ದಾವಣಗೆರೆ: ಪ್ರೊ ಕಬಡ್ಡಿ ಲೀಗ್ ಸೀಸನ್ 11 ಆವೃತ್ತಿಗೆ ಕರ್ನಾಟಕದ ಬೆಂಗಳೂರು ಬುಲ್ಸ್ ತಂಡಕ್ಕೆ ಇದೇ ಮೊದಲ ಬಾರಿಗೆ ದಾವಣಗೆರೆಯ ಕಬಡ್ಡಿಪಟುವೊಬ್ಬರು ಆಯ್ಕೆಯಾಗಿದ್ದಾರೆ. ಹೌದು, ದಾವಣಗೆರೆಯ ಭಾರತ್ ಕಾಲೊನಿ ಸಮೀಪದ ಕಬ್ಬೂರು ಬಸಪ್ಪ ನಗರದ ನಿವಾಸಿ ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡಾಪಟು ಚಂದ್ರನಾಯ್ಕ ಈ ಬಾರಿ ಬುಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಒಂದೆಡೆ ಕಡು ಬಡತನ, ಮತ್ತೊಂದು ಕಡೆ ತಂದೆ-ತಾಯಿ ಮರಣದಿಂದ ಧೃತಿಗೆಡದ ಚಂದ್ರನಾಯ್ಕ, ಆರನೇ ತರಗತಿಯಿಂದಲೇ ಕಬಡ್ಡಿ ಬಗ್ಗೆ ವಿಶೇಷ ಒಲವಿನೊಂದಿಗೆ ಸುಮಾರು 10 ವರ್ಷ ಕಬಡ್ಡಿ ಕೋರ್ಟ್ನಲ್ಲಿ ಬೆವರು ಹರಿಸಿ ಈ ಹಂತಕ್ಕೆ ಬಂದಿದ್ದಾರೆ. 8 ಬಾರಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿರುವ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಇಷ್ಟೇ ಅಲ್ಲ, ವಿಶ್ವವಿದ್ಯಾಲಯ ಹಂತ, ಖೇಲೋ ಇಂಡಿಯಾ ನ್ಯಾಷನಲ್ಸ್ನಲ್ಲೂ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಿದ್ದರು.
ಚಂದ್ರನಾಯ್ಕ್ ಧಾರವಾಡದಲ್ಲಿರುವ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಹಾಸ್ಟೆಲ್ನಲ್ಲಿದ್ದುಕೊಂಡು ಮೂರು ವರ್ಷ ತರಬೇತಿ ಪಡೆದಿದ್ದರು. ದಾವಣಗೆರೆಯ ಸೃಷ್ಟಿ ಕಬಡ್ಡಿ ಅಕಾಡೆಮಿಯ ಕೋಚ್ ಶ್ರೀಶೈಲ ಅವರಿಂದಲೂ ತರಬೇತಿ ಪಡೆದಿದ್ದರು. ಅಂಡರ್ 24 ಯುವ ಕಬಡ್ಡಿ ಸರಣಿಯಲ್ಲಿ 'ಕಾಜಿರಂಗ ರೈನೋಸ್' ತಂಡದ ನಾಯಕನಾಗಿ ತಂಡ ಮುನ್ನಡೆಸಿದ್ದರು. ಇತ್ತೀಚಿಗೆ ಕನ್ಯಾಕುಮಾರಿಯಲ್ಲಿ ನಡೆದ ಕಬಡ್ಡಿ ಆಯ್ಕೆ ಟ್ರಯಲ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬುಲ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆ.18ಕ್ಕೆ ತಂಡ ಸೇರಲಿದ್ದಾರೆ.
ಈ ಕುರಿತು ಚಂದ್ರನಾಯ್ಕ್ 'ಈಟಿವಿ ಭಾರತ್' ಜೊತೆಗೆ ಮಾತನಾಡಿ, "ಪ್ರೊ ಕಬಡ್ಡಿ ಲೀಗ್ ಆಯ್ಕೆಗಾಗಿ ನಿರಂತರ ಅಭ್ಯಾಸ ನಡೆಸಿದ್ದೆ. ಪ್ರಯತ್ನ ಬಿಡದೆ ಅಭ್ಯಾಸ ಮಾಡಿ, ಎಲ್ಲಾ ಕಬಡ್ಡಿ ಸೆಲೆಕ್ಷನ್‌ನಲ್ಲಿ ಭಾಗವಹಿಸಿದ್ದೆ. ಈಗ ಫಲ ಸಿಕ್ಕಿದೆ. ದಸರಾ ರಜೆ ಮತ್ತು ಪರೀಕ್ಷೆ ಮುಗಿದ ಬಳಿಕ ಸಿಗುತ್ತಿದ್ದ ರಜೆಗಳಲ್ಲಿ ನಮ್ಮ ಅಣ್ಣನೊಂದಿಗೆ ಟೈಲ್ಸ್ ಕೆಲಸಕ್ಕೆ ಹೋಗುತ್ತಿದೆ. ಎಷ್ಟೇ ಕಷ್ಟವಾದರೂ ಕಬಡ್ಡಿ ಅಭ್ಯಾಸ ಬಿಡಬಾರದು, ಬೆಳಗ್ಗೆ ಮತ್ತು ಸಂಜೆ ಇದಕ್ಕೆಂದೇ ಸಮಯ ಮೀಸಲಿಡಬೇಕು. ದಿನಕ್ಕೆ ಒಂದು ಗಂಟೆಯಾದರೂ ಅಭ್ಯಾಸ ಮಾಡಿದರೆ ಒಂದಲ್ಲೊಂದು ದಿನ ಯಶಸ್ಸು ಸಿಗುತ್ತದೆ" ಎಂದರು.
"ನನ್ನ ತಾಯಿಯ ಮರಣದ ನಂತರ ಒಂದು ರೂಮ್ ಮಾಡಿಕೊಂಡು ಒಬ್ಬನೇ ಇದ್ದು, ಅಭ್ಯಾಸ ನಡೆಸಿದ್ದೆ. ಎರಡ್ಮೂರು ತಿಂಗಳು ಕಠಿಣ ಶ್ರಮದಿಂದ ಕೊನೆಯ ಚಾನ್ಸ್ನಲ್ಲಿ ಆಯ್ಕೆಯಾಗಿದ್ದೇನೆ, ತುಂಬಾ ಖುಷಿಯಾಗುತ್ತಿದೆ. ನಾನು ರೈಟ್ ಕಾರ್ನರ್ ಮತ್ತು ಲೆಫ್ಟ್ ಕಾರ್ನರ್ ಎರಡರಲ್ಲೂ ರೈಡ್ ಮಾಡುತ್ತೇನೆ. ಪ್ರೊ ಕಬಡ್ಡಿಯಲ್ಲಿ ಆಡಬೇಕೆಂಬುದು ನನ್ನ ಕನಸಾಗಿತ್ತು. ಸದ್ಯ ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾಗಿದ್ದು ತುಂಬಾ ಸಂತಸವಾಗುತ್ತಿದೆ. ಬಾಗಲಕೋಟೆಯ ಮುತ್ತು ಎಂಬವರು ಆರ್ಥಿಕವಾಗಿ ತುಂಬಾ ನನಗೆ ಸಹಾಯ ಮಾಡಿದ್ದಾರೆ. ಭಾನುವಾರ ಬಿಟ್ಟು ಇನ್ನುಳಿದ ಎಲ್ಲಾ ದಿನ ಅಭ್ಯಾಸ ಮಾಡುತ್ತಿರುತ್ತೇನೆ" ಎಂದು ತಿಳಿಸಿದರು.
ಇದನ್ನೂ ಓದಿ: 'ಸಾರ್ಕೋಮಾ ಕ್ಯಾನ್ಸರ್' ಜಾಗೃತಿ: ಎಚ್ಸಿಜಿ ಕ್ಯಾನ್ಸರ್ ಸೆಂಟರ್ ವತಿಯಿಂದ 5ಕೆ ವಾಕಥಾನ್ - Sarcoma Cancer Walkathon