ಬಾಗಲಕೋಟೆ: ಹೇರ್ಡ್ರೈಯರ್ ಬ್ಲಾಸ್ಟ್ ಆಗಿ ಮೃತ ಯೋಧನ ಪತ್ನಿಯ ಎರಡು ಮುಂಗೈ ಕಟ್ ಆಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ. ಬಸಮ್ಮ ಯರನಾಳ ಗಾಯಗೊಂಡವರು. ಇವರು ಮೃತ ಯೋಧ ಪಾಪಣ್ಣ ಅವರ ಪತ್ನಿ.
ಆರ್ಡರ್ ಮಾಡದಿದ್ದರೂ ಮನೆಗೆ ಬಂದ ಹೇರ್ಡ್ರೈಯರ್: ಶಶಿಕಲಾ ಎಂಬುವರ ಹೆಸರಿಗೆ ಕೊರಿಯರ್ ಬಂದಿತ್ತು. ಕೊರಿಯರ್ ಅವರು ಶಶಿಕಲಾ ಅವರಿಗೆ ಕರೆ ಮಾಡಿದ್ದರು. ಶಶಿಕಲಾ ಬೇರೆ ಊರಲ್ಲಿ ಇದ್ದ ಕಾರಣ ಬಸಮ್ಮ ಅವರಿಗೆ ಕೊರಿಯರ್ ಪಡೆದು ಓಪನ್ ಮಾಡಲು ಹೇಳಿದ್ದರು. ಒಪನ್ ಮಾಡಿದಾಗ ಹೇರ್ಡ್ರೈಯರ್ ಇತ್ತು. ಬಸಮ್ಮಳಿಗೆ ಪಕ್ಕದ ಮನೆಯವರು ಆನ್ ಮಾಡಿ ತೋರಿಸಿ ನೋಡೋಣ ಅಂತ ಹೇಳಿದ್ದರು. ಹೀಗಾಗಿ ಬಸಮ್ಮ ಸ್ವಿಚ್ಡ್ ಹಾಕಿ ಆನ್ ಮಾಡಿದ್ದೇ ತಡ ಹೇರ್ಡ್ರೈಯರ್ ಸ್ಫೋಟಗೊಂಡಿದೆ. ಪರಿಣಾಮ ಎರಡು ಕೈಗಳ ಬೆರಳುಗಳು ತುಂಡಾಗಿ ಎರಡೂ ಮುಂಗೈ ಛಿದ್ರಛಿದ್ರಗೊಂಡು ಬಸಮ್ಮ ಗಂಭೀರವಾಗಿ ಗಾಯಗೊಂಡಿದ್ದರು . ತಕ್ಷಣ ಬಸಮ್ಮ ಅವರನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಆದರೆ, ಶಶಿಕಲಾ ಎಂಬುವವರು ಯಾವುದೇ ಹೇರ್ಡ್ರೈಯರ್ ಆರ್ಡರ್ ಮಾಡಿದ್ದರಿಲಿಲ್ಲ. ಸದ್ಯ ಇಳಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಶಿಕಲಾ ಹೆಸರಲ್ಲಿ ಹೇರ್ಡ್ರೈಯರ್ ಆರ್ಡರ್ ಮಾಡಿದವರು ಯಾರು?, ಯಾರು ಹಣ ಸಂದಾಯ ಮಾಡಿದವರು?, ಎಂದು ಇಳಕಲ್ ನಗರ ಪೊಲೀಸರಿಂದ ತನಿಖೆ ನಡೆಯುತ್ತಿದೆ.
ಕೆಲ ಮಾಹಿತಿಗಳ ಪ್ರಕಾರ, ಹೇರ್ಡ್ರೈಯರ್ ವಿಶಾಖಪಟ್ಟಣದಲ್ಲಿ ಮ್ಯಾನುಫ್ಯಾಕ್ಚರ್ ಆಗಿದ್ದು, ಕೊರಿಯರ್ ಬಾಗಲಕೋಟೆಯಿಂದ ಬಂದಿದೆ ಎಂದು ಹೇಳಲಾಗುತ್ತಿದೆ.
ಎಸ್ಪಿ ಪ್ರತಿಕ್ರಿಯೆ: "ನವೆಂಬರ್ 15ರಂದು ಬಸವರಾಜೇಶ್ವರಿ ಸ್ನೇಹಿತೆ ಶಶಿಕಲಾ ಅವರು ತನಗೊಂದು ಕೋರಿಯರ್ ಬಂದಿದೆ ಎಂದು ತಿಳಿಸಿ ತೆಗೆದುಕೊಂಡು ಬರುವಂತೆ ತಿಳಿಸಿದ್ದರು. ಬಳಿಕ ಬಸವರಾಜೇಶ್ವರಿ ಕೊರಿಯರ್ಅನ್ನು ಮನೆಗೆ ತಂದಿಟ್ಟುಕೊಂಡಿದ್ದರು. ಬಳಿಕ 16ರಂದು ಬಸವರಾಜೇಶ್ವರಿ ಸ್ವಿಚ್ಡ್ ಹಾಕಿ ಆನ್ ಮಾಡಿದ ತಕ್ಷಣ ಹೇರ್ ಡ್ರೈಯರ್ ಸ್ಫೋಟಗೊಂಡಿದೆ. ಪರಿಣಾಮ ಎರಡು ಕೈಗಳ ಬೆರಳುಗಳು ತುಂಡಾಗಿ ಎರಡೂ ಮುಂಗೈ ಛಿದ್ರಗೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಕೊಳ್ಳಲಾಗಿದೆ. ಎಲೆಕ್ಟ್ರಾನಿಕ್ ವಸ್ತುವಿನಿಂದ ಸ್ಫೋಟವಾಗಿದ್ದರೂ ಗಂಭೀರವಾಗಿ ಪರಿಗಣಿಸಿ ಎಲ್ಲಾ ಆಯಾಮಾಗಳಿಂದ ತನಿಖೆ ಮಾಡಲಾಗುವುದು. ಎಫ್ಎಸ್ಎಲ್ ತಂಡವೂ ಕೂಡ ಸ್ಥಳದಲ್ಲಿನ ಸಾಕ್ಷ್ಯಗಳನ್ನು ಕಲೆಕ್ಟ್ ಮಾಡಿಕೊಂಡಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿಕ್ರಂ ಗೌಡ ಒಬ್ಬ ನಕ್ಸಲ್, ಅದು ನಕಲಿ ಎನ್ಕೌಂಟರ್ ಅಲ್ಲ: ಗೃಹ ಸಚಿವ ಜಿ. ಪರಮೇಶ್ವರ್