ಚಿಕ್ಕೋಡಿ (ಬೆಳಗಾವಿ): ಯುವತಿಯನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಯುವಕನೋರ್ವ ಮನೆಗೆ ನುಗ್ಗಿ ಆಕೆಯ ತಾಯಿ ಮತ್ತು ಸಹೋದರನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಗ್ರಾಮದ ಮಂಗಲ ನಾಯಿಕ (42) ಹಾಗೂ ಪ್ರಜ್ವಲ ನಾಯಿಕ (18) ಕೊಲೆಯಾದ ತಾಯಿ, ಮಗ ಎಂದು ಗುರುತಿಸಲಾಗಿದೆ. ಮಾರಕಾಸ್ತ್ರಗಳಿಂದ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿ ಆರೋಪಿಯು ಪರಾರಿಯಾಗಿದ್ದ. ಘಟನೆ ಮಾಹಿತಿ ತಿಳಿದು ನಿಪ್ಪಾಣಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ರವಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮದುವೆಗೆ ತಾಯಿ ವಿರೋಧ: ಮೃತ ಮಂಗಲ ನಾಯಿಕ ಮಗಳನ್ನು ಮದುವೆ ಮಾಡಿಕೊಡುವಂತೆ ಆಗಾಗ್ಗೆ ಆರೋಪಿ ರವಿ ಪೀಡಿಸುತ್ತಿದ್ದ. ಆದರೆ, ಮಗಳನ್ನು ನಿನಗೆ ಮದುವೆ ಮಾಡಿ ಕೊಡುವುದಿಲ್ಲ ಎಂದು ತಾಯಿ ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಕುಪಿತಗೊಂಡ ರವಿಯು ಮಂಗಲ ಹಾಗೂ ಪ್ರಜ್ವಲ್ರನ್ನು ಕೊಲೆ ಮಾಡಿದ್ದಾನೆ. ಬಚಾವಾದ ಮಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಇನ್ಶೂರೆನ್ಸ್ ಹಣಕ್ಕಾಗಿ ಸ್ನೇಹಿತರ ಜೊತೆಗೂಡಿ ಅಣ್ಣನನ್ನೇ ಕೊಂದ ತಮ್ಮ!