ಬೆಳಗಾವಿ: ಕಳ್ಳತನದ ಕೃತ್ಯ ನೋಡಿದ ಮಹಿಳೆಯನ್ನೇ ಬಾವಿಗೆ ತಳ್ಳಿ ಕಳ್ಳರು ಕೊಲೆಗೈದಿರುವ ಶಂಕಾಸ್ಪದ ಘಟನೆ ಬೆಳಗಾವಿ ತಾಲೂಕಿನ ಶಿಂದೊಳಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಇಂದು ಬೆಳ್ಳಂಬೆಳಗ್ಗೆ ಶಿಂದೊಳಿ ಗ್ರಾಮದ ಮಸಣವ್ವ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದಾರೆ. ಇದನ್ನು ಮಹಿಳೆ ನೋಡಿದ್ದಾಳೆ. ಆಕೆಯು ಗ್ರಾಮಸ್ಥರಿಗೆ ತಿಳಿಸಿದರೆ, ತಮ್ಮ ಕೃತ್ಯ ಎಲ್ಲಿ ಬೆಳಕಿಗೆ ಬರುತ್ತದೆಂದು ಹೆದರಿ, ಅವಳನ್ನು ಕಳ್ಳರು ಬಾವಿಗೆ ತಳ್ಳಿ ಹತ್ಯೆ ಮಾಡಿದ್ದಾರೆ ಮೃತಳ ಪುತ್ರರು ದೂರು ದಾಖಲಿಸಿದ್ದಾರೆ. ಈ ಕುರಿತು ಬೆಳಗಾವಿ ತಾಲೂಕಿನ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಗೆ ತಳ್ಳಿ ಮಹಿಳೆಯ ಕೊಲೆ?: ಶಿಂದೊಳಿ ಗ್ರಾಮದ ಭಾರತಿ ಪೂಜಾರಿ (48) ಮೃತ ದುರ್ದೈವಿ. ಬೆಳ್ಳಂಬೆಳಗ್ಗೆ ತನ್ನ ಮನೆಯ ದನಕರುಗಳ ಸಗಣಿ ಎತ್ತಿ ತಿಪ್ಪೆಗೆ ಎಸೆಯಲು ಇವರು ಬಂದಿದ್ದರು. ಆಗ ಮನೆ ಪಕ್ಕದಲ್ಲಿದ್ದ ಮಸಣವ್ವ ದೇಗುಲದಲ್ಲಿನ ಆಭರಣಗಳನ್ನು ಕಳ್ಳರು ಕದಿಯಲು ಮುಂದಾಗಿದ್ದರು. ಸಗಣಿ ಎಸೆದು ಮನೆಗೆ ಬರುವಾಗ ದೇಗುಲ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಭಾರತಿ ನೋಡಿದ್ದಾರೆ. ಆಗ ಭಾರತಿಯನ್ನು ಹೊತ್ತೊಯ್ದು ದೇಗಲದ ಹಿಂದಿದ್ದ ಬಾವಿಗೆ ಕಳ್ಳರು ಎಸೆದಿದ್ದಾರೆ ಎಂದು ಮೃತರ ಕುಟುಂಬಸ್ಥರು ದೂರಿದ್ದಾರೆ. ಮಹಿಳೆ ಬಾವಿಗೆ ಬೀಳುತ್ತಿದ್ದಂತೆ ದೇಗುಲದಲ್ಲಿನ ಬೆಳ್ಳಿಯ ಆಭರಣಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಶಸ್ತ್ರಚಿಕಿತ್ಸೆಗೊಳಗಾದ ಯುವಕ ಸಾವು: ಆರೋಗ್ಯ ಇಲಾಖೆಯಿಂದ ತನಿಖೆ - Mangaluru Youth Dies
ಬಾವಿಯಲ್ಲಿ ಶವ ಪತ್ತೆ: ಭಾರತಿ ಮನೆಗೆ ಬಾರದೇ ಇದ್ದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ದೇಗುಲದ ಎದುರು ಸಗಣಿ ಬುಟ್ಟಿ, ಬಾವಿ ಎದುರು ಮಹಿಳೆ ಚಪ್ಪಳಿ ನೋಡಿದ ಕುಟುಂಬಸ್ಥರು ಮತ್ತಷ್ಟು ಆತಂಕಗೊಂಡು, ತಕ್ಷಣವೇ ಮಾರಿಹಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತಪಾಸಣೆ ವೇಳೆ ಬಾವಿಯಲ್ಲಿ ಭಾರತಿ ಪೂಜಾರಿ ಶವ ಪತ್ತೆಯಾಗಿದೆ. ಸ್ಥಳೀಯರೇ ಕಳ್ಳತನ ಮಾಡಿ ಗೊತ್ತಾಗಬಾರದೆಂದು ಈ ಕೃತ್ಯ ಎಸಗಿದ್ದಾರೆ ಎಂದು ಭಾರತಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಪೊಲೀಸ್ ಆಯುಕ್ತ ಪ್ರತಿಕ್ರಿಯೆ: ಈ ಕುರಿತಂತೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ಈಟಿವಿ ಭಾರತ ಪ್ರತಿನಿಧಿ ಸಂಪರ್ಕಿಸಿದಾಗ, ''174 ಸಿ ಅಡಿಯಲ್ಲಿ ಅನುಮಾನಾಸ್ಪದವಾಗಿ ಮಹಿಳೆ ಸಾವನ್ನಪ್ಪಿರುವ ಕುರಿತು ಪ್ರಕರಣ ದಾಖಲಾಗಿದೆ. ಆ ಮಹಿಳೆಯನ್ನು ಯಾರಾದರೂ ಬಾವಿಗೆ ತಳ್ಳಿದರಾ? ಅಥವಾ ತಾನಾಗಿಯೇ ಬಾವಿಯಲ್ಲಿ ಬಿದ್ದಿದ್ದರಾ? ಎಂಬ ಕುರಿತು ತನಿಖೆ ಕೈಗೊಂಡಿದ್ದೇವೆ'' ಎಂದು ಹೇಳಿದರು.
ಇದನ್ನೂ ಓದಿ: ಪೊಲೀಸರಿಗೆ ಸಿಗುವ ಮುನ್ನವೆ ಆರೋಪಿಯ ಆತ್ಮಹತ್ಯೆ: ಸವಾಲಾದ ಮಹಾಲಕ್ಷ್ಮಿ ಹತ್ಯೆ ಪ್ರಕರಣ - Mahalakshmi murder case