ ನ ಚಲನೆಯನ್ನು ಬ್ಲೂಟೂತ್ ಮೂಲಕ ನಿಯಂತ್ರಿಸಲಾಗುತ್ತದೆ. ಮೇಕರ್ಸ್ ಲ್ಯಾಬ್ ಒಂದು ತಿಂಗಳೊಳಗೆ ತಂತ್ರಜ್ಞಾನವನ್ನು ಕೇರಳದ ಇತರ ಶಾಲೆಗಳಿಗೂ ನೀಡುವ ಗುರಿ ಹೊಂದಿದೆ.
ಇದನ್ನು ಓದಿ: ಎಲಾನ್ ಮಸ್ಕ್ ಸಂಸ್ಥೆಯಲ್ಲಿ ಸಂಪೂರ್ಣ ನಿಯಂತ್ರಣ ಬಯಸಿದ್ದರು: ಓಪನ್ ಎಐ