ನವದೆಹಲಿ : ವಿಶ್ವದ ಅತ್ಯಂತ ಜನಪ್ರಿಯ ಸೋಷಿಯಲ್ ಮೀಡಿಯಾ ಪ್ಲಾಟ್ಪಾರ್ಮ್ ಆಗಿರುವ ಫೇಸ್ಬುಕ್ 20ನೇ ವರ್ಷಕ್ಕೆ ಕಾಲಿಟ್ಟಿದೆ. 2004ರಲ್ಲಿ ಮಾರ್ಕ್ ಜುಕರ್ ಬರ್ಗ್ ಫೇಸ್ ಬುಕ್ ಆರಂಭಿಸಿದ್ದರು. ಈ ವಿಶೇಷ ದಿನದಂದು ಇನ್ಸ್ಟಾಗ್ರಾಮ್ನಲ್ಲಿ ಜುಕರ್ಬರ್ಗ್ ತಾವು ಫೇಸ್ಬುಕ್ ಆರಂಭಿಸಿದ ದಿನಗಳ ಬಗೆಗಿನ ಅನುಭವಗಳನ್ನು ಶೇರ್ ಮಾಡಿದ್ದಾರೆ.
"ಇಪ್ಪತ್ತು ವರ್ಷಗಳ ಹಿಂದೆ ನಾನೊಂದು ಕೆಲಸ ಪ್ರಾರಂಭಿಸಿದೆ. ದಾರಿ ಉದ್ದಕ್ಕೂ, ಹಲವಾರು ಅದ್ಭುತ ಜನ ಸೇರಿಕೊಂಡರು ಮತ್ತು ನಾವು ಮತ್ತಷ್ಟು ಅದ್ಭುತ ವಿಷಯಗಳನ್ನು ನಿರ್ಮಿಸಿದೆವು. ಆದರೆ, ನಮ್ಮಲ್ಲಿನ ಅತ್ಯುತ್ತಮವಾದುದು ಇನ್ನಷ್ಟೇ ಬರಬೆಕಿದೆ" ಎಂದು ಜುಕರ್ ಬರ್ಗ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ, ತಮ್ಮ ಹಳೆಯ ಫೇಸ್ಬುಕ್ ಚಿತ್ರವನ್ನು ಒಳಗೊಂಡ ರೀಲ್ ಅನ್ನು ಹಂಚಿಕೊಂಡಿದ್ದಾರೆ. ಫೇಸ್ಬುಕ್ನ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ ಇದಕ್ಕೆ "ಲವ್ ಯು ಡ್ಯಾಡ್" ಎಂದು ಕಾಮೆಂಟ್ ಮಾಡಿದೆ.
ಫೇಸ್ಬುಕ್ ಪ್ರಾರಂಭವಾದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಒಂದು ಮಿಲಿಯನ್ ಬಳಕೆದಾರರನ್ನು ಪಡೆದುಕೊಂಡಿತ್ತು ಮತ್ತು ಮುಂದಿನ ನಾಲ್ಕು ವರ್ಷಗಳಲ್ಲಿ ಅದು ತನ್ನ ಪ್ರತಿಸ್ಪರ್ಧಿ ಮೈ ಸ್ಪೇಸ್ ಅನ್ನು ಹಿಂದಿಕ್ಕಿತ್ತು.
2012 ರ ಹೊತ್ತಿಗೆ, ಫೇಸ್ಬುಕ್ ತಿಂಗಳಿಗೆ ಒಂದು ಬಿಲಿಯನ್ ಬಳಕೆದಾರರನ್ನು ಹೊಂದಿತ್ತು. ಆದರೆ, ಇದು 2023 ರ ಅಂತ್ಯದ ವೇಳೆಗೆ ದೈನಂದಿನ 2.11 ಬಿಲಿಯನ್ಗೆ ಅಗಾಧವಾಗಿ ಬೆಳೆದಿದೆ. ಫೇಸ್ಬುಕ್, ಇನ್ಸ್ಟಾಗ್ರಾಮ್, ಮೆಸೆಂಜರ್ ಮತ್ತು ವಾಟ್ಸ್ಆ್ಯಪ್ ಸೇರಿದಂತೆ ಮೆಟಾ ಕಂಪನಿಯ ಅಪ್ಲಿಕೇಶನ್ಗಳನ್ನು ಈಗ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರತಿದಿನ 3.19 ಬಿಲಿಯನ್ ಜನರು ಬಳಸುತ್ತಿದ್ದಾರೆ.
ಫೇಸ್ಬುಕ್ನ ಮಾತೃ ಕಂಪನಿ ಮೆಟಾ ಈಗ ಬೃಹತ್ ಜಾಹೀರಾತು ಕಂಪನಿಯಾಗಿ ಬೆಳೆದಿದೆ. ಮೆಟಾ ಕಳೆದ ವಾರ 2023 ರ ಕೊನೆಯ ತ್ರೈಮಾಸಿಕದಲ್ಲಿ 40 ಬಿಲಿಯನ್ ಡಾಲರ್ ಆದಾಯ ಮತ್ತು ಸುಮಾರು 14 ಬಿಲಿಯನ್ ಡಾಲರ್ ಲಾಭ ಗಳಿಸಿರುವುದಾಗಿ ಹೇಳಿದೆ. ಆದಾಗ್ಯೂ, ಫೇಸ್ಬುಕ್ ತನ್ನ ಕಳಪೆ ಡೇಟಾ ಸಂಗ್ರಹಣೆ ಅಭ್ಯಾಸಗಳಿಗಾಗಿ ಈ ಹಿಂದೆ ಶತಕೋಟಿ ಡಾಲರ್ ದಂಡವನ್ನು ಎದುರಿಸಿದೆ.
ಇನ್ಸ್ಟಾಗ್ರಾಮ್ ಥ್ರೆಡ್ಸ್ ಈಗ 130 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದು ಕಳೆದ ತ್ರೈಮಾಸಿಕಕ್ಕಿಂತ 30 ಮಿಲಿಯನ್ ಹೆಚ್ಚಾಗಿದೆ. ಕಂಪನಿಯ ನಾಲ್ಕನೇ ತ್ರೈಮಾಸಿಕದ ಗಳಿಕೆಯ ಅಂಕಿ ಅಂಶಗಳನ್ನು ನೀಡುವ ಸಭೆಯಲ್ಲಿ ಮಾತನಾಡಿದ ಜುಕರ್ಬರ್ಗ್, ಥ್ರೆಡ್ಸ್ ಸ್ಥಿರವಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : ಗೂಗಲ್ನ ಎಐ ಚಾಟ್ಬಾಟ್ ಜೆಮಿನಿ ಪ್ರೊ ಈಗ ಕನ್ನಡ ಸೇರಿ 9 ಭಾರತೀಯ ಭಾಷೆಗಳಲ್ಲಿ ಲಭ್ಯ