ಯಾದಗಿರಿ: ಕುಡಿಯುವ ನೀರಿನ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದಿದೆ. ನಂದಕುಮಾರ ಕಟ್ಟಿಮನಿ (21) ಕೊಲೆಯಾದ ಯುವಕನಾಗಿದ್ದಾನೆ.
ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪ್ರಶ್ನೆ ಮಾಡಿದ್ದಕ್ಕೆ ಜಗಳ ವಿಕೋಪಕ್ಕೆ ತಿರುಗಿ ನಂದಕುಮಾರ ಕಟ್ಟಿಮನಿ ಎಂಬ ಯುವಕನಿಗೆ ಹಣಮಂತ ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ತಾಯಿಯ ದೂರಿನಲ್ಲಿ ಏನಿದೆ?: ಕುಡಿಯುವ ನೀರಿಗಾಗಿ ಕೊಲೆಯಾದ ಯುವಕನ ಅಜ್ಜಿ ಹಾಗೂ ನೆರೆಯ ಸಂಬಂಧಿಕ ಕುಟುಂಬಸ್ಥರ ಮಧ್ಯೆ ಬುಧವಾರ ಮಾತಿನ ಚಕಮಕಿ ನಡೆದಿತ್ತು. ಎರಡೂ ಕಡೆಯವರು ಮನೆಗಳ ನಡುವೆ ಇದ್ದ ನಲ್ಲಿಯ ನೀರು ತುಂಬಿಕೊಳ್ಳಲು ಹೋದಾಗ ಜಗಳ ಆಗಿತ್ತು. ಬಳಿಕ ಸಾಯಂಕಾಲ ಇದನ್ನು ಪ್ರಶ್ನೆ ಮಾಡಲು ತೆರಳಿದ್ದ ವೇಳೆ, ಮತ್ತೆ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ, ಜಗಳ ಮಾಡಿದ್ದಾರೆ. ಈ ವೇಳೆ ಹಣಮಂತ ಎಂಬಾತ ನಂದಕುಮಾರನಿಗೆ ಹಲ್ಲೆ ನಡೆಸಿದ್ದಲ್ಲದೆ, ಚಾಕುವಿನಿಂದ ಇರಿದಿದ್ದಾನೆ. ಜೊತೆಗೆ ಜಗಳ ಬಿಡಿಸಲು ಹೋದ ನನ್ನ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಬಳಿಕ ತೀವ್ರ ಗಾಯ ಹಾಗೂ ರಕ್ತಸ್ರಾವಗೊಂಡ ನಂದಕುಮಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ಮಹಿಳೆ ಶರಣಮ್ಮ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರಮುಖ ಆರೋಪಿ ಹಣಮಂತ ಹಾಗೂ ಆತನ ತಾಯಿ ಹನುಮವ್ವ ಅವರನ್ನು ಬಂಧಿಸಿ, ಮುಂದಿನ ಕ್ರಮ ಜರುಗಿಸಿದ್ದಾರೆ. ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ವ್ಯಕ್ತಿ ಕೊಲೆ: ದೂರು ನೀಡಿದ್ದ ಸ್ನೇಹಿತರೇ ಅರೆಸ್ಟ್ ಆಗಿದ್ದೇಕೆ? - Murder Case