ಮಂಗಳೂರು: ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಯುವತಿ ಮೃತಪಟ್ಟ ಘಟನೆ ಮಂಗಳೂರಿನ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ನಡೆದಿದೆ. ಕಲ್ಲಕಲಂಬಿ ನಿವಾಸಿ ಹರೀಶ್ ಶೆಟ್ಟಿ ಎಂಬವರ ಪುತ್ರಿ ಆಶ್ನಿ ಶೆಟ್ಟಿ (20) ಮೃತರು. ಇವರು ಸಿಎ ಅಭ್ಯಾಸ ಮಾಡುತ್ತಿದ್ದರು.
ಹರೀಶ್ ಮನೆಯಲ್ಲಿ ಸಣ್ಣ ಪ್ರಮಾಣದ ಹೈನುಗಾರಿಕೆ ನಡೆಸುತ್ತಿದ್ದು ಎಂದಿನಂತೆ ಶುಕ್ರವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ದನ ಮೇಯಿಸಲು ತೆರಳಿದ್ದರು. ಅವರೊಂದಿಗೆ ಮನೆ ನಾಯಿಯೂ ತೆರಳಿತ್ತು. ತಂದೆಯೊಂದಿಗೆ ತೆರಳಿದ್ದ ನಾಯಿಯನ್ನು ಕರೆತರಲು ಆಶ್ನಿ ಹೋಗಿದ್ದರು. ನಾಯಿ ಗದ್ದೆಯಲ್ಲಿದ್ದ ನೀರಿಗೆ ತೆರಳಿರುವುದನ್ನು ಕಂಡ ಆಶ್ನಿ ನಾಯಿಯನ್ನು ಹಿಡಿಯಲು ನೀರಿಗಿಳಿದಾಗ ವಿದ್ಯುತ್ ಆಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಗದ್ದೆಯಲ್ಲಿದ್ದ ವಿದ್ಯುತ್ ಕಂಬದಿಂದ ತಂತಿ ತುಂಡಾಗಿ ಕೆಳಗೆ ಬಿದ್ದಿತ್ತು. ಇದರಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ನೀರಿನಲ್ಲಿ ವಿದ್ಯುತ್ ಹರಿದು ದುರ್ಘಟನೆ ಸಂಭವಿಸಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಮೆಸ್ಕಾಂಗೆ ಮಾಹಿತಿ ನೀಡಿದ್ದು, ವಿದ್ಯುತ್ ಕಡಿತಗೊಳಿಸಿದ ಬಳಿಕ ನಾಯಿ ಮತ್ತು ಆಶ್ನಿ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ.
ಮಳೆಗೆ 10 ಬಲಿ: ಮಳೆ ಸಂಬಂಧಿ ಘಟನೆಗಳಿಂದ ದಕ್ಷಿಣ ಕನ್ನಡದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇದರಲ್ಲಿ ತುಂಡಾದ ವಿದ್ಯುತ್ ತಂತಿ ಸ್ಪರ್ಶಿಸಿ ಈವರೆಗೆ 4 ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: 5ನೇ ದಿನವೂ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ; ಹಲವೆಡೆ ರಸ್ತೆ ಸಂಚಾರ ಬಂದ್ - Kukke Subramanya