ಸ್ಯಾನ್ ಫ್ರಾನ್ಸಿಸ್ಕೋ: ಅಲ್ಫಾಬೆಟ್ (ಗೂಗಲ್ನ ಮೂಲ ಕಂಪನಿ) 2023ರ ಪೂರ್ಣ ವರ್ಷದಲ್ಲಿ 307 ಬಿಲಿಯನ್ ಡಾಲರ್ ಆದಾಯ ದಾಖಲಿಸಿದೆ. ಇದು 2022ಕ್ಕೆ ಹೋಲಿಸಿದರೆ ಶೇಕಡಾ 9ರಷ್ಟು ಹೆಚ್ಚಾಗಿದೆ. ಗೂಗಲ್ ಕಳೆದ ವರ್ಷ 12,000ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಅವರಿಗೆ 2.1 ಬಿಲಿಯನ್ ಡಾಲರ್ ಪರಿಹಾರ ಭತ್ಯೆ ನೀಡಿದೆ. ಏತನ್ಮಧ್ಯೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಪರಿಹಾರ ಭತ್ಯೆಗಾಗಿ ಮತ್ತೆ 700 ಮಿಲಿಯನ್ ಡಾಲರ್ ಖರ್ಚು ಮಾಡಲಿದೆ.
"ನಾಲ್ಕನೇ ತ್ರೈಮಾಸಿಕದಲ್ಲಿ (ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕ) 86.3 ಬಿಲಿಯನ್ ಡಾಲರ್ ಏಕೀಕೃತ ಆದಾಯದೊಂದಿಗೆ ತ್ರೈಮಾಸಿಕವನ್ನು ನಾವು ಕೊನೆಗೊಳಿಸಿದ್ದೇವೆ. ಇದು ವರದಿ ಮಾಡಿದ ಮತ್ತು ಸ್ಥಿರ ಕರೆನ್ಸಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.13ರಷ್ಟು ಹೆಚ್ಚಾಗಿದೆ. ಗೂಗಲ್ ಸರ್ಚ್ ನಮ್ಮ ಆದಾಯಕ್ಕೆ ಅತಿ ದೊಡ್ಡ ಕೊಡುಗೆ ನೀಡಿದೆ" ಎಂದು ಮುಖ್ಯ ಹಣಕಾಸು ಅಧಿಕಾರಿ ರುತ್ ಪೊರಾಟ್ ಹೇಳಿದರು.
ಗೂಗಲ್ ಸರ್ವಿಸಸ್ ವಿಭಾಗದಿಂದ 76.3 ಬಿಲಿಯನ್ ಡಾಲರ್ ಆದಾಯ ಬಂದಿದ್ದು, ಇದು ಶೇ.12 ರಷ್ಟು ಹೆಚ್ಚಾಗಿದೆ. ಈ ತ್ರೈಮಾಸಿಕದಲ್ಲಿ ಗೂಗಲ್ ಸರ್ಚ್ ಮತ್ತು ಇತರ ಜಾಹೀರಾತು ಆದಾಯ ಶೇ.13 ರಷ್ಟು ಏರಿಕೆಯಾಗಿದ್ದು, ರಿಟೇಲ್ ವ್ಯಾಪಾರದ ಬೆಳವಣಿಗೆಗೆ ಕಾರಣವಾಗಿದೆ. ಯೂಟ್ಯೂಬ್ ಜಾಹೀರಾತು ಆದಾಯ ಶೇ.16ರಷ್ಟು ಏರಿಕೆಯಾಗಿದ್ದು, ಇದು ನೇರ ಪ್ರತಿಕ್ರಿಯೆ ಮತ್ತು ಬ್ರ್ಯಾಂಡ್ ಜಾಹೀರಾತು ಎರಡರಿಂದಲೂ ಪ್ರೇರಿತವಾಗಿದೆ ಎಂದು ಕಂಪನಿ ತಿಳಿಸಿದೆ.
"ಯೂಟ್ಯೂಬ್ ಪ್ರೀಮಿಯಂ ಮತ್ತು ಮ್ಯೂಸಿಕ್, ಯೂಟ್ಯೂಬ್ ಟಿವಿ ಮತ್ತು ಗೂಗಲ್ ಒನ್ ಸಬ್ಸ್ಕ್ರಿಪ್ಷನ್ಗಳು ಬಲವಾಗಿ ಬೆಳೆಯುತ್ತಿವೆ. ಥ್ರೀ ಕ್ಲೌಡ್ ವಿಭಾಗದ ಆದಾಯ ಈ ತ್ರೈಮಾಸಿಕದಲ್ಲಿ 9 ಬಿಲಿಯನ್ ಡಾಲರ್ ದಾಟಿದೆ ಮತ್ತು ಇದು ನಮ್ಮ ಜೆನ್ ಎಐ ಮತ್ತು ಉತ್ಪನ್ನಗಳಿಂದ ತ್ವರಿತ ಬೆಳವಣಿಗೆ ಕಂಡ ಕ್ಲೌಡ್ ವಿಭಾಗವಾಗಿದೆ" ಎಂದು ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದರು.
"ಗೂಗಲ್ ಸರ್ಚ್ನಿಂದ ಹಿಡಿದು ಜಾಹೀರಾತುಗಳವರೆಗೆ ನಮ್ಮ ಹೆಚ್ಚಿನ ಗ್ರಾಹಕ ಮತ್ತು ಉದ್ಯಮ ಉತ್ಪನ್ನಗಳನ್ನು ಸುಧಾರಿಸಲು ಎಐ ಅನ್ನು ಬಳಸುವಲ್ಲಿ ನಾವು ಬಹಳ ಹಿಂದಿನಿಂದಲೂ ಮುಂಚೂಣಿಯಲ್ಲಿದ್ದೇವೆ. ಈಗಾಗಲೇ ಈ ವಿಚಾರದಲ್ಲಿ ನಾವು ಶತಕೋಟಿ ಜನರಿಗೆ ಸಹಾಯ ಮಾಡುತ್ತಿದ್ದೇವೆ" ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಪ್ರೈವಸಿ, ದತ್ತಾಂಶ ಭದ್ರತೆಗೆ ಅಪಾಯ: ಎಐ ಅಳವಡಿಕೆಗೆ ಕಂಪನಿಗಳ ಹಿಂದೇಟು