ನವದೆಹಲಿ: 2023 ರಲ್ಲಿ ಒಟ್ಟಾರೆ 148.6 ಮಿಲಿಯನ್ (14.8 ಕೋಟಿ) ಸ್ಮಾರ್ಟ್ಫೋನ್ಗಳ ಮಾರಾಟದೊಂದಿಗೆ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 2ರಷ್ಟು ಸಣ್ಣ ಮಟ್ಟದ ಕುಸಿತವಾಗಿದೆ ಎಂದು ಹೊಸ ವರದಿ ತಿಳಿಸಿದೆ.
ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ಯಾನಲಿಸ್ ಪ್ರಕಾರ, ಹಬ್ಬದ ಋತುವಿನಲ್ಲಿ ಸ್ಮಾರ್ಟ್ಫೋನ್ಗಳ ಮಾರಾಟ ಉತ್ತಮವಾಗಿತ್ತು. ನಾಲ್ಕನೇ ತ್ರೈಮಾಸಿಕದಲ್ಲಿ ಸ್ಮಾರ್ಟ್ಫೋನ್ಗಳ ಮಾರಾಟ 38.9 ಮಿಲಿಯನ್ ಯುನಿಟ್ಗಳಿಗೆ ಏರಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ 20 ರಷ್ಟು ಗಮನಾರ್ಹ ಹೆಚ್ಚಳವಾಗಿದೆ.
"2023ರಲ್ಲಿ ಪ್ರಮುಖ ರಿಟೇಲ್ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಹೂಡಿಕೆಯು ಮಾರಾಟಗಾರರಿಗೆ ಪ್ರಯೋಜನಕಾರಿಯಾಗಿದೆ. ಇದು ಮಾರಾಟಗಾರರು ಮಾತ್ರವಲ್ಲದೆ ಒಟ್ಟಾರೆ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಅನುವು ಮಾಡಿಕೊಟ್ಟಿದೆ" ಎಂದು ಕ್ಯಾನಲಿಸ್ನ ಹಿರಿಯ ವಿಶ್ಲೇಷಕ ಸನ್ಯಾಮ್ ಚೌರಾಸಿಯಾ ಹೇಳಿದರು.
ಸ್ಯಾಮ್ಸಂಗ್ 2023 ರ ನಾಲ್ಕನೇ ತ್ರೈಮಾಸಿಕದಲ್ಲಿ (ಕ್ಯೂ 4) ಶೇಕಡಾ 20 ರಷ್ಟು ಮಾರುಕಟ್ಟೆ ಪಾಲು ಪಡೆದಿದ್ದು, 7.6 ಮಿಲಿಯನ್ ಯುನಿಟ್ಗಳ ಮಾರಾಟದೊಂದಿಗೆ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಶಿಯೋಮಿ ತನ್ನ ದೃಢವಾದ ಕಾರ್ಯಕ್ಷಮತೆಯನ್ನು ಮುಂದುವರಿಸಿದ್ದು 7.2 ಮಿಲಿಯನ್ ಯುನಿಟ್ಗಳ ಮಾರಾಟದೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ. ಏಳು ಮಿಲಿಯನ್ ಯುನಿಟ್ ಸ್ಮಾರ್ಟ್ಫೋನ್ಗಳ ಮಾರಾಟದೊಂದಿಗೆ ವಿವೋ ಮೂರನೇ ಸ್ಥಾನ ಪಡೆದರೆ, ರಿಯಲ್ ಮಿ ಮತ್ತು ಒಪ್ಪೋ ಕ್ರಮವಾಗಿ 4.5 ಮಿಲಿಯನ್ ಮತ್ತು 3.7 ಮಿಲಿಯನ್ ಯುನಿಟ್ ಸ್ಮಾರ್ಟ್ಫೋನ್ ಮಾರಾಟದೊಂದಿಗೆ ಐದನೇ ಸ್ಥಾನದಲ್ಲಿವೆ ಎಂದು ವರದಿ ತಿಳಿಸಿದೆ.
"ಪ್ರೀಮಿಯಂ ಫೋನ್ಗಳ ವಿಭಾಗವು ದೃಢವಾದ ಬೆಳವಣಿಗೆಯನ್ನು ಕಂಡಿದೆ. ಸುಲಭ ಹಣಕಾಸು ಆಯ್ಕೆಗಳು, ಚಿಲ್ಲರೆ ವ್ಯಾಪಾರಿಗಳಿಗೆ ಪ್ರೋತ್ಸಾಹಕ ಯೋಜನೆಗಳು ಮತ್ತು ಹೆಚ್ಚುತ್ತಿರುವ ಆದಾಯಕ್ಕೆ ಧನ್ಯವಾದಗಳು" ಎಂದು ಚೌರಾಸಿಯಾ ಹೇಳಿದರು. "ನವೆಂಬರ್ 2023 ರಲ್ಲಿ ದೀಪಾವಳಿಯ ಆಚರಣೆಯ ಸಂದರ್ಭದಲ್ಲಿ ಇತ್ತೀಚಿನ ಐಫೋನ್ 15 ಸರಣಿಯನ್ನು ಮುಂಚೂಣಿಗೆ ತರಲು ಆ್ಯಪಲ್ಗೆ ಅವಕಾಶ ಸಿಕ್ಕಿತು. ಇದು ನಾಲ್ಕನೇ ತ್ರೈಮಾಸಿಕದಲ್ಲಿ ಆ್ಯಪಲ್ನ ಒಟ್ಟು ಫೋನ್ ಮಾರಾಟಕ್ಕೆ ಶೇ 50 ಕ್ಕಿಂತ ಹೆಚ್ಚು ಕೊಡುಗೆ ನೀಡಿದೆ" ಎಂದು ಅವರು ಹೇಳಿದರು.
ಪ್ರೀಮಿಯಂ ಫೋನ್ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಲು ಸ್ಯಾಮ್ಸಂಗ್ ತನ್ನ ಪ್ರೀಮಿಯಂ ಗ್ಯಾಲಕ್ಸಿ ಎಸ್ 23 ಸರಣಿಯ ಅತ್ಯಧಿಕ ಫೋನ್ಗಳನ್ನು ಮಾರಾಟ ಮಾಡುವ ಗುರಿಯನ್ನು ಹಾಕಿಕೊಂಡಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಕೈಗೆಟುಕುವ ದರದಲ್ಲಿ ಸಿಗುವ 5 ಜಿ ಸಂಪರ್ಕ ಮತ್ತು ಸಾಂಕ್ರಾಮಿಕ ಅವಧಿಯಲ್ಲಿ ಕೊಳ್ಳಲಾದ ಫೋನ್ಗಳನ್ನು ಬದಲಾಯಿಸುವ ಪ್ರವೃತ್ತಿಯಿಂದ 2024 ರಲ್ಲಿ ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯು ಒಂದಂಕಿಯ ಮಧ್ಯದ ಬೆಳವಣಿಗೆ ಸಾಧಿಸಬಹುದು ಎಂದು ಕ್ಯಾನಲಿಸ್ ನಿರೀಕ್ಷಿಸಿದೆ. ಆದರೆ ಈ ವರ್ಷ ಮಾರಾಟಗಾರರಿಗೆ ಹೆಚ್ಚುತ್ತಿರುವ ಸಾಮಗ್ರಿಗಳ ವೆಚ್ಚ ನಿರ್ವಹಿಸುವುದು ದೊಡ್ಡ ಸವಾಲಾಗಿದೆ ಎಂದು ಚೌರಾಸಿಯಾ ತಿಳಿಸಿದರು.
ಇದನ್ನೂ ಓದಿ : ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್24 ಸರಣಿಯ ಅತ್ಯಾಧುನಿಕ ಸ್ಮಾರ್ಟ್ಫೋನ್ ಬಿಡುಗಡೆ