ನವದಹಲಿ: ದೇಶದ ರಕ್ಷಣಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸಚಿವ ಸಂಪುಟದ ಭದ್ರತಾ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತೀಯ ವಾಯುಪಡೆಯು ತನ್ನ ಪ್ರಮುಖ ಯುದ್ಧ ವಿಮಾನ ಸುಖೋಯ್-30ಗಾಗಿ 26,000 ಕೋಟಿ ರೂಪಾಯಿ ವೆಚ್ಚದಲ್ಲಿ 240 ಏರೋ ಎಂಜಿನ್‌ಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ಸೋಮವಾರ ಅನುಮೋದಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ.
ಒಂದು ವರ್ಷದ ನಂತರ ಏರೋ ಇಂಜಿನ್‌ಗಳ ವಿತರಣೆ ಆರಂಭವಾಗಲಿದೆ. ಏರ್ ಫೋರ್ಸ್‌ನ ಸುಖೋಯ್ 30 MKI ಫೈಟರ್ ಜೆಟ್‌ಗಳಿಗಾಗಿ 240 ಏರೋ-ಎಂಜಿನ್‌ಗಳನ್ನು (AL-31 FP) ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ ಖರೀದಿಸಲಾಗುತ್ತದೆ. ಈ ವಿಮಾನಗಳ ಖರೀದಿಗೆ ಎಲ್ಲಾ ತೆರಿಗೆಗಳು ಮತ್ತು ಸುಂಕಗಳು ಸೇರಿದಂತೆ 26 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ವರದಿಯಾಗಿದೆ.
ಶೇ 54ಕ್ಕೂ ಹೆಚ್ಚು ಸ್ವದೇಶಿ ಭಾಗಗಳು: ರಕ್ಷಣಾ ಸಚಿವಾಲಯ ನೀಡಿರುವ ಹೇಳಿಕೆಯಲ್ಲಿ ಈ ಎಂಜಿನ್‌ಗಳು ಶೇ 54ರಷ್ಟು ಅಧಿಕ ಸ್ವದೇಶಿ ಭಾಗಗಳನ್ನು ಹೊಂದಿರುತ್ತವೆ. ಈ ಭಾಗಗಳನ್ನು ಹೆಚ್‌ಎಎಲ್‌ನ ಕೊರಾಪುಟ್ ವಿಭಾಗದಲ್ಲಿ ತಯಾರಿಸಲಾಗುತ್ತದೆ. ಸುಖೋಯ್-30 ವಾಯುಪಡೆಯ ಅತ್ಯಂತ ಶಕ್ತಿಶಾಲಿ ವಿಮಾನ. HALನಿಂದ ಏರೋ-ಎಂಜಿನ್‌ಗಳ ಪೂರೈಕೆಯು ವಾಯುಪಡೆಯ ಫ್ಲೀಟ್ ಅವಶ್ಯಕತೆಗಳನ್ನು ಪೂರೈಸುತ್ತದೆ. ಇದರಿಂದ ದೇಶದ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಬಲಗೊಳ್ಳಲಿದೆ.
3 ಸಾವಿರ ಕಿ.ಮೀ.ವರೆಗೆ ಹೊಡೆದುರುಳಿಸಬಲ್ಲ ಸಾಮರ್ಥ್ಯ: ಇದು ರಷ್ಯಾ ನಿರ್ಮಿತ ಟ್ವಿನ್-ಸೀಟರ್ ಅವಳಿ-ಎಂಜಿನ್ ಮಲ್ಟಿರೋಲ್ ಫೈಟರ್ ಜೆಟ್. ಒಂದು ಜೆಟ್ 30 ಎಂಎಂ ಜಿಎಸ್‌ಎಚ್ ಗನ್ ಜೊತೆಗೆ 8 ಸಾವಿರ ಕೆ.ಜಿ ಬಾಹ್ಯ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಈ ವಿಮಾನವು ಗಾಳಿಯಿಂದ ನೆಲಕ್ಕೆ ಮತ್ತು ಗಾಳಿಯಿಂದ ಗಾಳಿಯಲ್ಲಿ ಏಕಕಾಲದಲ್ಲಿ ಗುರಿಗಳ ಮೇಲೆ ದಾಳಿ ಮಾಡಬಲ್ಲದು. ಸುಖೋಯ್ 30 MKI 3 ಕಿಲೋಮೀಟರ್‌ಗಳವರೆಗೆ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ. ಭಾರತೀಯ ವಾಯುಪಡೆಯು ಸದ್ಯ 260ಕ್ಕೂ ಹೆಚ್ಚು ಸುಖೋಯ್ 30 MKI ಯುದ್ಧ ವಿಮಾನಗಳನ್ನು ಹೊಂದಿದೆ.