ನವದೆಹಲಿ: ಗೂಗಲ್ ಟ್ರಾನ್ಸ್ಲೇಟ್ಗೆ ಕ್ಯಾಂಟೊನೀಸ್, ಎನ್ಕೊ (NKo) ಮತ್ತು ತಮಾಜೈಟ್ ಸೇರಿದಂತೆ 110 ಹೊಸ ಭಾಷೆಗಳನ್ನು ಸೇರಿಸಿರುವುದಾಗಿ ಗೂಗಲ್ ಗುರುವಾರ ಘೋಷಿಸಿದೆ. ವಿಶ್ವದಲ್ಲಿ ಈ ಭಾಷೆಗಳನ್ನು ಮಾತನಾಡುವ 614 ಮಿಲಿಯನ್ ಜನರಿದ್ದಾರೆ. ಇವರು ವಿಶ್ವದ ಒಟ್ಟಾರೆ ಜನಸಂಖ್ಯೆಯ ಶೇ 8ರಷ್ಟಿದ್ದಾರೆ.
ಈ ಭಾಷೆಗಳ ಪೈಕಿ ಸುಮಾರು ಕಾಲು ಭಾಗದಷ್ಟು ಹೊಸ ಭಾಷೆಗಳು ಆಫ್ರಿಕಾ ವಲಯದ್ದಾಗಿವೆ. ಇದರಲ್ಲಿ ಫೋನ್, ಕಿಕೊಂಗೊ, ಲುವೊ, ಗಾ, ಸ್ವಾತಿ, ವೆಂಡಾ ಮತ್ತು ವೊಲೊಫ್ ಭಾಷೆಗಳಿವೆ.
2022ರಲ್ಲಿ, ಗೂಗಲ್ ಜೀರೊ-ಶಾಟ್ ಯಂತ್ರ ಅನುವಾದವನ್ನು (Zero-Shot Machine Translation) ಬಳಸಿಕೊಂಡು 24 ಹೊಸ ಭಾಷೆಗಳನ್ನು ಸೇರಿಸಿತ್ತು. ಈ ವಿಧಾನದಲ್ಲಿ ಯಂತ್ರ ಕಲಿಕೆ ಮಾದರಿಯು ಹಿಂದಿನ ಯಾವುದೇ ಉದಾಹರಣೆಯನ್ನು ಬಳಸದೆ ಮತ್ತೊಂದು ಭಾಷೆಗೆ ಅನುವಾದಿಸಲು ಕಲಿಯುತ್ತದೆ.
"ನಾವು 1,000 ಭಾಷೆಗಳ ಉಪಕ್ರಮವನ್ನು ಘೋಷಿಸಿದ್ದೇವೆ. ಇದು ವಿಶ್ವದಾದ್ಯಂತ ಹೆಚ್ಚು ಮಾತನಾಡುವ 1,000 ಭಾಷೆಗಳನ್ನು ಬೆಂಬಲಿಸುವ ಎಐ (ಕೃತಕ ಬುದ್ಧಿಮತ್ತೆ) ಮಾದರಿಗಳನ್ನು ನಿರ್ಮಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಕಂಪನಿ ತಿಳಿಸಿದೆ.
ಈಗ ಸೇರ್ಪಡೆಯಾದ ಹೊಸ ಭಾಷೆಗಳಲ್ಲಿ ಪಂಜಾಬಿ (ಶಹಮುಖಿ) ಕೂಡ ಸೇರಿದೆ. ಇದು ಪರ್ಸೊ-ಅರೇಬಿಕ್ ಲಿಪಿಯಲ್ಲಿ (ಶಹಮುಖಿ) ಬರೆಯಲಾಗುವ ಪಂಜಾಬಿ ಭಾಷೆಯ ವೈವಿಧ್ಯವಾಗಿದೆ ಮತ್ತು ಪಾಕಿಸ್ತಾನದಲ್ಲಿ ಹೆಚ್ಚು ಮಾತನಾಡುವ ಭಾಷೆಯಾಗಿದೆ.
"ಟೋಕ್ ಪಿಸಿನ್ ಇಂಗ್ಲಿಷ್ ಮೂಲದ ಕ್ರಿಯೋಲ್ ಮತ್ತು ಪಪುವಾ ನ್ಯೂ ಗಿನಿಯಾದ ಆಡುಭಾಷೆಯಾಗಿದೆ. ನೀವು ಇಂಗ್ಲಿಷ್ ಮಾತನಾಡುತ್ತಿದ್ದರೆ, ಟೋಕ್ ಪಿಸಿನ್‌ಗೆ ಅನುವಾದಿಸಲು ಪ್ರಯತ್ನಿಸಿ - ನೀವು ಅರ್ಥವನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ" ಎಂದು ಗೂಗಲ್ ಹೇಳಿದೆ.
ಗೂಗಲ್ ಟ್ರಾನ್ಸ್ಲೇಟ್ ಕುರಿತು: ಗೂಗಲ್ ಭಾಷಾಂತರ ಅಥವಾ ಗೂಗಲ್ ಟ್ರಾನ್ಸ್ಲೇಟ್ ಇದು ಗೂಗಲ್ನ ಉಚಿತ ಭಾಷಾ ಅನುವಾದ ಸಾಧನವಾಗಿದೆ. ಇದು ಬಳಕೆದಾರರಿಗೆ ಪದಗಳು, ನುಡಿಗಟ್ಟುಗಳು, ಪಠ್ಯಗಳು ಮತ್ತು ಸಂಪೂರ್ಣ ವೆಬ್ ಪುಟಗಳನ್ನು ವಿವಿಧ ಭಾಷೆಗಳ ನಡುವೆ ಭಾಷಾಂತರಿಸಲು ಅನುವು ಮಾಡಿಕೊಡುತ್ತದೆ.
ಗೂಗಲ್ ಟ್ರಾನ್ಸ್ಲೇಟ್ ಹೆಚ್ಚು ನಿಖರ ಮತ್ತು ನೈಸರ್ಗಿಕವಾದ ಅನುವಾದಗಳನ್ನು ಒದಗಿಸಲು ಯಂತ್ರ ಕಲಿಕೆ ಮತ್ತು ನ್ಯೂರಲ್ ನೆಟ್ವರ್ಕ್ಗಳು ಸೇರಿದಂತೆ ಸುಧಾರಿತ ನೈಸರ್ಗಿಕ ಭಾಷಾ ಸಂಸ್ಕರಣಾ ತಂತ್ರಜ್ಞಾನಗಳನ್ನು ಬಳಸುತ್ತದೆ. ಇದು ಬ್ರೌಸರ್ ಆವೃತ್ತಿ ಮತ್ತು ಗೂಗಲ್ ಭಾಷಾಂತರ ಅಪ್ಲಿಕೇಶನ್ ಆಗಿ ಲಭ್ಯವಿದೆ. ಇದನ್ನು ಪ್ರಪಂಚದ ಯಾವುದೇ ಭಾಗದಲ್ಲಿನ ಜನರು ಸುಲಭವಾಗಿ ಬಳಸಬಹುದಾಗಿದೆ.
ಇದನ್ನೂ ಓದಿ: ಎಐ ಸಂಶೋಧನೆ: ಮುಂಚೂಣಿಯಲ್ಲಿ ಭಾರತ, ವಿಶ್ವದಲ್ಲಿ ಬೆಂಗಳೂರಿಗೆ 7ನೇ ಸ್ಥಾನ - Best AI Hub Bengaluru