ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ವಕೀಲರ ತಂಡದ ಸದಸ್ಯರ ಜೊತೆಗೆ ಬಳ್ಳಾರಿಯ ಕಾರಾಗೃಹಕ್ಕೆ ಭೇಟಿ ನೀಡಿದರು.
ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ ಮೂರು ದಿನದ ಬಳಿಕ ವಿಜಯಲಕ್ಷ್ಮಿ ಅವರು ಇಲ್ಲಿಗೆ ಭೇಟಿ ನೀಡಿದರು.
ಹೈಸೆಕ್ಯೂರಿಟಿ ಸೆಲ್ಗೆ ಹೋಗಲು ಅವಕಾಶ ಇಲ್ಲದ ಕಾರಣ ವಿಜಿಟರ್ ಸೆಲ್‌ನಲ್ಲಿ ಭೇಟಿಗೆ ಅವಕಾಶ ನೀಡಲಾಗಿತ್ತು. ಅಲ್ಲಿಯೇ ದರ್ಶನ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಾನೂನು ಹೋರಾಟದ ಬಗ್ಗೆಯೂ ಚರ್ಚೆಯ ಹಿನ್ನೆಲೆಯಲ್ಲಿ ಅವರು ವಕೀಲರ ಜೊತೆ ಆಗಮಿಸಿ, ಅರ್ಧ ಗಂಟೆ ಮಾತುಕತೆ ನಡೆಸಿದರು.
ವಿಜಯಲಕ್ಷ್ಮಿ ದರ್ಶನ್ ಭೇಟಿಗೆ ಆಗಮಿಸುತ್ತಿರುವ ಸುದ್ದಿ ತಿಳಿದು ಬಳ್ಳಾರಿ ಸೆಂಟ್ರಲ್ ಜೈಲಿನ ಮುಂದೆ ನೂರಾರು ಅಭಿಮಾನಿಗಳು ಸೇರಿದ್ದರು.
ಇದಕ್ಕೂ ಮುನ್ನ ಕಾರಾಗೃಹಕ್ಕೆ ಉತ್ತರವಲಯದ ಡಿಐಜಿ ಟಿಪಿ ಶೇಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಭದ್ರತೆ ಪರಿಶೀಲಿಸಲು ಇಂದು ಜೈಲಿಗೆ ಭೇಟಿ ನೀಡಿದ್ದೆ. ನಾವು ನೀಡಿದ ಆದೇಶದ ಪ್ರಕಾರ ಯಾವುದೆಲ್ಲ ಜಾರಿ ಆಗಿವೆ ಎಂಬುದನ್ನು ವೀಕ್ಷಿಸಲು ಭೇಟಿ ನೀಡಿದ್ದೆ. ತಾವು ಸೂಚಿಸಿದ ಆದೇಶದ ಪ್ರಕಾರ, ಜೈಲು ಅಧಿಕಾರಿಗಳು ಭದ್ರತೆಯನ್ನು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ದರ್ಶನ್ ಅವರಿಗೆ ನೀಡಲಾಗುತ್ತಿರುವ ಉಪಹಾರ, ಊಟ ಮತ್ತು ಅವರ ಸದ್ಯದ ವರ್ತನೆ ಬಗ್ಗೆ ಕೇಳಿದಾಗ, ಈವರೆಗೂ ದರ್ಶನ್ ಸೆಲ್ನಿಂದ ಆಚೆ ಬಂದಿಲ್ಲ. ವಾಕಿಂಗ್ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಇಟ್ಟಿದ್ದಾರೆ, ಅವರ ವರ್ತನೆ ಗಮನಿಸಿ ಈ ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲಿರುವ ಪ್ರತಿಯೊಬ್ಬರಿಗೂ ಒಂದೇ ಕಾನೂನು. ಇದು ದರ್ಶನ್ಗೂ ಅನ್ವಯಿಸುತ್ತದೆ. ಟಿವಿ ಬೇಡಿಕೆ ಇಟ್ಟರೆ ಕೊಡುತ್ತೇವೆ. ಆದರೆ, ಟಿವಿ ಬೇಡಿಕೆ ಇಟ್ಟಿಲ್ಲ. ಜೊತೆಗೆ ಇಂಡಿಯನ್ ಟಾಯ್ಲೆಟ್ ಇದ್ದು, ಶೌಚಾಲಯದಲ್ಲಿ ಕೂಡಲು ಕಷ್ಟ, ಸರ್ಜಿಕಲ್ ಚೇರ್ ನೀಡುವಂತೆಯೂ ಮನವಿ ಮಾಡಿದ್ದಾರೆ. ಮೆಡಿಕಲ್ ರಿಪೋರ್ಟ್ ನೋಡಿ, ಅಗತ್ಯತೆ ಇದ್ದರೆ ಸರ್ಜಿಕಲ್ ಚೇರ್ ವ್ಯವಸ್ಥೆ ಮಾಡುತ್ತೇವೆ ಎಂದು ಡಿಐ ಹೇಳಿದ್ದಾರೆ.
ಈವರೆಗೂ ಸಂಬಂಧಿಕರಾರು ದರ್ಶನ್ ಭೇಟಿಗೆ ಅವಕಾಶ ಕೇಳಿಕೊಂಡು ಬಂದಿಲ್ಲ. ಬಂದರೆ, ಕಾನೂನಿನ ಚೌಕಟ್ಟಿನಡಿ ಅವಕಾಶ ಮಾಡಿಕೊಡಲಾಗುತ್ತದೆ. ರಕ್ತ ಸಂಬಂಧಿಕರು ಮತ್ತು ವಕೀಲರಿಗೆ ಮಾತ್ರ ಮೊದಲು ಅದ್ಯತೆ ಕೊಡಲಾಗುತ್ತದೆ ಎಂದೂ ಸಹ ಅವರು ತಿಳಿಸಿದ್ದರು.