ETV Bharat / state

ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಗೆ ಗೂಡು ಕಟ್ಟಿ ಕಾಳು, ನೀರು ನೀಡುವ ರಾಮನಗರದ ಮರಸಪ್ಪ - World Sparrow Day

ಮರೆಯಾಗುತ್ತಿರುವ ಗುಬ್ಬಚ್ಚಿಗಳಿಗೆ ತಮ್ಮ ಮನೆಯಂಗಳದಲ್ಲಿಯೇ ಗೂಡು, ಕಾಳು, ನೀರು ಕೊಟ್ಟು ಸಂತತಿ ಉಳಿಸುವ ಕೆಲಸವನ್ನು ಮರಸಪ್ಪ ರವಿ ಮಾಡುತ್ತಿದ್ದಾರೆ.

sparrow
ಗುಬ್ಬಚ್ಚಿ
author img

By ETV Bharat Karnataka Team

Published : Mar 20, 2024, 2:20 PM IST

Updated : Mar 20, 2024, 6:02 PM IST

ಅಳಿವಿನಂಚಿಗೆ ಬಂದಿರುವ ಗುಬ್ಬಚ್ಚಿಗಳಿಗೆ ಆಶ್ರಯದಾತ

ರಾಮನಗರ: ನಿತ್ಯವೂ ಚಿಂವ್‌.. ಚಿಂವ್‌ ಗುಟ್ಟುತ್ತಾ, ಬೆಳ್ಳಂಬೆಳಗ್ಗೆ ಆಹಾರಕ್ಕಾಗಿ ಅಲೆಯುತ್ತಿದ್ದ, ಕಾಳುಗಳನ್ನು ಹೆಕ್ಕುತ್ತಾ ಕೈಗೆ ಸಿಗದಂತೆ ಸುರಕ್ಷಿತ ಅಂತರ ಕಾಪಾಡಿಕೊಂಡು, ಹತ್ತಿರ ಹೋದಲ್ಲಿ ತಕ್ಷಣ ಪುರ್ರನೆ ಹಾರಿ ಹೋಗುತ್ತಿದ್ದ ಪುಟಾಣಿ ಗುಬ್ಬಚ್ಚಿಗಳನ್ನು ಇಂದು ನಾವು ಕಾಣುವುದೇ ವಿರಳ. ಮರೆಯಾಗುತ್ತಿರುವ ಪುಟ್ಟ ಗುಬ್ಬಚ್ಚಿಗಳನ್ನು ಉಳಿಸುವ ನಿಟ್ಟಿನಲ್ಲಿ ಇಲ್ಲೊಬ್ಬರು ಮನೆಯಂಗಳದಲ್ಲೇ ಅವುಗಳಿಗಾಗಿ ಗೂಡು, ಕಾಳು, ನೀರು ನೀಡುವ ಕೆಲಸ ಮಾಡುತ್ತಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ಪಟ್ಟಣದ ಸಮೀಪವಿರುವ ಮೇಳೆಕೋಟೆಯಲ್ಲಿರುವ ಮರಸಪ್ಪ ರವಿ ಎಂಬವರು ತಮ್ಮ ಮನೆಯಂಗಳದಲ್ಲಿ ಅಳಿವಿನಂಚಿಗೆ ಬಂದಿರುವ ಗುಬ್ಬಚ್ಚಿಗಳಿಗೆ ಆಶ್ರಯದಾತರಾಗಿದ್ದಾರೆ.

ಇಂದು ವಿಶ್ವ ಗುಬ್ಬಚ್ಚಿ ದಿನಾಚರಣೆ. ಮೊದಲ ಬಾರಿಗೆ ವಿಶ್ವ ಗುಬ್ಬಚ್ಚಿ ದಿನವನ್ನು ಮಾರ್ಚ್ 20, 2010ರಲ್ಲಿ ಆಚರಿಸಲಾಯಿತು. ನಂತರ ಪ್ರತೀ ವರ್ಷ, ಮನೆ ಗುಬ್ಬಚ್ಚಿಗಳು ಮತ್ತು ಪರಿಸರದಿಂದ ಪ್ರಭಾವಿತವಾಗಿರುವ ಇತರ ಸಾಮಾನ್ಯ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ಎಲ್ಲಿಂದಲೋ ತಂದು ಹುಲ್ಲಿನ ಮನೆ ಹೆಣೆದು ತನ್ನ ಸಂತತಿಯನ್ನು ಬೆಳೆಸಲು ಹರಸಾಹಸಪಡುತ್ತಿದ್ದ ಗುಬ್ಬಿಗಳು ನಿರುಮ್ಮಳವಾಗಿ ದೇವರ ಫೋಟೋಗಳ ಹಿಂದೆ, ಅಟ್ಟದಲ್ಲಿ ಅಡಗಿ ಮನೆಯ ತೊಲೆ ಸಂಧಿಗಳಲ್ಲಿ ಗೂಡು ಕಟ್ಟುತ್ತಿದ್ದವು, ಕೂಡಿ ಬಾಳುತ್ತಿದ್ದವು. ಎಷ್ಟೇ ಓಡಿಸಿದರೂ ಆಗಷ್ಟೇ ಪುರ್ರನೆ ಹಾರಿ, ಮತ್ತೆ ಮತ್ತೆ ಭರ್ರನೇ ಬಂದು ಮನೆಯೊಳಗೆ ಸೇರಿ ಸಂಸಾರ ಕಟ್ಟಿಕೊಳ್ಳುತ್ತಿದ್ದವು.

ಛಲ ಬಿಡದ ಈ ಗುಬ್ಬಿಗಳು ದಿನ ಬೆಳಗಾದರೆ ಸಾಕು ಮನೆಯೊಳಗೆ ಹೊಕ್ಕು ಸಂಜೆಯಾದರೆ ಬೀದಿ ಬದಿಯಲ್ಲಿರುವ ವಿದ್ಯುತ್‌ ತಂತಿಯ ಮೇಲ್ಭಾಗದಲ್ಲಿ ತಳಿರು ತೋರಣದಂತೆ ಸಾಲು ಸಾಲಾಗಿ ಕುಳಿತುಕೊಳ್ಳುತ್ತಿದ್ದ ದೃಶ್ಯಗಳನ್ನು ಆಗ ನೋಡುವುದೇ ಹಬ್ಬವಾಗಿತ್ತು. ಕೆಲವು ಕಿಡಿಗೇಡಿ ಹುಡುಗರು ಅವುಗಳಿಗೆ ಕವಣೆ ಮಾಡಿ ಸುರ್‌.. ಎಂದು ಕಲ್ಲನ್ನೆಸೆದರೆ ಒಂದೇ ಏಟಿಗೆ ಮೇಲಕ್ಕೆದ್ದು ಆಕಾಶದತ್ತ ಹಾರುತ್ತ ಮಾಯವಾಗುತ್ತಿದ್ದವು.

ಮರಸಪ್ಪ ರವಿ

ಚಿಕ್‌.. ಚಿಕ್‌.. ಚಿಂವ್‌.. ಚಿಂವ್‌.. ಸದ್ದು ಮಾಡುವ ಗುಬ್ಬಿಯ ಶಬ್ದ ಕೇಳಲು ಕಿವಿಗೆ ಇಂಪಿತ್ತು, ಎಲ್ಲಿ ನೀರು ಕಂಡರೂ ಪಟ ಪಟನೆ ರೆಕ್ಕೆ ಅರಳಿಸಿ ಮುಳುಗಿ ಸ್ನಾನ ಮಾಡಿ ಮನೆ ಮನೆಯಲ್ಲಿ ಚಿಲಿಪಿಲಿ ಗುಟ್ಟುತ್ತಿದ್ದ ಗುಬ್ಬಚ್ಚಿಗಳು ಈಗ ಅಪರೂಪದ ಅತಿಥಿಗಳಾಗಿವೆ. ತಾಯಿ ಗುಬ್ಬಿ ತನ್ನ ಪುಟ್ಟ ಮರಿ ಗುಬ್ಬಿಗೆ ಎಲ್ಲಿಂದಲೋ ತಂದ ಆಹಾರದಿಂದ ಕೊಡುವ ಗುಟುಕು ಪ್ರೀತಿ ವಾತ್ಸಲ್ಯ, ಸಂಬಂಧದ ಸಂದೇಶವೂ ಇಂದು ಕಾಣದಾಗಿದೆ.

ಧಾನ್ಯ, ಹುಳು ಮತ್ತು ಗಿಡಗಳ ಎಳೆಯ ಕುಡಿ ಆಹಾರವನ್ನಾಗಿ ಗುಬ್ಬಚ್ಚಿಗಳು ಸೇವಿಸುತ್ತಿದ್ದವು. ಒಂದು ಅಧ್ಯಯನದ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ಎಲೆಕ್ಟ್ರಾನಿಕ್‌, ತರಂಗ, ವಿದ್ಯುತ್‌ ಕಾಂತೀಯ ಅಲೆಗಳಲ್ಲಿ ಗುಬ್ಬಚ್ಚಿಗಳ ಸೂಕ್ಷ್ಮ ಹೃದಯಕ್ಕೆ ಹಾಗೂ ಅವುಗಳ ಸಂತಾನೋತ್ಪತ್ತಿ ಸಾಮರ್ಥ್ಯ‌ಕ್ಕೆ ಹಾನಿಯುಂಟು ಮಾಡುತ್ತಿವೆ. ಎಲ್ಲ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್‌ ತರಂಗ ಆವರಿಸಿರುವುದರಿಂದ ಗುಬ್ಬಚ್ಚಿಗಳ ಸಂತತಿ ಅವನತಿಯತ್ತ ಸಾಗುತ್ತಿದೆ.

ಸುಡು ಬಿಸಿಲಿನ ಬೇಸಿಗೆಯಲ್ಲಿ ಮಾನವರಿಗೆ ಕಷ್ಟವಾಗುತ್ತಿದೆ. ಇನ್ನು ಪ್ರಾಣಿ, ಪಕ್ಷಿ, ಹಕ್ಕಿಗಳ ಸ್ಥಿತಿ ಹೇಳತೀರದು. ಎಲೆಕ್ಟ್ರಾನಿಕ್‌ ತರಂಗಳಿಗೆ ಸಿಲುಕಿ ಗುಬ್ಬಚ್ಚಿಗಳು ಕಣ್ಮರೆಯಾಗಿವೆ. ಗಿಡ-ಮರಗಳು ಸಹ ಕಡಿಮೆಯಾಗಿವೆ. ಮನುಷ್ಯ ಮಜ್ಜಿಗೆ, ಲಸ್ಸಿ, ಕೂಲ್​ಡ್ರಿಂಕ್ಸ್‌ ಕುಡಿದು ತಣ್ಣಗಾಗುತ್ತಾರೆ. ಆದರೆ ಪ್ರಾಣಿ, ಪಕ್ಷಿಗಳು ಹನಿ ನೀರಿಗಾಗಿ ಅಲೆದಾಡಿ ಸಾಯುತ್ತಿವೆ. ಸಾಧ್ಯವಾದಷ್ಟು ಎಲ್ಲರೂ ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ.

"ಮಾನವರ ಮನೆಯಲ್ಲಿ ಸೂರು ಕಟ್ಟಿಕೊಂಡು, ಅವನಿಗೆ ಹೊಂದಿಕೊಂಡು ಬದುಕುವ ಪಕ್ಷಿ ಗುಬ್ಬಚ್ಚಿ. ಈ ಗುಬ್ಬಚ್ಚಿಗಳು ರೈತನಿಗೆ ಸಹಾಯ ಮಾಡುತ್ತವೆ. ನನ್ನ ಮನೆಯಲ್ಲಿ ನೂರಾರು ಗುಬ್ಬಚ್ಚಿಗಳಿವೆ. ಅದಲ್ಲದೆ ಸನ್ ಬರ್ಡ್ಸ್​, ಬುಲ್​ ಬುಲ್​ ಸೇರಿ ಹಲವಾರು ಪಕ್ಷಿಗಳು ಇಲ್ಲಿ ವಾಸಿಸುತ್ತವೆ. ಇಡೀ ದಿನ ಪಕ್ಷಿಗಳ ಕಲರವ ಕೇಳುತ್ತಲೇ ಇರುತ್ತದೆ. ಅವು ವಾಸ ಮಾಡಲು ಬೇಕಾದಂತಹ ಅನುಕೂಲತೆಯನ್ನು ನಾನು ಮಾಡಿಕೊಟ್ಟಿದ್ದೇನೆ. ಪ್ರತಿದಿನ ಪಕ್ಷಿಗಳಿಗಾಗಿ ರಾಗಿ, ಧವಸ ಧಾನ್ಯಗಳನ್ನು ಪಕ್ಷಿಗಳಿಗಾಗಿ ಇಡುತ್ತೇನೆ. ತಟ್ಟೆಯಲ್ಲಿ ಒಂದು ಇಂಚಿನಷ್ಟು ನೀರು ಇಡುತ್ತೇನೆ. ಹಾಗಾಗಿ ಅದರಲ್ಲೇ ನಿಂತು ನೀರು ಕುಡಿದು, ಪಕ್ಷಿಗಳು ರೆಕ್ಕೆ ಬಡಿದು ಸ್ನಾನ ಮಾಡುತ್ತವೆ. ಅವು ಬಂದು ಹೋಗುವುದನ್ನು ನೋಡುವುದೇ ಚೆಂದ. ಹಾಗಾಗಿ ಎಲ್ಲರೂ ಪಕ್ಷಿಗಳಿಗಾಗಿ ಮನೆ ಮುಂದೆ ಧವಸಧಾನ್ಯಗಳನ್ನು ಇಡಿ. ಇವತ್ತು ಪಕ್ಷಿಗಳಿಗೆ ನೀರು ಸಿಗೋದೆ ಕಷ್ಟ ಆಗಿದೆ. ಹಾಗಾಗಿ ನೀರು ಕೂಡ ಇಡಿ. ಪಕ್ಷಿಗಳ ರಕ್ಷಣೆಗಾಗಿ ಕೈಜೋಡಿಸಿ" ಎಂದು ಪರಿಸರ ಪ್ರೇಮಿ ಮರಸಪ್ಪ ರವಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಗುಬ್ಬಚ್ಚಿಗಳು ಏಕೆ ಕಣ್ಮರೆಯಾದವು?: ವನ್ಯಜೀವಿ ತಜ್ಞ ಕೃಪಾಕರ ಸಂದರ್ಶನ

Last Updated : Mar 20, 2024, 6:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.