ಬೆಳಗಾವಿ : ಕುಡಗೋಲು ಮತ್ತು ಕಲ್ಲಿನಿಂದ ಜಜ್ಜಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸವದತ್ತಿ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಹೊಸೂರು ಗ್ರಾಮದ ಮಂಜು ದೇಮಪ್ಪ ಕೋಲಕಾರ (24) ಕೊಲೆಗೀಡಾಗಿರುವ ಯುವಕ.
ಶುಕ್ರವಾರ ಮಂಜು ತನ್ನ ಸ್ನೇಹಿತನ ಜೊತೆಗೆ ಒಕ್ಕುಂದ ಗ್ರಾಮದಲ್ಲಿರುವ ಸಹೋದರಿಗೆ ಔಷಧಿ ಕೊಟ್ಟು ಬರಲು ತೆರಳಿದ್ದ. ಬಳಿಕ ಸಂಜೆ 7 ಗಂಟೆ ಸುಮಾರಿಗೆ ಇಂಗಳಗಿ ರಸ್ತೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿತ್ತು. ಶವದ ಪಕ್ಕದಲ್ಲಿ ರಕ್ತದ ಕಲೆ ಮೆತ್ತಿದ್ದ ಕುಡಗೋಲು, ಕಲ್ಲು ಕಂಡು ಬಂದಿವೆ. ಮಂಜು ಸ್ನೇಹಿತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಮುರಗೋಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಮುರಗೋಡ ಪೊಲೀಸರು ತನಿಖೆ ಮುಂದುವರೆಸಿದ್ದು, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮೃತನ ತಂದೆ ದೇಮಪ್ಪ ಭೀಮಪ್ಪ ಕೋಲಕಾರ ಮಾತನಾಡಿ, ''ಅವನ ಗೆಳೆಯನ ಜೊತೆಗೆ ಹೊರಗೆ ಹೋಗಿ ವಾಪಸ್ ಬಂದಿರಲಿಲ್ಲ. ಹಾಗಾಗಿ, ನಿನ್ನೆ ಸಾಯಂಕಾಲ ಐದು ಗಂಟೆ ಸುಮಾರಿಗೆ ಬೈಲಹೊಂಗಲಕ್ಕೆ ಹೋಗಿ ಹುಡುಕಾಡಿ ಬಂದಿದ್ದೆವು. ಆದರೆ, ಅಲ್ಲಿ ನಮಗೆ ಸಿಕ್ಕಿರಲಿಲ್ಲ. ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ನಂತರ ನೋಡಿದರೆ ಮಗನ ಕೊಲೆ ಆಗಿದೆ. ಆತನ ಜೊತೆ ಹೋಗಿದ್ದವ ಈಗ ಊರು ಬಿಟ್ಟಿದ್ದು, ಅವನ ಮೇಲೆ ಅನುಮಾನ ಇದೆ. ಅಲ್ಲದೆ, ಹೊಲದ ಜಗಳ ಕೂಡ ಇತ್ತು. ಆ ಹೊಲದವರ ಮೇಲೂ ಅನುಮಾನವಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಿ, ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕೆಂದು'' ಆಗ್ರಹಿಸಿದರು.
ತಮ್ಮನನ್ನೇ ಚಾಕುವಿನಿಂದ ಇರಿದು ಕೊಂದ ಅಣ್ಣ (ಪ್ರತ್ಯೇಕ ಪ್ರಕರಣ) : ಮತ್ತೊಂದೆಡೆ ಕುಡಿದ ನಶೆಯಲ್ಲಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ ಘಟನೆ ಹಾವೇರಿ ತಾಲೂಕಿನ ನೆಲೋಗಲ್ ಗ್ರಾಮದ ತಾಂಡಾದಲ್ಲಿ ನಡೆದಿದೆ. ಹನುಮಂತಪ್ಪ (42) ಕೊಲೆಯಾದವರು. ಶಂಕ್ರಪ್ಪ (55) ಕೊಲೆ ಮಾಡಿದ ಆರೋಪಿ.
ಶಂಕ್ರಪ್ಪ ಮದ್ಯ ಕುಡಿದು ಬಂದು ಸಹೋದರ ಹನುಮಂತಪ್ಪನ ಜೊತೆ ಜಗಳ ತೆಗೆದಿದ್ದ. ಈ ವೇಳೆ, ಇಬ್ಬರ ಮಧ್ಯದ ಜಗಳ ವಿಕೋಪಕ್ಕೆ ಹೋಗಿದೆ. ನಶೆಯಲ್ಲಿದ್ದ ಶಂಕ್ರಪ್ಪ ಕೋಪದಿಂದ ತಮ್ಮನ ಎದೆಗೆ ಚೂರಿ ಹಾಕಿದ್ದರಿಂದ ತೀವ್ರ ರಕ್ತಸ್ರಾವವಾಗಿ ಹನುಮಂತಪ್ಪ ಆಸ್ವಸ್ಥಗೊಂಡಿದ್ದನು. ತಕ್ಷಣವೇ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಹನುಮಂತಪ್ಪ ಸಾವನ್ನಪ್ಪಿದ್ದಾನೆ. ಈ ಕುರಿತು ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ ಎಂದು ಹಾವೇರಿ ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : ಹಾವೇರಿ: ಕುಡಿದ ಮತ್ತಿನಲ್ಲಿ ತಮ್ಮನ ಎದೆಗೆ ಇರಿದು ಕೊಂದ ಅಣ್ಣ