ಗಂಗಾವತಿ(ಕೊಪ್ಪಳ): ಸರ್ಕಾರಿ ಸೇವೆಗೆ ಸೇರಿದ ಬಳಿಕ ಹುಟ್ಟೂರಿನಲ್ಲೇ ಸೇವೆ ಸಲ್ಲಿಸುವ ಅವಕಾಶ ಸಿಕ್ಕರೆ ಅದೇ ಅದೃಷ್ಟ. ಅಂಥ ಅದೃಷ್ಟ ಇದೀಗ ಜಿಲ್ಲೆಯ ಯುವತಿಗೆ ಒದಗಿಬಂದಿದೆ.
ಕಾರಟಗಿ ತಾಲೂಕಿನ ಮರಳಿ ಹೋಬಳಿಯ ಮುಸ್ಟೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯೆಯಾಗಿ ಅದೇ ಗ್ರಾಮದ ಮಾಸ್ಟರ್ ಈರಣ್ಣ ಹೆಬ್ಬಾಳ ಎಂಬವರ ಪುತ್ರಿ ನೇತ್ರಾವತಿ ನಿಯೋಜನೆಗೊಂಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾಗದ ಸರ್ಕಾರದ ಆದೇಶದ ಪ್ರತಿ ಹಿಡಿದು ನೇತ್ರಾವತಿ ಗ್ರಾಮಕ್ಕೆ ಭೇಟಿ ನೀಡಿದರು. ತಮ್ಮದೇ ಊರಿನ ಕುಡಿ ಮತ್ತೆ ತಮ್ಮ ಸೇವೆಗೆ ಬಂದಿರುವುದನ್ನು ಕಂಡು ಮುಷ್ಟೂರ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ವೈದ್ಯೆಯಾಗಿ ಗ್ರಾಮಕ್ಕೆ ಬಂದ ಯುವತಿಯನ್ನು ಗ್ರಾಮಸ್ಥರು ಆದರದಿಂದ ಬರಮಾಡಿಕೊಂಡು ಸನ್ಮಾನಿಸಿದರು. ಈ ಬಗ್ಗೆ ಮಾತನಾಡಿದ ಗ್ರಾಮದ ಮುಖಂಡ ವಾನಭದ್ರಪ್ಪ, "ತಮ್ಮೂರಿನ ಯುವತಿ ತನ್ನದೇ ಗ್ರಾಮದ ಜನರ ಸೇವೆಗೆ ಆಗಮಿಸಿರುವುದು ನಮಗೆ ಹೆಮ್ಮೆ ತಂದಿದೆ. ನಮ್ಮ ನೋವು-ನಲಿವುಗಳನ್ನು ಹತ್ತಿರದಿಂದ ಬಲ್ಲವರೇ ನಮಗೆ ಆರೋಗ್ಯ ಸೇವೆ ನೀಡಲು ಮುಂದಾಗಿರುವುದು ನಿಜಕ್ಕೂ ಸಂತಸ ತಂದಿದೆ. ಇಲ್ಲೇ ಹುಟ್ಟಿ ಬೆಳೆದು, ಪ್ರಾಥಮಿಕ ಶಿಕ್ಷಣ ಪಡೆದ ನೇತ್ರಾವತಿ ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಕುಕನೂರಿನ ನವೋದಯ ವಿದ್ಯಾಲಯದಲ್ಲಿ ಪಡೆದಿದ್ದಾರೆ. ವೈದ್ಯಕೀಯ ಶಿಕ್ಷಣವನ್ನು ಬೀದರ್ನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಪೂರ್ಣಗೊಳಿಸಿದ್ದಾರೆ" ಎಂದು ಹೇಳಿದರು.
ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ನೇತ್ರಾವತಿ, "ಗ್ರಾಮದ ಜನರು ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು 8 ಕಿಲೋ ಮೀಟರ್ ದೂರದ ಶ್ರೀರಾಮನಗರ ಅಥವಾ 12 ಕಿಲೋ ಮೀಟರ್ ದೂರದಲ್ಲಿರುವ ಗಂಗಾವತಿಗೆ ಹೋಗಬೇಕು. ನನ್ನೂರಿನ ಜನರಿಗೆ ಅವರಿದ್ದಲ್ಲೇ ಗುಣಮಟ್ಟದ ಆರೋಗ್ಯದ ಸೇವೆ ನೀಡುತ್ತೇನೆ. ಸರ್ಕಾರದ ಆಶಯವೂ ಇದೇ ಆಗಿದೆ. ಜನರ ಆಶಯ, ಸರ್ಕಾರದ ಗುರಿಯಂತೆ ಕೆಲಸ ಮಾಡುತ್ತೇನೆ. ಹುಟ್ಟೂರಿನಲ್ಲಿ ಕೆಲಸ ಮಾಡುವ ಅವಕಾಶ ಎಲ್ಲರಿಗೂ ಸಿಗದು" ಎಂದರು.
ಇದನ್ನೂ ಓದಿ: 33 ಡಿವೈಎಸ್ಪಿ, 132 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ