ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಮರ್ಥ ನಾಯಕ ಅಲ್ಲ ಅಂತಾ ಹೇಳಲು ಸಿದ್ದರಾಮಯ್ಯ ಯಾರು? ಇಡೀ ವಿಶ್ವವೇ ಮೋದಿ ನಾಯಕ ಎನ್ನುವುದನ್ನು ಒಪ್ಪಿದೆ. ಮಾತನಾಡಲು ಇತಿಮಿತಿ ಇರಬೇಕು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಾಗ್ದಾಳಿ ನಡೆಸಿ, ಮೋದಿ ನಾಯಕತ್ವವನ್ನು ಸಮರ್ಥಿಸಿಕೊಂಡಿದ್ದಾರೆ.
ಶೇಷಾದ್ರಿಪುರಂನಲ್ಲಿರುವ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಿನ ಬೆಳಗಾದರೆ ಕೇಂದ್ರದಿಂದ ಹಣ ಬರಲಿಲ್ಲ ಎನ್ನುವ ಆರೋಪ ಮಾಡುತ್ತಿರುವ ಸಿದ್ದರಾಮಯ್ಯ ಅವರೇ ನಾನು ಮುಖ್ಯಮಂತ್ರಿಯಾಗಿದ್ದಾಗ ನೀವು ಹಣಕಾಸು ಸಚಿವರಾಗಿದ್ದಿರಿ. ಆಗ ಕೇಂದ್ರದಿಂದ ಏನಾಗಿತ್ತು ಎನ್ನುವುದು ಗೊತ್ತಿಲ್ಲವೇ? ಕೇವಲ 850 ಕೋಟಿ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದರೆ ಕೇಂದ್ರ ಅನುಮತಿ ಕೊಡಲಿಲ್ಲ. ಈಗ ಯಾಕೆ ಮೋದಿ ಅವರ ಬಗ್ಗೆ ಮಾತನಾಡುತ್ತೀರಿ, ನೀವೇ ಹಣಕಾಸು ಸಚಿವ ಇದ್ದಾಗ ಅಂದು ಏನು ನಡೆಯಿತು ಎಂದು ನಿಮ್ಮಲ್ಲಿ ಪ್ರಮಾಣಿಕತೆ ಇದ್ದರೆ ಹೇಳಿ ಎಂದು ಆಗ್ರಹಿಸಿದರು.
ಮುಂದುವರಿದು ಮಾತನಾಡಿದ ಅವರು, ಐದು ಗ್ಯಾರಂಟಿ ಸಮೀಕ್ಷೆಗೆ ಮಾಜಿ ಮಂತ್ರಿಗಳನ್ನು ಒಳಗೊಂಡಂತೆ ಸಮಿತಿ ರಚನೆ ಮಾಡಲಾಗಿದೆ, ಆದರೆ ರಾಜ್ಯದಲ್ಲಿ ಬರದ ಬಗ್ಗೆ ಅರಿವಿಲ್ಲದ ಸರ್ಕಾರ ಇಂದು ಬರ ಸಮೀಕ್ಷೆ ಸಭೆ ನಡೆಸುತ್ತಿದೆ. ವೃಷಭಾವತಿ ನೀರನ್ನು ನೆಲಮಂಗಲಕ್ಕೆ ತರ್ತೆವೆ ಎನ್ನುತ್ತೀರಲ್ಲ. ಮೂರು ತಿಂಗಳ ಹಿಂದೆ ಹೇಮಾವತಿ ನೀರನ್ನು ನೆಲಮಂಗಲಕ್ಕೆ ತರ್ತೇವೆ ಎಂದು ಹೇಳಿದ್ರು. ಇದೀಗ ಜನ ನಂಬುತ್ತಾರಾ ಎಂದು ಪ್ರಶ್ನಿಸಿದರು.
ಎತ್ತಿನಹೊಳೆ ಯೋಜನೆಗೆ ಕುಮಾರಸ್ವಾಮಿ ಯೋಜನೆಗೆ ವಿರೋಧ ಮಾಡಿದರು ಎನ್ನುತ್ತೀರಿ, ಆದರೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಈ ಯೋಜನೆಗೆ ಅನುಮೋದನೆ ನೀಡಲಾಯಿತು. 8,323 ಕೋಟಿ ಯೋಜನೆ ಇದು, ಇದರಲ್ಲಿ ನಿಮ್ಮ ಪಾತ್ರ ಏನು? ಹಾಸನ, ಅರಸೀಕೆರೆಗೆ ನೀರು ಹರಿಸುವ ವಿಚಾರದಲ್ಲಿ ಕುಮಾರಸ್ವಾಮಿ ಪಾತ್ರದ ಬಗ್ಗೆ ಹೇಳುತ್ತೀರಾ?. ಹಿಂದೆ ಶೆಟ್ಟರ್ ಆದಾಗ ಮಾಡಿದ್ದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೀರಿ, ಈಗ ಅದರ ಮೊತ್ತ 23 ಸಾವಿರ ಕೋಟಿ ದಾಟಿದೆ, ಹಾಗಿದ್ದರೆ ನೀರು ಅರಸೀಕೆರೆಗೆ ಬಂದಿದೆಯಾ? ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾಡಿದ ಯೋಜನೆ ಇದು, ಅರಸೀಕೆರೆಗೆ ನೀರು ಕೊಡಲು ಬೇಡ ಎನ್ನಲ್ಲ, ಅರಸೀಕೆರೆಗೆ ಹೇಮಾವತಿಯಿಂದ ನೇರವಾಗಿ ನೀರು ಕೊಡುವ ವ್ಯವಸ್ಥೆ ಮಾಡಿದೆವು, ಕೋಲಾರ ಚಿಕ್ಕಬಳ್ಳಾಪುರಕ್ಕೆ ಯಾವಾಗ ನೀರು ಕೊಡುತ್ತೀರಿ ಹೇಳಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಬಾಂಬ್ ಬೆದರಿಕೆ ಇ-ಮೇಲ್; ಎಫ್ಐಆರ್ ದಾಖಲು