ನವದೆಹಲಿ: 4 ಜಿಗೆ ಹೋಲಿಸಿದರೆ ಭಾರತದಲ್ಲಿ 5 ಜಿ ಬಳಕೆದಾರರು ಸುಮಾರು 3.6 ಪಟ್ಟು ಹೆಚ್ಚು ಮೊಬೈಲ್ ಡೇಟಾ ಟ್ರಾಫಿಕ್ ಬಳಸುತ್ತಿದ್ದಾರೆ ಎಂದು ವರದಿಯೊಂದು ಬುಧವಾರ ತೋರಿಸಿದೆ. 2022 ರ ಅಕ್ಟೋಬರ್ನಲ್ಲಿ 5ಜಿ ನೆಟ್ವರ್ಕ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು.
ಪ್ರತಿ ಬಳಕೆದಾರರಿಗೆ ಸರಾಸರಿ ಮಾಸಿಕ 5ಜಿ ಡೇಟಾ ಟ್ರಾಫಿಕ್ 2023 ರಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 24 ರಷ್ಟು ಏರಿಕೆಯಾಗಿದ್ದು, ಪ್ರತಿ ಬಳಕೆದಾರರಿಗೆ ತಿಂಗಳಿಗೆ 24.1 ಗಿಗಾಬೈಟ್ಗಳಿಗೆ ತಲುಪಿದೆ. ಭಾರತದಲ್ಲಿ 5 ಜಿ ಸ್ಮಾರ್ಟ್ಫೋನ್ಗಳ ಬಳಕೆಯು ವೇಗವಾಗಿ ಹೆಚ್ಚಾಗುತ್ತಿದೆ. ದೇಶದಲ್ಲಿ ಬಳಕೆಯಲ್ಲಿರುವ ಒಟ್ಟಾರೆ 796 ಮಿಲಿಯನ್ ಸಕ್ರಿಯ ಸ್ಮಾರ್ಟ್ಫೋನ್ಗಳ ಪೈಕಿ ಶೇ 17ರಷ್ಟು ಅಂದರೆ 134 ಮಿಲಿಯನ್ ಸ್ಮಾರ್ಟ್ಫೋನ್ಗಳು 5ಜಿ ಸಾಧನಗಳಾಗಿವೆ.
'ನೋಕಿಯಾ ಮೊಬೈಲ್ ಬ್ರಾಡ್ ಬ್ಯಾಂಡ್ ಇಂಡೆಕ್ಸ್' ವರದಿ ಪ್ರಕಾರ, "ಭಾರತದಲ್ಲಿ 5 ಜಿ ಡೇಟಾ ಬಳಕೆಯು 4 ಜಿ ಗಿಂತ ನಾಲ್ಕು ಪಟ್ಟು ವೇಗವಾಗಿದೆ". 2023 ರಲ್ಲಿ ಬಳಕೆದಾರರು ಒಟ್ಟಾರೆಯಾಗಿ ತಿಂಗಳಿಗೆ 17.4 ಎಕ್ಸಾಬೈಟ್ಗಳಷ್ಟು ಡೇಟಾ ಬಳಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸಿಎಜಿಆರ್ ದರ ಶೇಕಡಾ 26 ರಷ್ಟಿದೆ.
"5 ಜಿ ನೆಟ್ವರ್ಕ್ ಆರಂಭವಾಗಿರುವುದು ಡೇಟಾ ಬಳಕೆ ಗಮನಾರ್ಹವಾಗಿ ಹೆಚ್ಚಾಗಲು ಕಾರಣವಾಗಿದೆ. 2023 ರಲ್ಲಿ ಒಟ್ಟಾರೆ ಡೇಟಾ ಟ್ರಾಫಿಕ್ನಲ್ಲಿ 5ಜಿ ಡೇಟಾ ಬಳಕೆಯ ಪ್ರಮಾಣ ಶೇಕಡಾ 15 ರಷ್ಟಿದೆ" ಎಂಬುದು ಸಂಶೋಧನೆಯಲ್ಲಿ ತಿಳಿದು ಬಂದಿದೆ.
"ಭಾರತದಾದ್ಯಂತ 5 ಜಿ ತಂತ್ರಜ್ಞಾನದ ಅಸಾಧಾರಣ ಬೆಳವಣಿಗೆ ಮತ್ತು ಸೂಪರ್-ಫಾಸ್ಟ್ 5 ಜಿ ಡೇಟಾ ವೇಗಕ್ಕೆ ಬೇಡಿಕೆ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ" ಎಂದು ನೋಕಿಯಾ (ಭಾರತ) ಮೊಬೈಲ್ ನೆಟ್ವರ್ಕ್ಸ್ ವ್ಯವಹಾರದ ಮುಖ್ಯಸ್ಥ ತರುಣ್ ಛಾಬ್ರಾ ಹೇಳಿದರು.
ಎಲ್ಲ ಟೆಲಿಕಾಂ ವಲಯಗಳಲ್ಲಿ 5 ಜಿ ಟ್ರಾಫಿಕ್ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲೂ ಮೆಟ್ರೋ ನಗರಗಳಲ್ಲಿ 5ಜಿ ಬಳಕೆ ಅತ್ಯಧಿಕವಾಗಿದ್ದು, ಒಟ್ಟಾರೆ ಮೊಬೈಲ್ ಡೇಟಾ ಟ್ರಾಫಿಕ್ನಲ್ಲಿ ಮೆಟ್ರೋ ನಗರಗಳು ಶೇಕಡಾ 20 ರಷ್ಟು ಪಾಲು ಪಡೆದುಕೊಂಡಿವೆ.
ವೇಗದ 5 ಜಿ ಲಭ್ಯತೆ ಮತ್ತು ಕಾರ್ಯಕ್ಷಮತೆ, ವ್ಯಾಪಕ ಶ್ರೇಣಿಯ ಕೈಗೆಟುಕುವ ಬೆಲೆಯ ಸ್ಮಾರ್ಟ್ಪೋನ್ಗಳ ಲಭ್ಯತೆ ಮತ್ತು ದೊಡ್ಡ ಪ್ರಮಾಣದಲ್ಲಿ ಡೇಟಾ ಬಳಸುವ ಹೊಸ ಅಪ್ಲಿಕೇಶನ್ಗಳು ಮತ್ತು ಸೇವೆಗಳ ಪರಿಚಯವು ಭವಿಷ್ಯದ 5 ಜಿ ಬೆಳವಣಿಗೆಯನ್ನು ತೀವ್ರಗೊಳಿಸಲಿದೆ ಎಂದು ವರದಿ ತೋರಿಸಿದೆ.
ಇದನ್ನೂ ಓದಿ : ಗೇಮಿಂಗ್, ಇ-ಸ್ಪೋರ್ಟ್ಸ್ ವಲಯದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಗೆ ಅವಕಾಶ: ಸಿಐಐ