ಬೆಂಗಳೂರು: ಬೆಂಗಳೂರು ಮಾದರಿಯಲ್ಲಿ ಮುಂಬೈ ಮತ್ತು ಕೊಲ್ಕತ್ತಾದಲ್ಲಿ ಸಹ ಶೀಘ್ರದಲ್ಲೇ ಇವಿ ಬ್ಯಾಟರಿ ಚಾರ್ಜರ್ ಮತ್ತು ಪರೀಕ್ಷಾ ಘಟಕ ಸ್ಥಾಪಿಸಲು ನ್ಯಾಶನಲ್ ಟೆಸ್ಟ್ ಹೌಸ್ (NTH) ಸಜ್ಜಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು. ಜಕ್ಕೂರಿನಲ್ಲಿರುವ NTH-RRSL ಕ್ಯಾಂಪಸ್‌ನಲ್ಲಿ ಗುರುವಾರ ಬಹು ನಿರೀಕ್ಷಿತ EV ಬ್ಯಾಟರಿ ಮತ್ತು ಚಾರ್ಜರ್ ಪರೀಕ್ಷಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಈ ವಿಷಯ ತಿಳಿಸಿದರು. ಎಲೆಕ್ಟ್ರಿಕ್ ವೆಹಿಕಲ್ ಉದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು ಬ್ಯಾಟರಿ ಮತ್ತು ಚಾರ್ಜರ್ ತಯಾರಿಕಾ ವಲಯವನ್ನು ನಿರ್ಮಿಸುತ್ತಿದೆ ಎಂದು ಹೇಳಿದರು.
ಇವಿ ಉದ್ಯಮದಲ್ಲಿ ಸುಸ್ಥಿರ ಮತ್ತು ನವೀನ ಬದಲಾವಣೆ ತರುವಲ್ಲಿ ಭಾರತ ಬದ್ಧತೆ ಪ್ರದರ್ಶಿಸಿ, ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಇವಿ ಉದ್ಯಮವು ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಸಾಥ್ ನೀಡುವಂತೆ ಇವಿ ಬ್ಯಾಟರಿ ಮತ್ತು ಚಾರ್ಜರ್ ತಯಾರಿಕಾ ವಲಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಎಲೆಕ್ಟ್ರಾನಿಕ್ ವೆಹಿಕಲ್ ಚಾರ್ಜರ್ ಮತ್ತು ಪರೀಕ್ಷಾ ಘಟಕವು ಪರದೇಶಗಳನ್ನು ಅವಲಂಬಿಸದೆ ಸ್ಥಳೀಯವಾಗಿ ನಿರ್ಣಾಯಕ ಪರೀಕ್ಷೆಗಳನ್ನು ನಡೆಸಲು ಅನುವು ಮಾಡಿಕೊಡಲಿದೆ ಎಂದರು. ಮೆಟ್ರೋ ರೈಲು ಯೋಜನೆಗಳು, ಬುಲೆಟ್ ರೈಲು ಯೋಜನೆ, ಜಲ ಜೀವನ್ ಮಿಷನ್, ಡ್ರೋನ್ ಪ್ರಮಾಣೀಕರಣ ಮತ್ತಿತರ ಪ್ರಮುಖ ಯೋಜನೆಗಳಲ್ಲಿ ಇವಿ ನಿರ್ಣಾಯಕ ಪಾತ್ರ ವಹಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ತಯಾರಕರಿಗೆ ಗಮನಾರ್ಹ ಬೇಡಿಕೆ ಇದೆ. ನಮ್ಮ ಉತ್ಪನ್ನಗಳು ಜಾಗತಿಕ ಗುಣಮಟ್ಟವನ್ನು ತಲುಪುತ್ತಿದ್ದು, ರಫ್ತಿಗೆ ಉತ್ತಮವಾಗಿದೆ ಎಂದರು.

500 GW ವಿದ್ಯುತ್ ಉತ್ಪಾದನೆ ಗುರಿ: ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಜತೆಗೆ 2030ರ ವೇಳೆಗೆ 500 GW ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಸರ್ಕಾರಿ ವಲಯದಲ್ಲಿ ಇವಿ ಬ್ಯಾಟರಿ ಪರೀಕ್ಷಾ ಸೌಲಭ್ಯವುಳ್ಳ ಘಟಕ ಸ್ಥಾಪನೆ ಭವಿಷ್ಯದಲ್ಲಿ ಮಹತ್ವದ ಮೈಲಿಗಲ್ಲು ಎಂದು ಕೇಂದ್ರ ಸಚಿವ ಜೋಶಿ ಇದೇ ಸಂದರ್ಭದಲ್ಲಿ ಹೇಳಿದರು.