ನವದೆಹಲಿ: ಯುರೋಪ್ನ ಬಾಹ್ಯಾಕಾಶ ಸಂಸ್ಥೆಯ (ಇಎಸ್ಎ) ಮಹತ್ತರವಾದ ಮಿಷನ್ ಪ್ರೋಬಾ- 3 ಉಪಗ್ರಹ ಉಡಾವಣೆಯ ಮೂಲಕ ಭಾರತೀಯ ಭಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಾಹ್ಯಾಕಾಶ ಪರಿಶೋಧನೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲು ಸಜ್ಜಾಗಿದೆ.
ಇಸ್ರೋ, ಪ್ರೋಬಾ- 3 ಉಪಗ್ರಹವನ್ನು ತನ್ನ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ)- ಎಕ್ಸ್ಎಲ್ ರಾಕೆಟ್ ಮೂಲಕ ಉಡಾವಣೆ ಮಾಡಲು ತಯಾರಿ ನಡೆಸುತ್ತಿದೆ. ಸೂರ್ಯನನ್ನು ಅತ್ಯಂತ ನಿಖರವಾಗಿ, ಸೂರ್ಯನ ವಾತಾವರಣದ ಅತ್ಯಧಿಕ ಉಷ್ಣಾಂಶ ಹೊಂದಿರುವ ಕೊರೊನಾ ಪದರದ ಬಗ್ಗೆ ಅಧ್ಯಯನ ನಡೆಸುವುದೇ ಈ ಮಿಷನ್ನ ಗುರಿಯಾಗಿದೆ. ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಡಿ.4ರಂದು ಸಂಜೆ 4.08 ನಿಮಿಷಕ್ಕೆ ಉಡಾವಣೆಯಾಗಲಿದೆ. ಈ ಬಗ್ಗೆ ಇಸ್ರೋ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಸೂರ್ಯನ ಕ್ಲಿಷ್ಟ ಭಾಗವನ್ನು ಅಧ್ಯಯನ ಮಾಡಲು ಸಹಾಯಕ: ಪ್ರೋಬಾ- 3 ಉಪಗ್ರಹ ಏಕಾಂಗಿಯಾಗಿ ಪ್ರಯಾಣಿಸುವುದಿಲ್ಲ. ಪಿಎಸ್ಎಲ್ವಿ- ಎಕ್ಸ್ಎಲ್ ರಾಕೆಟ್ ಎರಡು ಉಪಗ್ರಹಗಳನ್ನು ಹೊತ್ತೊಯ್ಯಲಿದೆ. 200 ಕೆಜಿ ತೂಕವಿರುವ ಆಕಲ್ಟರ್ ಸ್ಪೇಸ್ಕ್ರಾಫ್ಟ್ ಮತ್ತು 340 ಕೆಜಿ ತೂಕವಿರುವ ಕೊರೊನಾಗ್ರಾಫ್ ಸ್ಪೇಸ್ಕ್ರಾಫ್ಟ್. ಉಡಾವಣೆಯ ನಿಗದಿತ ಸಮಯದ ಬಳಿಕ ಈ ಎರಡು ಉಪಗ್ರಹಗಳು ಬೇರ್ಪಟ್ಟರೂ, ಒಂದರ ಹಿಂದೆ ಒಂದರಂತೆ ಸಮನ್ವಯದಲ್ಲಿ, ಸೂರ್ಯನ ತೀವ್ರ ಬೆಳಕನ್ನು ನಿರ್ಬಂಧಿಸಿ, ಅದರ ಹೊರಗಿನ ವಾತಾವರಣವನ್ನು ಬಹಿರಂಗಪಡಿಸಲು ವಿನ್ಯಾಸಗೊಳಿಸಿರುವ ಸೌರ ಕೊರೊನಾಗ್ರಾಫ್ ಸಾಧನ ರೂಪಿಸಲು ಜೊತೆಯಾಗಿ ಕಾರ್ಯನಿರ್ವಹಿಸಲಿದೆ. ಇದು, ಸೂರ್ಯನ ಡಿಸ್ಕ್ನ ಪ್ರಖರತೆಯಿಂದಾಗಿ ವೀಕ್ಷಿಸಲು ಕಷ್ಟಕರವಾಗಿರುವ ಸೂರ್ಯ ಕೊರೊನಾ ಪದರವನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಸಹಾಯ ಮಾಡಲಿದೆ.
ಕೊರೊನಾ ಪದರದ ಅಧ್ಯಯನಕ್ಕೆ ನಿರ್ಣಾಯಕ: ಸೂರ್ಯನ ಗರಿಷ್ಠ ತಾಪಮಾನ 2 ಮಿಲಿಯನ್ ಡಿಗ್ರಿ ಫ್ಯಾರನ್‌ಹೀಟ್‌ಗೆ ತಲುಪುವ ಕಾರಣ, ಅದರ ಕೊರೊನಾ ಪದರವನ್ನು ಅಧ್ಯಯನ ಮಾಡುವುದು ಅತ್ಯಂತ ಕಷ್ಟಕರ. ಸಾಂಪ್ರದಾಯಿಕ ಉಪಕರಣಗಳೊಂದಿಗೆ ವೀಕ್ಷಿಸುವುದು ಕಷ್ಟವಾಗುತ್ತದೆ. ಈ ಸವಾಲಿನ ಹೊರತಾಗಿಯೂ, ಕೊರೊನಾ ಪದರವನ್ನು ಅಧ್ಯಯನ ಮಾಡುವುದು ನಿರ್ಣಾಯಕವಾಗಿದೆ. ಏಕೆಂದರೆ ಇದು ಬಾಹ್ಯಾಕಾಶದ ಮೂಲವಾಗಿದ್ದು, ಸೌರ ಬಿರುಗಾಳಿಗಳು, ಸೌರ ಮಾರುತಗಳು ಮತ್ತು ವಿಕಿರಣದಂತಹ ಬಾಹ್ಯಾಕಾಶ ಹವಾಮಾನ ವಿದ್ಯಮಾನಗಳ ಮೂಲಕ ಉಪಗ್ರಹ ಸಂವಹನಗಳು, ನ್ಯಾವಿಗೇಷನ್ ಸಿಸ್ಟಮ್‌ಗಳು ಮತ್ತು ಭೂಮಿಯ ಮೇಲಿನ ವಿದ್ಯುತ್ ಗ್ರಿಡ್‌ಗಳಿಗೆ ಅಡ್ಡಿಪಡಿಸುತ್ತದೆ. ಈ ನಿರ್ಣಾಯಕ ಸಂಶೋಧನೆಗೆ ಅನುಕೂಲವಾಗುವಂತೆ Proba-3 ಮೂರು ಪ್ರಮುಖ ಸಾಧನಗಳನ್ನು ಒಯ್ಯಲಿದೆ. ಅವುಗಳು, ASPIICS (Association of Spacecraft for Polarimetric and Imaging Investigation of the Corona of the Sun), DARA (Digital Absolute Radiometer) ಮತ್ತು 3DEES (3D Energetic Electron Spectrometer).
ಯುರೋಪ್ ಬಾಹ್ಯಾಕಾಶ ಸಂಸ್ಥೆ ಈಗಾಗಲೇ 2001ರಲ್ಲಿ ಪ್ರೋಬಾ- 1 ಹಾಗೂ 2009ರಲ್ಲಿ ಪ್ರೋಬಾ-2 ಮಿಸನ್ಗಳನ್ನು ಉಡಾವಣೆ ಮಾಡಿ, ಯಶಸ್ವಿಯಾಗಿ ಪೂರೈಸಿದ್ದಾರೆ. ಸೂರ್ಯನ ಬಗ್ಗೆ ಬಹಳಷ್ಟು ವಿಷಯಗಳನ್ನು ಸಂಗ್ರಹಿಸಿದ್ದಾರೆ. ಇದೀಗ ಇದರ ಮುಂದುವರಿದ ಭಾಗವಾಗಿ ಪ್ರೋಬಾ-3 ಉಪಗ್ರಹ ಉಡಾವಣೆಗೆ ಸಿದ್ಧವಾಗಿದೆ. ಪ್ರೋಬಾ-3 ಉಪಗ್ರಹ, 2001ರಲ್ಲಿ ಪ್ರೋಬಾ- 1 ಉಡಾವಣೆಯ ನಂತರ ಭಾರತದಿಂದ ಉಡಾವಣೆಯಾಗುತ್ತಿರುವ ಮೊದಲ ಮಿಷನ್ ಆಗಿದೆ.
ಪ್ರೊಬಾ- 3 ಉಡಾವಣೆಯಿಂದ ಭಾರತಕ್ಕೇನು ಪ್ರಯೋಜನ?: ಪ್ರೋಬಾ-3 ಉಪಗ್ರಹವನ್ನು ಯುರೋಪ್ನ ಬಾಹ್ಯಾಕಾಶ ಸಂಸ್ಥೆಯ ತಂತ್ರಜ್ಞಾನ ಪ್ರದರ್ಶನ ಮಿಷನ್ ಎಂದು ಹೇಳಲಾಗುತ್ತಿದೆ. ಅದರ ಉಡಾವಣೆಯಲ್ಲಿ ಭಾರತ ಪಾಲ್ಗೊಳ್ಳುತ್ತಿರುವುದು, ಇಸ್ರೋದ ಬೆಳೆಯುತ್ತಿರುವ ಸಾಮರ್ಥ್ಯ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ವಿಶ್ವಾಸಾರ್ಹತೆಯನ್ನು ಎತ್ತಿ ತೋರಿಸುತ್ತದೆ. ಪ್ರೋ-3 ಯಶಸ್ವಿ ಉಡಾವಣೆ, ಭಾರತದ ದಕ್ಷ ಮತ್ತು ವೆಚ್ಚ- ಪರಿಣಾಮಕಾರಿ ಬಾಹ್ಯಾಕಾಶ ಉಡಾವಣಾ ಸೇವೆಗಳನ್ನು ಎತ್ತಿ ತೋರಿಸುತ್ತದೆ. ಇದು ವಿಶ್ವದಾದ್ಯಂತ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಭಾರತ ಪಾಲುದಾರ ಆಗಲು ದಾರಿ ಮಾಡಿಕೊಡುತ್ತದೆ.
ಈ ಮಿಷನ್ ಇಸ್ರೋ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ನಡುವಿನ ಬೆಳೆಯುತ್ತಿರುವ ಪಾಲುದಾರಿಕೆಗೆ ಸಾಕ್ಷಿಯಾಗಿದೆ, ಹಾಗೆಯೇ ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಮತ್ತೊಂದು ಮಹತ್ವದ ಹೆಜ್ಜೆ ಗುರುತಾಗಿದೆ.
ಇದನ್ನೂ ಓದಿ: ಭಾರತದ ಉಪಗ್ರಹ ಹೊತ್ತೊಯ್ದ ಸ್ಪೇಸ್ ಎಕ್ಸ್ ರಾಕೆಟ್; ಮಸ್ಕ್ ಜೊತೆ ಇಸ್ರೋ ಕೈಜೋಡಿಸಿದ್ದು ಏಕೆ?