ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ವಿಜಯ ಸಂಕಲ್ಪ ಸಮಾವೇಶದ ಸ್ಥಳಕ್ಕೆ ಇಂದು ಬೆಳಗ್ಗೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಮತ್ತು ಅವರ ಪತ್ನಿ ಆಗಮಿಸಿ, ಅಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಿ ಗಮನ ಸೆಳೆದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮೈಸೂರು ಕೊಡಗು ಅಭ್ಯರ್ಥಿ ಯದುವೀರ್ ಒಡೆಯರ್ ಸೇರಿದಂತೆ ಬಿಜೆಪಿ, ಜೆಡಿಎಸ್ ಪ್ರಮುಖರು ಭಾಗವಹಿಸಿದ್ದರು. ಕಾರ್ಯಕ್ರಮ ನಡೆದ ಹಿನ್ನೆಲೆಯಲ್ಲಿ ಮೈದಾನದಲ್ಲಿ ನೀರಿನ ಬಾಟಲ್, ಕಸ ಸೇರಿದಂತೆ ಅನುಪಯುಕ್ತ ವಸ್ತುಗಳು ಬಿದ್ದಿದ್ದವು. ಅಂತೆಯೇ ಇಂದು ಬೆಳಗ್ಗೆ ಯದುವೀರ್ ಒಡೆಯರ್ ಅವರು ತಮ್ಮ ಪತ್ನಿ ತ್ರಿಷಿಕಾ ಒಡೆಯರ್ ಜೊತೆ ಕಾರ್ಯಕ್ರಮ ನಡೆದ ಮೈದಾನಕ್ಕೆ ಆಗಮಿಸಿ, ಸ್ವಚ್ಛತಾ ಕಾರ್ಯ ಕೈಗೊಂಡರು. ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಕೂಡ ಈ ವೇಳೆ ಸಾಥ್ ನೀಡಿದರು.
ಯದುವೀರ್ ಹೇಳಿದ್ದೇನು? ಮೈಸೂರು ಸ್ವಚ್ಛ ನಗರಿ. ಆದ್ದರಿಂದ ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಈ ದೃಷ್ಟಿಯಿಂದ ನಿನ್ನೆ ಮೋದಿ ಅವರ ಕಾರ್ಯಕ್ರಮದ ನಂತರ ಮೈದಾನದಲ್ಲಿ ಕಸ ಬಿದ್ದಿದ್ದು, ಅದನ್ನ ಸ್ವಚ್ಛಗೊಳಿಸುವ ಕೆಲಸವನ್ನ ಸ್ವಯಂ ಸೇವಾ ಸಂಸ್ಥೆ ಜೊತೆ ನಾವು ಮಾಡಿದ್ದೇವೆ. ಮುಂದೆ ಸಹ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನದ ಅನುಗುಣವಾಗಿ ನಾವು ಕೆಲಸ ನಿರ್ವಹಿಸುತ್ತೇವೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂ ಓದಿ: ಕರ್ನಾಟಕ ಇತರ ರಾಜ್ಯಗಳಿಗೆ ಎಟಿಎಂ ಆಗಿದೆ: ರಾಜ್ಯ ಸರ್ಕಾರದ ವಿರುದ್ಧ ಮೋದಿ ಗಂಭೀರ ಆರೋಪ - PM MODI