ಬೆಳಗಾವಿ: ಬೆಳಗಾವಿ ಲೋಕಸಭೆ ಗೆಲ್ಲಲು ಕಾಂಗ್ರೆಸ್ ತೀವ್ರ ಕಸರತ್ತು ನಡೆಸುತ್ತಿದೆ. ಈ ಬಾರಿ ಬಿಜೆಪಿ ಮಣಿಸಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕೈ ನಾಯಕರು ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಸ್ಥಳೀಯ ಪ್ರಭಾವಿ ನಾಯಕರ ಬೆಂಬಲವೇ ಲೋಕಸಭೆ ಟಿಕೆಟ್ ಆಕಾಂಕ್ಷಿಗಳಿಗೆ ಈಗ ದೊಡ್ಡ ತಲೆನೋವಾಗಿದೆ.
ಇಬ್ಬರ ಹೆಸರು ಮಾತ್ರ ಹೈಕಮಾಂಡ್ಗೆ ರವಾನೆ: ಹೌದು, ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್, ಬಿಜೆಪಿ ಭದ್ರಕೋಟೆಯನ್ನು ಭೇದಿಸಿ ಬೆಳಗಾವಿ ಲೋಕಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ರಣತಂತ್ರ ರೂಪಿಸುತ್ತಿದೆ. ಹೊಂದಾಣಿಕೆ ರಾಜಕಾರಣದ ಭಯದಿಂದಾಗಿ ಕೆಲ ಪ್ರಭಾವಿ ಆಕಾಂಕ್ಷಿಗಳು ಸ್ಪರ್ಧೆಗೆ ನಿರಾಸಕ್ತಿ ತೋರಿಸುತ್ತಿದ್ದಾರೆ. ಹಾಗಾಗಿ ಕೇವಲ ಇಬ್ಬರ ಹೆಸರನ್ನು ಮಾತ್ರ ದೆಹಲಿಗೆ ಕಾಂಗ್ರೆಸ್ ಜಿಲ್ಲಾ ಘಟಕ ಕಳಿಸಿದೆ.
ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಮತ್ತು ಖ್ಯಾತ ವೈದ್ಯ ಡಾ. ಗಿರೀಶ್ ಸೋನವಾಲ್ಕರ್ ಅವರ ಹೆಸರನ್ನು ಸೂಚಿಸಲಾಗಿದೆ. ಈ ಇಬ್ಬರಲ್ಲಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎಂಬುದು ಸದ್ಯ ತೀವ್ರ ಕುತೂಹಲ ಮೂಡಿಸಿದೆ.
ಪುತ್ರನಿಗೆ ಟಿಕೆಟ್ ಕೊಡಿಸಲು ಹೆಬ್ಬಾಳ್ಕರ್ ಕಸರತ್ತು: ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ರಾಜಕಾರಣಕ್ಕಿಂತ ಹೊಂದಾಣಿಕೆ ರಾಜಕಾರಣವೇ ಮೇಲುಗೈ ಸಾಧಿಸಿಕೊಂಡು ಬರುತ್ತಿದೆ. ಹಾಗಾಗಿ, ಅಭ್ಯರ್ಥಿಗೆ ಹೈಕಮಾಂಡ್ ಒಪ್ಪಿಗೆಗಿಂತ ಸ್ಥಳೀಯ ಪ್ರಭಾವಿ ಕೈ ನಾಯಕರ ಬೆಂಬಲ ಗಿಟ್ಟಿಸಿಕೊಳ್ಳಲು ಹೆಣಗಾಡುವ ಸ್ಥಿತಿಯಿದೆ. ಆದ್ದರಿಂದ ಕೆಲ ಆಕಾಂಕ್ಷಿಗಳು ಟಿಕೆಟ್ ಗೆ ನಿರಾಸಕ್ತಿ ತೋರಿಸುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
ಇನ್ನು ಪ್ರಭಾವಿ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಒಟ್ಟಾಗಿ ಚುನಾವಣೆ ಎದುರಿಸಿದ್ದೇ ಆದಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶ ಹೆಚ್ಚಿದೆ. ಸಚಿವೆ ಹೆಬ್ಬಾಳ್ಕರ್ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಕುಟುಂಬ ರಾಜಕಾರಣಕ್ಕೆ ಮಣೆ ಹಾಕಬಾರದು ಎಂದು ಹೈಕಮಾಂಡ್ ತೀರ್ಮಾನಿಸಿ ಮತ್ತೋರ್ವ ಆಕಾಂಕ್ಷಿ ಡಾ. ಗಿರೀಶ್ ಸೋನವಾಲ್ಕರ್ ಗೆ ಟಿಕೆಟ್ ಕೊಟ್ಟರೂ ಅಚ್ಚರಿ ಇಲ್ಲ.
ಆದರೆ ಸೋನವಾಲ್ಕರ್ಗೆ ಸ್ಥಳೀಯ ಕೈ ನಾಯಕರ ವಿರೋಧವಿದೆ. ಇನ್ನು ಶತಾಯಗತಾಯ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಪುತ್ರನ ಭವಿಷ್ಯ ರೂಪಿಸುವ ಉದ್ದೇಶದಿಂದ ಟಿಕೆಟ್ ಕೊಡಿಸಿ ಬೆಳಗಾವಿ ಲೋಕಸಭೆಯಿಂದ ಗೆಲ್ಲಿಸಲು ಪಣ ತೊಟ್ಟಿರೋದು ಮಾತ್ರ ಗುಟ್ಟಾಗಿ ಉಳಿದಿಲ್ಲ.
ಹೆಬ್ಬಾಳ್ಕರ್ ಗೆ ಕಂಟಕ ಆಗುತ್ತಾ ಜಾರಕಿಹೊಳಿ ಕುಟುಂಬ: ಒಂದು ವೇಳೆ ಮೃಣಾಲ್ ಹೆಬ್ಬಾಳ್ಕರ್ ಗೆ ಟಿಕೆಟ್ ಕೊಟ್ಟಿದ್ದೇ ಆದಲ್ಲಿ ಆಗ ಸತೀಶ್ ಜಾರಕಿಹೊಳಿ ನಡೆ ಏನಾಗಿರುತ್ತೆ ಎಂಬುದು ಸದ್ಯ ಈಗಿರುವ ಪ್ರಶ್ನೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೃಣಾಲ್ ಅವರನ್ನು ಗೆಲ್ಲಿಸಿಕೊಂಡು ಬರುತ್ತಾರಾ..? ಅಥವಾ ಕೈ ಕೊಡುತ್ತರಾ..? ಎಂದು ಕಾದು ನೋಡಬೇಕಿದೆ. ದಿನದಿಂದ ದಿನಕ್ಕೆ ಬೆಳಗಾವಿ ಅಷ್ಟೇ ಅಲ್ಲದೇ ಇಡೀ ರಾಜ್ಯದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಭಾವಿ ನಾಯಕಿಯಾಗಿ ಬೆಳೆಯುತ್ತಿದ್ದಾರೆ. ಈಗ ಮಗ ಎಂಪಿ ಆಗಿ ಬಿಟ್ಟರೆ ತಮ್ಮ ವರ್ಚಸ್ಸು ಕುಂಠಿತ ಆಗುತ್ತದೆ ಎಂಬ ಭೀತಿ ಜಾರಕಿಹೊಳಿ ಕುಟುಂಬವನ್ನು ಕಾಡುತ್ತಿದೆ.
ಅದೇ ರೀತಿ ಜಾರಕಿಹೊಳಿ ಬ್ರದರ್ಸ್ ಒಟ್ಟಾಗಿ ಸೋಲಿಸುವ ಆತಂಕ ಕೂಡ ಲಕ್ಷ್ಮೀ ಹೆಬ್ಬಾಳ್ಕರ್ ಮುಂದಿದೆ. ಆದರೆ ಯಾರೇ ವಿರೋಧ ಮಾಡಿದರೂ ಪ್ರಬಲ ಲಿಂಗಾಯತ ಸಮುದಾಯ ತನ್ನ ಬೆನ್ನಿಗಿದ್ದು, ಕಾಂಗ್ರೆಸ್ ಸಾಂಪ್ರದಾಯಿಕ ಮತಗಳಿಂದ ತಮ್ಮ ಪುತ್ರ ಗೆದ್ದೇ ಗೆಲ್ಲುತ್ತಾನೆ ಎಂಬ ವಿಶ್ವಾಸದಲ್ಲಿ ಹೆಬ್ಬಾಳ್ಕರ್ ವಿಶ್ವಾಸದಲ್ಲಿ ಇದ್ದಾರೆ.
ಸತತ ನಾಲ್ಕು ಬಾರಿ ಸೋತ ಕಾಂಗ್ರೆಸ್: ಕಳೆದ 4 ಅವಧಿಯಲ್ಲಿ ಸತತವಾಗಿ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. 1999ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಮರಸಿಂಹ ಪಾಟೀಲ ಗೆದ್ದಿದ್ದು ಬಿಟ್ಟರೆ, ಬಳಿಕ ನಡೆದ 2004, 2009, 2014, 2019ರ ಚುನಾವಣೆಗಳಲ್ಲಿ ದಿ. ಸುರೇಶ ಅಂಗಡಿ ಸತತವಾಗಿ ಗೆದ್ದು ಬೀಗಿದ್ದರು.
ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುರೇಶ ಅಂಗಡಿ ಪತ್ನಿ ಮಂಗಳಾ ಅಂಗಡಿ ಅವರು ಗೆಲುವು ಸಾಧಿಸಿದ್ದರು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಬೆಳಗಾವಿ ಲೋಕಸಭೆ 8 ಕ್ಷೇತ್ರಗಳ ಪೈಕಿ ಐವರು ಕಾಂಗ್ರೆಸ್ ಶಾಸಕರಿದ್ದು, ಮೂವರು ಬಿಜೆಪಿ ಶಾಸಕರಿದ್ದಾರೆ. ಈ ರೀತಿ ಅವಕಾಶ ಮತ್ತೆ ಸಿಗೋದಿಲ್ಲ. ಹೀಗಾಗಿ ಬೆಳಗಾವಿಯಲ್ಲಿ ಈ ಬಾರಿ ಕಾಂಗ್ರೆಸ್ ಬಾವುಟ ಹಾರಲೇಬೇಕು ಎಂದು ಹೈಕಮಾಂಡ್ ಜಿಲ್ಲೆಯ ಕೈ ನಾಯಕರಿಗೆ ಸೂಚನೆ ನೀಡಿದೆ.
ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ: ಜಾರಕಿಹೊಳಿ
ಮೃಣಾಲ್ ಹೆಬ್ಬಾಳ್ಕರ್, ಡಾ. ಗಿರೀಶ್ ಸೋನವಾಲ್ಕರ್ ಹೆಸರು ಹೈಕಮಾಂಡ್ ಗೆ ಕಳಿಸಿದ್ದೇವೆ. ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸೋದಿಲ್ಲ. ವಿಧಾನಪರಿಷತ್ ಚುನಾವಣೆಯಲ್ಲಿ ಚನ್ನರಾಜ ಗೆಲ್ಲಿಸಿದಂತೆ ಲೋಕಸಭೆಯಲ್ಲೂ ಗೆಲ್ಲಿಸುತ್ತೇವೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಗೆಲ್ಲುವ ಮಾನದಂಡ ಆಧರಿಸಿ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಕೊನೆ ಕ್ಷಣದಲ್ಲಿ ಸತೀಶ್ ಜಾರಕಿಹೊಳಿ ಅವರನ್ನೇ ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಿಲ್ಲ.
ಇದನ್ನೂಓದಿ:ಧಾರವಾಡ ಲೋಕಸಭೆ ಕ್ಷೇತ್ರ: ಕೈ ಟಿಕೆಟ್ಗಾಗಿ ಪೈಪೋಟಿ, ಬೆಳೆಯುತ್ತಿದೆ ಆಕಾಂಕ್ಷಿಗಳ ಪಟ್ಟಿ