ಮೈಸೂರು: ರೇಣುಕಾಚಾರ್ಯ ನೇತೃತ್ವದಲ್ಲಿ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿದ್ದ ಸುದ್ದಿಗೋಷ್ಠಿಯಲ್ಲಿ ವಿಜಯೇಂದ್ರ ಬಣದ ಬಿಜೆಪಿ ಕಾರ್ಯಕರ್ತರೊಬ್ಬರು ಎದ್ದು ನಿಂತು, ಕೊಡಲೇ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಗಲಾಟೆ ಮಾಡಿದ ಪ್ರಸಂಗ ಇಂದು ನಡೆಯಿತು.
ವಿಜಯೇಂದ್ರ ಬಣದ 38ಕ್ಕೂ ಹೆಚ್ಚು ಮಾಜಿ ಸಚಿವರು, ಮಾಜಿ ಶಾಸಕರು, ರೇಣುಕಾಚಾರ್ಯ, ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿ, ಬಳಿಕ ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು "ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ, ಆತನಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಬೇಸರವಾಗಿದೆ. ಅವನು ಬಿಜಾಪುರದಲ್ಲಿ ಸುದ್ದಿಗೋಷ್ಠಿ ಮಾಡುತ್ತಾನೆ. ನೀವು ಮೈಸೂರಿನಲ್ಲಿ ಸುದ್ದಿಗೋಷ್ಠಿ ಮಾಡುತ್ತೀರಿ. ಇದರಿಂದ ಏನೂ ಪ್ರಯೋಜನ ಇಲ್ಲ. ಯತ್ನಾಳ್ ಪಕ್ಷವನ್ನೇನು ಕಟ್ಟಿಲ್ಲ. ಕೂಡಲೇ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ" ಎಂದು ಗದ್ದಲ ಎಬ್ಬಿಸಿದರು.
ತಕ್ಷಣ ಸಮಾಧಾನ ಮಾಡಿದ ನಾಯಕರುಗಳು, ನಂತರ ಸುದ್ದಿಗೋಷ್ಠಿ ಮುಂದುವರಿಸಿದರು. ಸುದ್ದಿಗೋಷ್ಠಿ ಬಳಿಕ ವಿಜಯೇಂದ್ರ ಬಣದ ಸದಸ್ಯರು ಅದೇ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿದರು.
ಇದನ್ನೂ ಓದಿ: ವಿಜಯೇಂದ್ರ ಬೆನ್ನಿಗೆ ನಿಂತ ಮಾಜಿ ಶಾಸಕರ ಟೀಂ; ಯತ್ನಾಳ್ ವಿರುದ್ಧ ಕ್ರಮಕ್ಕೆ ಹೈಕಮಾಂಡ್ ಭೇಟಿಗೆ ನಿರ್ಧಾರ