ಹಾಸನ (ಬೇಲೂರು): ಕಟಾವಿಗೆ ಬಂದಿರುವ ಭತ್ತದ ಬೆಳೆಗಳನ್ನ ಕಾಡಾನೆಗಳ ಹಿಂಡು ತುಳಿದು ನಾಶಪಡಿಸಿರುವ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಮಲಸಾವರ ಹಾಗೂ ಅನುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶನಿವಾರ ರಾತ್ರಿ ನಡೆದಿದೆ.
22 ಕಾಡಾನೆಗಳು ಚಿಕ್ಕ ಸಾಲಾವರ (ಬಾವಿಕಟ್ಟೆ) ಗ್ರಾಮದ ಹರೀಶ್, ಶಾಂತಪ್ಪ, ಅಶೋಕ, ಉಪೇಂದ್ರ ಅವರಿಗೆ ಸೇರಿದ ಭತ್ತದ ಪೈರನ್ನು ನಾಶಪಡಿಸಿ ಮಂಜುನಾಥ್ ಎಂಬುವರಿಗೆ ಸೇರಿದ ತೆಂಗಿನ ಮರಗಳನ್ನು ಮುರಿದಿವೆ. ಬಾವಿಕಟ್ಟೆ ಗ್ರಾಮದ ಸುಶೀಲಮ್ಮ ಎಂಬ ರೈತ ಮಹಿಳೆ ಕಟಾವು ಮಾಡಿ ಒಕ್ಕುವ ಸಲುವಾಗಿ ರಾಶಿ ಹಾಕಿದ್ದ ಭತ್ತವನ್ನು ತುಳಿದು ಹಾಳುಮಾಡಿವೆ.
ಅನುಘಟ್ಟ ಗ್ರಾಮದ ಎ. ಎನ್ ನಾಗರಾಜು ಎಂಬುವರಿಗೆ ಸೇರಿದ 1 ಎಕರೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಬೆಳೆ ಭುವನೇಶ್ವರಿ ಗುಂಪಿನ ಕಾಡಾನೆಗಳ ಸಂಚಾರದಿಂದ ಧ್ವಂಸವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಟಾವು ಮಾಡಲಿದ್ದ ಬೆಳೆಯನ್ನು ಕಾಡಾನೆಗಳು ನಾಶಪಡಿಸಿರುವುದರಿಂದಾಗಿ ಹಲವು ರೈತರಿಗೆ ಲಕ್ಷಾಂತರ ರೂ. ನಷ್ಟವಾಗಿದೆ.
ಬೇಲೂರು ತಾಲೂಕಿನಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಈಗಾಗಾಲೇ ಆನೆಗಳಿಗೆ ರೇಡಿಯೋ ಕಾಲರ್ ಹಾಕುವ ಕಾರ್ಯವನ್ನು ಜಿಲ್ಲಾಡಳಿತ ಮಾಡಿದೆ. ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಮಲಸಾವರ ಹಾಗೂ ಅನುಘಟ್ಟ ಗ್ರಾ. ಪಂ ವ್ಯಾಪ್ತಿಯ ಗ್ರಾಮಗಳ ಸುತ್ತಮುತ್ತ ಕಾಡಾನೆಗಳು ಬೀಡುಬಿಟ್ಟಿದ್ದು, ಸುಮಾರು 30ಕ್ಕೂ ಹೆಚ್ಚು ಆನೆಗಳ ಗುಂಪು ಹಿಂಡು ಹಿಂಡಾಗಿ ಬರುತ್ತಿವೆ. ರೈತರಿಗೆ ತಾವು ಬೆಳೆದ ಬೆಳಗಳನ್ನು ರಕ್ಷಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ಸರ್ಕಾರ ಕೂಡಲೇ ಆನೆಗಳ ಸ್ಥಳಾಂತರ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ಆಹಾರ ಅರಸಿ ಬಂದ ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ.
ಗ್ರಾಮದ ರಘು ಎಂಬುವರ ತೋಟದಲ್ಲಿ ಅರಣ್ಯಾಧಿಕಾರಿಗಳು ಬೋನು ಇಟ್ಟಿದ್ದರು. ನಸುಕಿನಜಾವ 3.45ರ ವೇಳೆ ಚಿರತೆ ಬೋನಿಗೆ ಬಿದ್ದಿದೆ ಎಂದು ತಿಳಿದುಬಂದಿದೆ.
ಶ್ರವಣಬೆಳಗೊಳದ ಬೆಟ್ಟದ ತಪ್ಪಲು ಚಿರತೆಗಳ ವಾಸಸ್ಥಾನವಾಗಿದ್ದು, ಸುಂಡಹಳ್ಳಿ, ಚಿನ್ನೇನಹಳ್ಳಿ, ಚಿನ್ನಾಥಪುರ, ನಾಗಯ್ಯನಕೊಪ್ಪಲು, ಹೊಸಹಳ್ಳಿ, ಚಲ್ಯ, ಮಂಜುನಾಥಪುರ, ದೇವರಹಳ್ಳಿ ಬೆಕ್ಕ ಸೇರಿದಂತೆ ತಪ್ಪಲಿನ ಸಮೀಪವಿರುವ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಗಳು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿವೆ. ಈಗಾಗಲೇ ಶ್ರವಣಬೆಳಗೊಳ ಬೆಟ್ಟದ ತಪ್ಪಲಿನ ನಾಗಯ್ಯನ ಕೊಪ್ಪಲಿನಲ್ಲಿ ಕೇಶವಮೂರ್ತಿ ಎಂಬುವರ ಮನೆಯ ನಾಯಿಯನ್ನು ತಿನ್ನಲು ಬಂದು ವಿಫಲಯತ್ನ ನಡೆಸಿತ್ತು.
ಅದರ ಬೆನ್ನಲ್ಲೇ ಸುಂಡಹಳ್ಳಿ ಗ್ರಾಮದ ಬಾರೆಯ ಮೇಲೆ ಚಿರತೆಗಳು ಕಾಣಿಸಿಕೊಂಡಿದ್ದವು. ಕಳೆದ 2 ವಾರಗಳ ಹಿಂದಷ್ಟೇ ಚಿರತೆಯೊಂದು ನಾಯಿಯೊಂದನ್ನು ಹೊತ್ತೊಯ್ದಿತ್ತು. ಇದರಿಂದ ಕಂಗಾಲಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಬೋನ್ ಇರಿಸುವಂತೆ ಮನವಿ ಮಾಡಿದ್ದರು. ಬೋನ್ ಇಟ್ಟ 2 ದಿನಗಳ ಬಳಿಕ ಬೋನಿನಲ್ಲಿದ್ದ ನಾಯಿಯನ್ನು ತಿನ್ನಲು ಬಂದು ಚಿರತೆ ಸೆರೆಯಾಗಿದೆ.
ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕೊಂಚ ನಿರಾಳತೆ ಮೂಡಿದ್ದು, ಈ ಭಾಗದಲ್ಲಿ ಕಾಣಿಸಿಕೊಳ್ಳುವ ಚಿರತೆಗಳನ್ನು ಆದಷ್ಟು ಬೇಗ ಸೆರೆಹಿಡಿಯುವ ಮೂಲಕ ಕಾಡಿಗೆ ಬಿಡಬೇಕೆಂದು ಆಗ್ರಹಿಸಿದ್ದಾರೆ.
'ಸೆರೆಯಾದ ಚಿರತೆಯನ್ನು ಹಾಸನದ ಬುರಡಾಳು ಬಾರೆಯ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ' ಎಂದು ಅರಣ್ಯ ಸಿಬ್ಬಂದಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ : ಕೊಳ್ಳೇಗಾಲದಲ್ಲಿ ಮಧ್ಯರಾತ್ರಿ ಆನೆಗಳ ಓಡಾಟ: ಸಿಸಿಟಿವಿ ದೃಶ್ಯ - WILD ELEPHANTS