ಮೈಸೂರು: ಪತ್ನಿಯ ಮೇಲೆ ಅನುಮಾನಪಡುತ್ತಿದ್ದ ಪತಿ ಆಕೆಯನ್ನು ಹಲವು ವರ್ಷಗಳಿಂದ ಗೃಹ ಬಂಧನದಲ್ಲಿಟ್ಟ ಘಟನೆ ಹೆಚ್.ಡಿ. ಕೋಟೆ ತಾಲ್ಲೂಕಿನ ಹೆಚ್ ಮಟಕೆರೆ ಗ್ರಾಮದಲ್ಲಿ ನಡೆದಿದೆ. ಪತಿ ಸಣ್ಣಾಲಯ್ಯ ಎಂಬಾತ ಈ ಕೃತ್ಯ ಎಸಗಿದ್ದಾನೆ. ಮನೆ ಬಾಗಿಲಿಗೆ ಮೂರು ಬೀಗ ಹಾಕಿರುವ ಈತ, ಪತ್ನಿಯನ್ನು ಅಜ್ಞಾತವಾಸದಲ್ಲಿ ಇರಿಸಿದ್ದ.
ಈ ವಿಷಯ ತಿಳಿದು ವಕೀಲ ಸಿದ್ದಪ್ಪಾಜಿ, ಸಾಂತ್ವನ ಕೇಂದ್ರದ ಜಯಶೀಲ, ಎಎಸ್ಐ ಸುಭಾನ್ ಮತ್ತು ಅಧಿಕಾರಿಗಳ ತಂಡ ಸಂತ್ರಸ್ತೆಯಿದ್ದ ಮನೆ ಬೀಗ ಮುರಿದು ಪರಿಶೀಲನೆ ನಡೆಸಿದ್ದಾರೆ. ಬಳಿಕ ರಾತ್ರೋರಾತ್ರಿ ಸಂತ್ರಸ್ತೆ ಮತ್ತು ಆಕೆಯ ಮಕ್ಕಳನ್ನು ರಕ್ಷಿಸಿದ್ದಾರೆ. ಮಹಿಳೆಯ ಒಪ್ಪಿಗೆಯಂತೆ ತವರು ಮನೆಯಲ್ಲಿ ಆಕೆಗೆ ಪೊಲೀಸರು ಆಶ್ರಯ ಕೊಡಿಸಿದ್ದಾರೆ.
ಆರೋಪಿ ಸಣ್ಣಾಲಯ್ಯನಿಗೆ ಸಂತ್ರಸ್ತ ಮಹಿಳೆ 3ನೇ ಪತ್ನಿ. ಇಬ್ಬರು ಮಕ್ಕಳಿದ್ದಾರೆ. ಈತನ ಕಿರುಕುಳ ತಾಳಲಾರದೆ ಬೇಸತ್ತು ಮೊದಲ ಇಬ್ಬರು ಪತ್ನಿಯರು ದೂರವಾಗಿದ್ದಾರೆ. ಅನುಮಾನದ ಭೂತ ತಲೆಗೇರಿಸಿಕೊಂಡು ಮೂರನೇ ಪತ್ನಿಯನ್ನೂ ಗೃಹ ಬಂಧನದಲ್ಲಿರಿಸಿ, ಎಲ್ಲಾ ಕಿಟಕಿಗಳನ್ನೂ ಭದ್ರಪಡಿಸಿ ಹೊರಗೆ ಯಾರೊಂದಿಗೂ ಮಾತನಾಡದಂತೆ ಎಚ್ಚರವಹಿಸಿದ್ದಾನೆ. ಮನೆಯೊಳಗೆ ಶೌಚಾಲಯ ಇಲ್ಲದ ಕಾರಣ ಬಕೆಟ್ ಇರಿಸಿ ರಾತ್ರಿ ವೇಳೆ ಮಲ, ಮೂತ್ರವನ್ನು ತಾನೇ ಹೊರಹಾಕುತ್ತಿದ್ದನಂತೆ.
ಆರೋಪಿಗೆ ಬುದ್ಧಿ ಹೇಳಲು ಗ್ರಾಮದಲ್ಲಿ ಹಲವು ಬಾರಿ ನ್ಯಾಯ ಪಂಚಾಯಿತಿ ನಡೆದಿತ್ತು. ಆದರೂ ತಪ್ಪು ತಿದ್ದಿಕೊಳ್ಳದೇ ತನ್ನ ಚಾಳಿ ಮುಂದುವರೆಸಿದ್ದ. ''ನನ್ನನ್ನು ರೂಮಿನಲ್ಲಿ ಕೂಡಿಹಾಕಿದ್ದು, ಮಕ್ಕಳೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲ. ಯಾವುದೇ ಕಾರಣವಿಲ್ಲದೆಯೂ ಸುಖಾಸುಮ್ಮನೆ ಪತಿ ಹಲ್ಲೆ ನಡೆಸುತ್ತಿದ್ದ. ಊರಿನಲ್ಲಿ ಎಲ್ಲರೂ ಆತನನ್ನು ಕಂಡರೆ ಹೆದರುತ್ತಿದ್ದರು. ಮದುವೆಯಾದ 12 ವರ್ಷಗಳಿಂದಲೂ ಇದು ನಡೆದುಕೊಂಡೇ ಬಂದಿತ್ತು. ತಾನು ರಾತ್ರಿ ಮನೆಗೆ ಬರುವವರೆಗೂ ಮಕ್ಕಳನ್ನು ನನ್ನ ಬಳಿ ಬರಲು ಬಿಡುತ್ತಿರಲಿಲ್ಲ. ಕಿಟಕಿ ಮೂಲಕವೇ ಮಕ್ಕಳಿಗೆ ಊಟ ನೀಡುತ್ತಿದ್ದೆ'' ಎಂದು ಮಹಿಳೆ ತಾನು ಅನುಭವಿಸಿದ ನರಕಯಾತನೆ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಹೆಚ್ ಡಿ ಕೋಟೆ ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಆರೇಳು ಜನ ಸೇರಿ ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ.. ದೂರು ದಾಖಲು