ಚಿಕ್ಕಮಗಳೂರು : ಬಸ್ ಹತ್ತುವ ವೇಳೆ ಡೋರ್ ಲಾಕ್ ತುಂಡಾಗಿ ಪ್ರಯಾಣಿಕರೊಬ್ಬರು ನೆಲಕ್ಕೆ ಬಿದ್ದಿರುವ ಘಟನೆ ತಾಲೂಕಿನ ಐದಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ KSRTC ಬಸ್ನಲ್ಲಿ ಅವಘಡ ಜರುಗಿದೆ. ಮಹಿಳಾ ಪ್ರಯಾಣಿಕರೊಬ್ಬರು ಬಾಳೆಹೊನ್ನೂರಿಗೆ ತೆರಳಲು ಬಸ್ ಹತ್ತುವಾಗ ಈ ಅವಘಡ ಜರುಗಿದೆ.
ಈ ವೇಳೆ ಐದಳ್ಳಿ ಗ್ರಾಮದ ಶಕುಂತಲಮ್ಮ (60)ಗೆ ಗಂಭೀರ ಗಾಯವಾಗಿದ್ದು, ಕೂಡಲೇ ಬಸ್ ಪ್ರಯಾಣಿಕರು ಹಾಗೂ ಸ್ಥಳೀಯರು ಗಾಯಾಳು ಶಕುಂತಲಾ ಅವರಿಗೆ ಆಲ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಬಸ್ನಲ್ಲಿ ಸರಿಯಾದ ನಿರ್ವಹಣೆ ಇಲ್ಲದಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಬಸ್ ಸಂಚಾರ ಸ್ಥಗಿತ ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗಕ್ಕೆ ಹಾಗೂ ಜಿಲ್ಲೆಯ ವಿವಿಧ ಭಾಗಕ್ಕೆ ಹೋಗುವ ಬಸ್ಗಳು ದುರಸ್ತಿ ಹಂತಕ್ಕೆ ತಲುಪಿದ್ದು, ಆಗಾಗ ಈ ರೀತಿಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ, ಕೆಎಸ್ಆರ್ಟಿಸಿ ಇಲಾಖೆ ಮಾತ್ರ ಇದರ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ ಎಂದು ಆರೋಪ ಕೇಳಿಬಂದಿದೆ.
ಪ್ರಯಾಣಿಕರ ಜೊತೆ ಹಾಗೂ ಅವರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದು, ಕೂಡಲೇ ಇದರ ಬಗ್ಗೆ ಗಮನಹರಿಸಿ ಮತ್ತೊಮ್ಮೆ ಈ ರೀತಿಯ ಪ್ರಕರಣಗಳು ಜರುಗದಂತೆ ಜಾಗರೂಕತೆ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಗುಡ್ಡದಿಂದ ಹೆದ್ದಾರಿಗೆ ಉರುಳಿದ ಕಲ್ಲು: ಅದೃಷ್ಟವಶಾತ್ ಬೈಕ್ ಸವಾರ ಪಾರು!