ಧಾರವಾಡ: "ನಾಗಮಂಗಲ ಗಲಾಟೆ ಕುರಿತು ವಿರೋಧ ಪಕ್ಷಗಳ ಆರೋಪಕ್ಕೆ ನಾನು ಪ್ರತಿಕ್ರಿಯೆ ನೀಡಲಾರೆ. ಗಲಾಟೆ ಆಗಿರುವುದು ನಿಜಕ್ಕೂ ಒಳ್ಳೆಯದಲ್ಲ. ಗೃಹಸಚಿವರು ಈಗಾಗಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ" ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಧಾರವಾಡದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗರು ಚಲುವರಾಯಸ್ವಾಮಿ ರಾಜೀನಾಮೆ ಕೇಳಿರೋ ವಿಚಾರಕ್ಕೆ ಪ್ರತಿಕ್ರಿಯಿಸಿ, "ರಾಜೀನಾಮೆ ಕೇಳುವುದು ಬಿಜೆಪಿಗೆ ಒಂದು ಫ್ಯಾಷನ್ ಆಗಿದೆ. ಕೋಲ್ ಮೈನಿಂಗ್ನಲ್ಲಿ ಹಲವು ಹಗರಣ ಆಗಿವೆ. ಇದಕ್ಕೆ ಸಂಬಂಧಿಸಿದಂತೆ ಪ್ರಹ್ಲಾದ ಜೋಶಿ ರಾಜೀನಾಮೆ ಕೊಡುತ್ತಾರಾ? ಸೆಬಿ ಹಗರಣದಲ್ಲಿ ಸರ್ಕಾರಿ ಅಧಿಕಾರಿಗಳ ಕೈವಾಡದ ಆರೋಪ ಇತ್ತು. ಇದಕ್ಕೆ ಹಣಕಾಸು ಸಚಿವರು ರಾಜೀನಾಮೆ ಕೊಡ್ತಾರಾ? ಸಣ್ಣ ಸಣ್ಣ ಗಲಾಟೆಗೆಲ್ಲ ರಾಜೀನಾಮೆ ಕೇಳಿದ್ರೆ ಹೇಗೆ? ಅದಕ್ಕೆ ಪ್ರತಿಕ್ರಿಯೆ ಕೊಡುವುದಿಲ್ಲ. ಆದರೆ, ಗಲಾಟೆಯನ್ನು ಖಂಡಿಸುತ್ತೇನೆ. ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ ಎಲ್ಲಿಯೂ ಇಂತಹ ಘಟನೆ ಆಗಬಾರದು" ಎಂದರು.
ಹಿಂದೆಯೂ ಅದೇ ಸ್ಥಳದಲ್ಲಿ ಗಲಾಟೆ ಆಗಿದ್ದ ವಿಚಾರದ ಕುರಿತು ಮಾತನಾಡಿ, "ಮುಂಜಾಗ್ರತಾ ಕ್ರಮ ತೆಗೆದುಕೊಂಡಾಗಲೂ ಇಂತಹ ಘಟನೆಗಳು ಆಗುವ ಸಾಧ್ಯತೆಗಳು ಇರುತ್ತವೆ. ಯಾರೂ ಇದನ್ನು ರಾಜಕೀಕರಣ ಮಾಡಬಾರದು" ಎಂದು ಮನವಿ ಮಾಡಿದರು.
’ಇಡಿ ಹಾಕಿದ ಚಾರ್ಜ್ಶೀಟ್ ಪ್ರಕಾರ ಎಷ್ಟು ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ’: ವಾಲ್ಮೀಕಿ ಹಗರಣದ ಕುರಿತು ಮಾತನಾಡಿ, "ಇಡಿ ಚಾರ್ಜಶೀಟ್ ಬಗ್ಗೆ ನಾನು ಮಾತನಾಡೋಕೆ ಹೋದರೂ ನೀವು ಕೇಳಿಸಿಕೊಳ್ಳಲ್ಲ. 3 ಸಾವಿರದ ಮೇಲೆ ಇಡಿ ಚಾರ್ಜ್ಶೀಟ್ಗಳಿವೆ. ಯಾವಾಗಾದ್ರೂ ಮಾಧ್ಯಮದವರು ಓದಿಕೊಂಡಿದ್ದೀರಾ? ಇಡಿ ಜಾರ್ಜ್‌ಶೀಟ್ ಆಗಿದ್ರಲ್ಲಿ ಎಷ್ಟು ಜನರಿಗೆ ಶಿಕ್ಷೆ ಆಗಿದೆ? ಇಡಿ ಕೇವಲ ರಾಜಕಾರಣಕ್ಕೆ ಉಪಯೋಗ ಮಾಡುತ್ತಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ನಮ್ಮದು ಸಹ ಎಸ್‌ಐಟಿ ತನಿಖೆ ನಡೆಯುತ್ತಿದೆ. ಅದರ ವರದಿ ಕೂಡ ಇಂದಿಲ್ಲ, ನಾಳೆ ಬರುತ್ತದೆ. ಹೈಕೋರ್ಟ್, ಸುಪ್ರಿಂಕೋರ್ಟ್ಗೆ ಇಡಿಯವರು ಹೋಗುವುದೇ ಇಲ್ಲ. ಸಿಬಿಐನವರು ರೇಪ್ ಕೇಸ್ ಇದ್ದಾಗಲೂ ಕೋರ್ಟ್‌ಗೆ ಹೋಗಿಲ್ಲ. ಕೋರ್ಟ್ನವರೇ ಈಗ ಏನು ಮಾಡಬೇಕು ಅಂತಾ ಕೇಳುತ್ತಿದ್ದಾರೆ. ಇಂತಹುದೇ ಪ್ರಶ್ನೆ ಬಿಜೆಪಿಯವರಿಗೆ ಗಟ್ಟಿಯಾಗಿ ಕೇಳಿ ನೋಡಿ ಅವರು ಪುಸ್ಸ ಅಂತಾ ಉತ್ತರ ಸಹ ಕೊಡದೇ ಹೋಗುತ್ತಾರೆ. ಸಿಬಿಐ ಬೇಲ್ ಕೊಡಬಾರದು ಅಂತಾ ವಾದ ಮಾಡಬೇಕಿತ್ತು. ಆದರೆ ಅವರು ಹೋಗಿಲ್ಲ. ಇದು ನಾನು ಹೇಳಿದ್ದಲ್ಲ, ಮಾಧ್ಯಮಗಳಲ್ಲಿ ಬಂದಿದೆ. ಈ ವ್ಯವಸ್ಥೆಯಲ್ಲಿ ರಾಜಕೀಯ ಮಾಡೋದು ಬಿಟ್ಟರೆ ಬೇರೇನೂ ಇಲ್ಲ" ಎಂದರು.
ಕೇವಲ ಕಾಫಿ ಕುಡಿದಿದ್ದೇವೆ: ಜಾರಕಿಹೊಳಿ ಭೇಟಿ ಕುರಿತು ಮಾತನಾಡಿ, "ಕೇವಲ ಕಾಫಿ ಕುಡಿದಿದ್ದೇವೆ. ಹೈಕೋರ್ಟ್ ಕಾರ್ಯಕ್ರಮಕ್ಕೆ ಜಾರಕಿಹೊಳಿ ಬಂದಿದ್ದರು. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಹೊರಟಿದ್ದರು. ಈ ವೇಳೆ ಭೇಟಿಯಾಗಿ ಕಾಫಿ ಕುಡಿದಿದ್ದೇವೆ. ರಾಜಕೀಯ ಚರ್ಚೆ ಬಹಿರಂಗವಾಗಿಯೇ ಮಾತನಾಡುತ್ತೇನೆ. ಆದರೆ ಆ ತಹರದ ಯಾವುದೇ ಚರ್ಚೆ ಆಗಿಲ್ಲ. ಜನರಲ್ ಆಗಿ ಮಾತನಾಡಿದ್ದೇವೆ. ಖಾನಾಪುರ ಶಾಸಕರ ಹೇಳಿಕೆ ಬೆನ್ನಲ್ಲಿಯೇ ಜಾರಕಿಹೊಳಿ ಭೇಟಿಯಾಗಿದ್ದು ಕೇವಲ ಕಾಕತಾಳೀಯ. ಕಾಗೆ ಕುಳಿತುಕೊಳ್ಳೋದಕ್ಕೂ ಟೊಂಗೆ ಮುರಿಯೋದಕ್ಕೂ ಒಂದೇ ಆಯ್ತು ಅದ್ಹಾಂಗೆ ಆಗಿದೆ" ಎಂದು ಸ್ಪಷ್ಟಪಡಿಸಿದರು.
ವಾಲ್ಮೀಕಿ ಹಗರಣ ಸಂಬಂಧ ಬಿಜೆಪಿ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿ, "ಬಿಜೆಪಿಯವರಿಗೆ ಕೊಲೆಸ್ಟ್ರಾಲ್ ಜಾಸ್ತಿ ಆಗಿದೆ. ವಾಕ್ ಮಾಡಿದ್ರೆ ಒಳ್ಳೆದಾಗುತ್ತದೆ ಅಂತಾ ಪಾದಯಾತ್ರೆ ಮಾಡುತ್ತಿದ್ದಾರೆ. ವಾಲ್ಮೀಕಿ, ಮುಡಾ ಹಗರಣ ಹುಡುಕಿಕೊಂಡು ಇದನ್ನೇ ಮಾಡುತ್ತಿದ್ದಾರೆ. ಮುಡಾದಲ್ಲಿ ಪ್ರಾಸಿಕ್ಯೂಷನ್ ಕೊಟ್ಟಿದಾರೆ. ಅಧಿಕಾರಿಗಳ ಮೇಲೆ ಪ್ರಾಸಿಕ್ಯೂಷನ್ ಬೇಡ್ವಾ? ಸೈಟ್ ಕೊಟ್ಟ ಅಧಿಕಾರಿಗಳ ಮೇಲೆ ಪ್ರಾಸಿಕ್ಯೂಷನ್ ಬೇಡ್ವಾ? ಆಗ ಮುಡಾ ಅಧ್ಯಕ್ಷರಾಗಿದ್ದವರು ಯಾರು? ಆಗ ಸರ್ಕಾರ ಯಾವುದಿತ್ತು? ಸಿಎಂ ಯಾರಿದ್ದರು? ಆಗ ಬೊಮ್ಮಾಯಿ ಸಿಎಂ ಇದ್ರಲ್ವಾ?ಅವರ ಮೇಲೆ ಪ್ರಾಸಿಕ್ಯೂಷನ್ ಏಕಿಲ್ಲ? ಈ ವಿಷಯದಲ್ಲಿ ರಾಜ್ಯಪಾಲರು ತಮ್ಮ ಬುದ್ಧಿ ಏಕೆ ಉಪಯೋಗಿಸಲಿಲ್ಲ? ಇವರ ಅಧಿಕಾರದಲ್ಲಿಯೇ ಸೈಟ್ ಕೊಟ್ಟಿದಾರೆ. ಇವರೇ ಪಾದಯಾತ್ರೆ ಮಾಡುತ್ತಿದ್ದಾರೆ. 14 ಸೈಟ್ ಅಷ್ಟೇ ಯಾಕೆ? 125 ಸೈಟ್ ಬಗ್ಗೆಯೂ ತನಿಖೆಯಾಗಲಿ" ಎಂದರು.
ಇದನ್ನೂ ಓದಿ: ವಿರೋಧ ಪಕ್ಷದವರು ರಾಜಕೀಯ ಮಾಡದಿದ್ದರೆ ಒಳ್ಳೆಯದು: ನಾಗಮಂಗಲಕ್ಕೆ ಸಚಿವ ಚಲುವರಾಯಸ್ವಾಮಿ ಭೇಟಿ - Nagamangala Communal riots