ನವದೆಹಲಿ: ಭಾರತವು ಆಸ್ಟ್ರೇಲಿಯಾ, ಹಾಂಗ್ ಕಾಂಗ್ ಎಸ್ಎಆರ್, ಜಪಾನ್, ಸಿಂಗಾಪುರ್ ಮತ್ತು ಕೊರಿಯಾದಂತಹ ಪ್ರಮುಖ ದೇಶಗಳನ್ನು ಹಿಂದಿಕ್ಕಿ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ (ಚೀನಾವನ್ನು ಹೊರತುಪಡಿಸಿ) 950 ಮೆಗಾವ್ಯಾಟ್ನಷ್ಟು ಅತ್ಯಧಿಕ ಡೇಟಾ ಸೆಂಟರ್ ಸಾಮರ್ಥ್ಯವನ್ನು ಹೊಂದಿರುವ ದೇಶವಾಗಿದೆ ಎಂದು ಬುಧವಾರ ಬಿಡುಗಡೆಯಾದ ಖಾಸಗಿ ವರದಿ ತಿಳಿಸಿದೆ.
ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಿಬಿಆರ್ಇ ಪ್ರಕಟಿಸಿದ ವರದಿಯ ಪ್ರಕಾರ, 2024-2026 ರ ಅವಧಿಯಲ್ಲಿ ಭಾರತವು ಹೆಚ್ಚುವರಿಯಾಗಿ 850 ಮೆಗಾವ್ಯಾಟ್ನಷ್ಟು ಗರಿಷ್ಠ ಸಾಮರ್ಥ್ಯದ ಡೇಟಾ ಸೆಂಟರ್ ಸೇರ್ಪಡೆ ಮಾಡುವ ಸಾಧ್ಯತೆಯಿದೆ. ಇದು ಯಾವುದೇ ಪ್ರಮುಖ ಎಪಿಎಸಿ ದೇಶಗಳಿಗಿಂತ ಹೆಚ್ಚಾಗಿದೆ.
ಭಾರತದ ಡೇಟಾ ಸೆಂಟರ್ ವಲಯವು ಅದರ ದೃಢತೆ ಮತ್ತು ಆಕರ್ಷಕ ಆದಾಯದ ಕಾರಣಗಳಿಂದ ಹೂಡಿಕೆದಾರರಿಗೆ ದೊಡ್ಡ ಅವಕಾಶವಾಗಿ ಹೊರಹೊಮ್ಮಿದೆ. 2018-2023 ರ ನಡುವೆ, ಭಾರತವು ಜಾಗತಿಕ ಮತ್ತು ದೇಶೀಯ ಹೂಡಿಕೆದಾರರಿಂದ 40 ಬಿಲಿಯನ್ ಡಾಲರ್ಗಿಂತ ಹೆಚ್ಚಿನ ಹೂಡಿಕೆ ಬದ್ಧತೆಗಳನ್ನು ಪಡೆದುಕೊಂಡಿದೆ ಎಂಬ ಅಂಶವು ಈ ವಲಯದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವರದಿ ಹೇಳಿದೆ.
2022 ರಲ್ಲಿ ಇದ್ದ 200 ಮೆಗಾವ್ಯಾಟ್ ಡೇಟಾ ಸೆಂಟರ್ ಸಾಮರ್ಥ್ಯಕ್ಕೆ ಹೋಲಿಸಿದರೆ 2023 ರಲ್ಲಿ 255 ಮೆಗಾವ್ಯಾಟ್ ಸಾಮರ್ಥ್ಯದ ಹೊಸ ಡೇಟಾ ಸೆಂಟರ್ಗಳು ಆರಂಭವಾಗಿವೆ. ಇದರ ಪರಿಣಾಮವಾಗಿ ವರ್ಷದ ಅಂತ್ಯದ ವೇಳೆಗೆ ಡೇಟಾ ಸೆಂಟರ್ನ ಒಟ್ಟು ಸಾಮರ್ಥ್ಯ 1,030 ಮೆಗಾವ್ಯಾಟ್ಗೆ ಏರಿಕೆಯಾಗಿದೆ. ಈ ತ್ವರಿತ ಬೆಳವಣಿಗೆಯು 2024 ರಲ್ಲಿಯೂ ಮುಂದುವರಿಯುವ ನಿರೀಕ್ಷೆಯಿದೆ. ವಿವಿಧ ನಗರಗಳಲ್ಲಿ 330 ಮೆಗಾವ್ಯಾಟ್‌ಗಿಂತ ಹೆಚ್ಚು ಯೋಜಿತ ಪೂರೈಕೆಯೊಂದಿಗೆ, ವಾರ್ಷಿಕವಾಗಿ ಶೇಕಡಾ 30 ರಷ್ಟು ಸ್ಟಾಕ್ ಹೆಚ್ಚಾಗುವ ಮೂಲಕ ಡೇಟಾ ಸೆಂಟರ್ ಸಾಮರ್ಥ್ಯ ಸುಮಾರು 1,370 ಮೆಗಾವ್ಯಾಟ್ಗೆ ತಲುಪಲಿದೆ ಎಂದು ವರದಿ ತಿಳಿಸಿದೆ.
ಡೇಟಾ ಸೆಂಟರ್ ಎಂಬುದು ನೆಟ್ವರ್ಕ್ನಲ್ಲಿ ಜೋಡಿಸಲಾದ ಕಂಪ್ಯೂಟರ್ಗಳು, ಶೇಖರಣಾ ವ್ಯವಸ್ಥೆಗಳು ಮತ್ತು ಕಂಪ್ಯೂಟಿಂಗ್ ಮೂಲಸೌಕರ್ಯಗಳಿಂದ ಕೂಡಿದ ಸೌಲಭ್ಯವಾಗಿದ್ದು, ಸಂಸ್ಥೆಗಳು ದೊಡ್ಡ ಪ್ರಮಾಣದ ಡೇಟಾವನ್ನು ಒಟ್ಟುಗೂಡಿಸಲು, ಸಂಸ್ಕರಿಸಲು, ಸಂಗ್ರಹಿಸಲು ಮತ್ತು ಪ್ರಸಾರ ಮಾಡಲು ಇದನ್ನು ಬಳಸುತ್ತವೆ.
ಆಧುನಿಕ ಡೇಟಾ ಸೆಂಟರ್ಗಳು ಸಾಂಪ್ರದಾಯಿಕ ಎಂಟರ್ಪ್ರೈಸ್ ಅಪ್ಲಿಕೇಶನ್ಗಳಿಂದ ಹಿಡಿದು ಆಧುನಿಕ ಕ್ಲೌಡ್-ನೇಟಿವ್ ಸೇವೆಗಳವರೆಗೆ ವಿವಿಧ ಕೆಲಸದ ಹೊರೆಗಳನ್ನು ನಿಭಾಯಿಸಬಲ್ಲವು. ಈ ಎಂಟರ್ಪ್ರೈಸ್ ಡೇಟಾ ಸೆಂಟರ್ಗಳು ಕ್ಲೌಡ್ ಕಂಪ್ಯೂಟಿಂಗ್, ಇನ್-ಹೌಸ್ ಮತ್ತು ಆನ್-ಸೈಟ್ ಸಂಪನ್ಮೂಲಗಳನ್ನು ರಕ್ಷಿಸುವ ಸೌಲಭ್ಯಗಳನ್ನು ಸಂಯೋಜಿಸುತ್ತವೆ.
ಇದನ್ನೂ ಓದಿ : ಮಾನವ ಸಾಮರ್ಥ್ಯಕ್ಕೆ ಸರಿಸಾಟಿಯಾದ ಹೊಸ 'ಜಿಪಿಟಿ -4ಒ' ಹೊರತಂದ ಓಪನ್ಎಐ - OpenAI GPT 4o