ಬೆಂಗಳೂರು: ಲಿಫ್ಟ್ ಪಡೆದಿದ್ದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ತಮಿಳುನಾಡು ಮೂಲದ ಮುಕೇಶ್ವರನ್ ಎಂದು ಗುರುತಿಸಲಾಗಿದೆ. ಆರೋಪಿಯು ನಗರದಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದ. ಕೃತ್ಯದ ಬಳಿಕ ಆಡುಗೋಡಿಯ ತನ್ನ ಮನೆಯಲ್ಲಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಶನಿವಾರ ರಾತ್ರಿ ತನ್ನ ಸ್ನೇಹಿತರೊಂದಿಗೆ ಕೋರಮಂಗಲದ ಪಬ್ಗೆ ಪಾರ್ಟಿಗೆ ಬಂದಿದ್ದ ಯುವತಿ, ಮನೆಗೆ ತೆರಳುವಾಗ ಆರೋಪಿಯ ಬಳಿ ಲಿಫ್ಟ್ ಕೇಳಿದ್ದಳು. ಲಿಫ್ಟ್ ಕೊಡುವ ನೆಪದಲ್ಲಿ ಆಕೆಯನ್ನು ಬೊಮ್ಮನಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಆರೋಪಿ, ಯುವತಿಯ ಬಟ್ಟೆ ಹರಿದು ದುಷ್ಕೃತ್ಯಕ್ಕೆ ಯತ್ನಿಸಿದ್ದ. ಈ ವೇಳೆ ಯುವತಿಯೂ ಸಹ ಪ್ರತಿರೋಧವೊಡ್ಡಿದ್ದು, ಆತನ ಬಟ್ಟೆ ಹರಿದು, ಮುಖಕ್ಕೆ ಪರಚಿದ್ದಳು. ಇದೇ ವೇಳೆ ಎಸ್ಓಎಸ್ ಅಲರ್ಟ್ ಆಧರಿಸಿ ಯುವತಿಯ ಸ್ನೇಹಿತರು ಸ್ಥಳಕ್ಕೆ ಬರುತ್ತಿದ್ದಂತೆ, ಆರೋಪಿ ಓಡಿ ಹೋಗಿದ್ದ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಡಿಸಿಪಿ ಹೇಳಿದ್ದು ಹೀಗೆ: ಲಿಫ್ಟ್ ಪಡೆದಿದ್ದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಮುಕೇಶ್ವರನ್ (24) ಎಂಬ ಆರೋಪಿಯನ್ನ ಬಂಧಿಸಲಾಗಿದೆ ಎಂದು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ. ತಮಿಳುನಾಡು ಮೂಲದವನಾಗಿರುವ ಆರೋಪಿ 2003ರಿಂದ ಬೆಂಗಳೂರಿನಲ್ಲಿ ವಾಸವಿದ್ದ. ಈ ಮೊದಲು ಆತನ ವಿರುದ್ಧ ಯಾವುದೇ ಅಪರಾಧ ಹಿನ್ನೆಲೆ ಇರಲಿಲ್ಲ. ನಗರದ ಡ್ಯಾನ್ಸ್ ಸ್ಕೂಲ್ ಒಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡಿಕೊಂಡು ಎಸ್.ಆರ್. ನಗರದಲ್ಲಿ ವಾಸವಿದ್ದ ಎಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದರು.
ಸಂತ್ರಸ್ತೆ ಆರ್ಮಿ ಅಧಿಕಾರಿಯೊಬ್ಬರ ಪುತ್ರಿ. ನಗರದಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ, ಶನಿವಾರ ರಾತ್ರಿ ಸ್ನೇಹಿತರೊಂದಿಗೆ ಡಿನ್ನರ್ ಪಾರ್ಟಿಗೆ ಬಂದು ವಾಪಸಾಗುತ್ತಿದ್ದಳು. ಆರೋಪಿ ಸಹ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ದ್ವಿಚಕ್ರ ವಾಹನದಲ್ಲಿ ವಾಪಸ್ ಹೋಗುತ್ತಿದ್ದಾಗ ಆತನ ಬಳಿ ಯುವತಿ ಲಿಫ್ಟ್ ಕೇಳಿದ್ದಳು. ಪಾನಮತ್ತನಾಗಿದ್ದ ಆರೋಪಿ ಮಾರ್ಗ ಮಧ್ಯೆ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೃತ್ಯ ಎಸಗಿದ್ದಾನೆ. ಈ ಸಂದರ್ಭದಲ್ಲಿಯುವತಿಯೂ ಸಹ ಪ್ರತಿರೋಧ ತೋರಿದ್ದಳು. ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ಆರೋಪಿಯನ್ನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿಯ ಮೇಲೆ ಅತ್ಯಾಚಾರ ಯತ್ನ, ಪ್ರಕರಣ ದಾಖಲು - SUSPECTED RAPE ON A GIRL