ಮೈಸೂರು: ಯುವಕನೊಬ್ಬನಿಗೆ ತನ್ನನ್ನು ಮದುವೆ ಆಗುವಂತೆ ಒತ್ತಾಯಿಸಿ ವಿವಾಹಿತ ಮಹಿಳೆಯೊಬ್ಬಳು ಕಟ್ಟಡ ಏರಿಕೊಂಡು ಬೆದರಿಕೆ ಹಾಕಿದ ಘಟನೆ ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಭಾನುವಾರ ನಡೆದಿದೆ.
ಬೆದರಿಕೆ ಹಾಕಿದ ಮಹಿಳೆ ಹಾಗೂ ಯುವಕ ಇಬ್ಬರೂ ಕೂಡ ಬಿಹಾರ ಮೂಲದವರು ಎಂದು ತಿಳಿದುಬಂದಿದೆ. ಇದೀಗ ನಂಜನಗೂಡು ಪಟ್ಟಣ ಪೊಲೀಸರ ವಶದಲ್ಲಿದ್ದಾರೆ. ಕಳೆದ ಒಂದು ವರ್ಷದಿಂದ ಬಿಹಾರ ಮೂಲದ ಮಹಿಳೆ ಹಾಗೂ ಯುವಕ ಆಸಿಬೂರ್ ರೆಹಮಾನ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಮೂಲಕ ಪರಸ್ಪರ ಪರಿಚಯವಾಗಿದ್ದರು. ಮೂರು ತಿಂಗಳ ಹಿಂದಷ್ಟೇ ಯುವಕ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಕೆಲಸವೊಂದಕ್ಕೆ ಸೇರಿಕೊಂಡಿದ್ದ ಹಾಗೂ ಗ್ರಾಮದಲ್ಲೇ ರೂಂ ಬಾಡಿಗೆ ಪಡೆದು ವಾಸವಾಗಿದ್ದ.
ಶನಿವಾರ ಬಿಹಾರದಿಂದ ನೇರವಾಗಿ ನಂಜನಗೂಡಿಗೆ ಬಂದ ಮಹಿಳೆ ಖಾಸಗಿ ಲಾಡ್ಜ್ನಲ್ಲಿ ರೂಂ ಮಾಡಿದ್ದಳು. ಅಲ್ಲಿಗೆ ಯುವಕನನ್ನು ಕರೆಸಿಕೊಂಡು ಮದುವೆ ಆಗುವಂತೆ ಒತ್ತಾಯಿಸಿದ್ದಾಳೆ. ಇಬ್ಬರಿಗೂ ವಯಸ್ಸಿನ ಅಂತರವಿದೆ ಎಂದು ಹೇಳಿ ಯುವಕ ಮದುವೆಗೆ ನಿರಾಕರಿಸಿದ್ದಾನೆ. ಇದ್ದಕ್ಕಿದ್ದಂತೆ ಲಾಡ್ಜ್ ಕಟ್ಟಡದ ಟೆರೆಸ್ ಮೇಲೆ ತೆರಳಿ ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಅರಿತ ನಂಜನಗೂಡು ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಮಹಿಳೆಯ ಮನವೊಲಿಸಿ ವಶಕ್ಕೆ ಪಡೆದಿದ್ದಾರೆ. ಮಹಿಳೆಗೂ ನನಗೂ ಯಾವುದೇ ಸಂಬಂಧವಿಲ್ಲವೆಂದು ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಎಎಸ್ಐ ಸಾವು ಪ್ರಕರಣ; ಪಿಎಸ್ಐ ಸಸ್ಪೆಂಡ್