ಮಂಗಳೂರು: ಶಸ್ತ್ರಚಿಕಿತ್ಸೆಗೊಳಗಾದ ಉಳ್ಳಾಲದ 32 ವರ್ಷದ ಯುವಕನೊಬ್ಬ ಮೃತಪಟ್ಟ ಘಟನೆ ನಗರದ ಬೆಂದೂರ್‌ವೆಲ್‌ನಲ್ಲಿರುವ ಕಾಸ್ಮೆಟಿಕ್ ಸರ್ಜರಿ ಕೇಂದ್ರದಲ್ಲಿ ಸೆ.21ರಂದು ನಡೆದಿದೆ.
ತಾಯಿಯ ದೂರಿನ ವಿವರ: 'ಸರ್ಜರಿ ಮಾಡಿಸಲು ನಮ್ಮ ಪುತ್ರನನ್ನು ಕ್ಲಿನಿಕ್ಗೆ ಕರೆದುಕೊಂಡು ಬರಲಾಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಆತನಿಗೆ ಪ್ರಜ್ಞೆ ಬಂದಿರಲಿಲ್ಲ. ಆ ಬಳಿಕ ಆತನನ್ನು ಮಂಗಳೂರಿನ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಮೃತಪಟ್ಟಿದ್ದಾನೆಂದು ತಿಳಿಸಿದರು' ಎಂದು ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆತನಿಗೆ ಹೇರ್ ಟ್ರಾನ್ಸ್‌ಪ್ಲ್ಯಾಂಟ್ ಕ್ಲಿನಿಕ್ನ ವೈದ್ಯರು ಚಿಕಿತ್ಸೆಯ ಸಮಯದಲ್ಲಿ ತೋರಿದ ನಿರ್ಲಕ್ಷ್ಯತದಿಂದ ಮೃತಪಟ್ಟಿರುವ ಸಂಶಯವಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಬಂಧಿ ಕೂಡ ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಸಂಬಂಧಿಕರು ದೂರು ನೀಡಿದ್ದು, ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರೋಗ್ಯಾಧಿಕಾರಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್.ಆರ್.ತಿಮ್ಮಯ್ಯ ತಮ್ಮ ತಂಡದೊಂದಿಗೆ ಕ್ಲಿನಿಕ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಸೆ.21ರಂದು ಶಸ್ತ್ರಚಿಕಿತ್ಸೆಗೆ ಅವರು ಬಂದಿದ್ದರು. ಚಿಕಿತ್ಸೆಯ ಬಳಿಕ ಮೃತಪಟ್ಟಿರುವುದು ತಿಳಿದು ಬಂದಿದೆ. ಆರೋಗ್ಯ ಇಲಾಖೆಯ ತಂಡ ಪರಿಶೀಲನೆ ನಡೆಸಿ ಪ್ರಾಥಮಿಕ ವರದಿಯನ್ನು ದ.ಕ ಜಿಲ್ಲಾಧಿಕಾರಿಗೆ ನೀಡಲಿದೆ. ಸಮಗ್ರ ತನಿಖೆಗೆ ತಜ್ಞರ ತಂಡ ರಚಿಸಿ ವರದಿ ಕೊಡಲು ಸೂಚಿಸಲಾಗುವುದು. ಅವರು ನೀಡಿದ ವರದಿಯನ್ನು ಜಿಲ್ಲಾಧಿಕಾರಿ ಮತ್ತು ಆರೋಗ್ಯ ಇಲಾಖೆಯ ಸಚಿವರಿಗೆ ನೀಡಲಾಗುವುದು" ಎಂದು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಪ್ರತಿಕ್ರಿಯೆ: ಈ ಸಂಬಂಧ 'ಈಟಿವಿ ಭಾರತ' ಜೊತೆಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್. ತಿಮ್ಮಯ್ಯ, ''ಘಟನೆ ಹಿನ್ನೆಲೆಯಲ್ಲಿ ಹೇರ್ ಟ್ರಾನ್ಸ್‌ಪ್ಲ್ಯಾಂಟ್ ಕ್ಲಿನಿಕ್ನಲ್ಲಿ ಪರಿಶೀಲನೆ ನಡೆಸಿ, ಅದನ್ನು ಬಂದ್ ಮಾಡಲಾಗಿದೆ. ಈ ಬಗ್ಗೆ ವರದಿ ನೀಡಲು ಆರೋಗ್ಯಾಧಿಕಾರಿಗಳ ನೇತೃತ್ವದ 8 ಮಂದಿ ತಜ್ಞ ವೈದ್ಯರ ತಂಡ ರಚಿಸಲಾಗಿದೆ. ಇವರು ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ'' ಎಂದು ತಿಳಿಸಿದರು.