ಬೆಂಗಳೂರು: ರಾಜ್ಯದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅಧಿಕಾರವಧಿ ಜುಲೈ 31ಕ್ಕೆ ಕೊನೆಗೊಳ್ಳುತ್ತಿದೆ. ಜೇಷ್ಠತೆಯ ಆಧಾರದಲ್ಲಿ ಈ ಹುದ್ದೆಗೆ ಕ್ರಮವಾಗಿ ಅಜಯ್ ಸೇಠ್ ಮತ್ತು ಶಾಲಿನಿ ರಜನೀಶ್ ಇದ್ದಾರೆ. ಅಜಯ್ ಸೇಠ್ ಕೇಂದ್ರದಲ್ಲಿ ಮಹತ್ವದ ಹುದ್ದೆಯಲ್ಲಿದ್ದರೆ, ಶಾಲಿನಿ ರಜನೀಶ್ ಅಭಿವೃದ್ಧಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಹೆಸರೂ ಕೇಳಿ ಬರುತ್ತಿದೆ.
ಮುಂಚೂಣಿಯಲ್ಲಿ ಶಾಲಿನಿ ರಜನೀಶ್: ರಜನೀಶ್ ಗೋಯಲ್ ಪತ್ನಿ ಶಾಲಿನಿ ರಜನೀಶ್ ಹೆಸರು ಸಿಎಸ್ ರೇಸ್ನಲ್ಲಿ ಮುಂಚೂಣಿಯಲ್ಲಿದೆ. ಮಹತ್ವದ ಹುದ್ದೆಗೆ ಶಾಲಿನಿ ನೇಮಕಗೊಂಡರೆ, ರಾಜ್ಯ ಕಾರ್ಯಾಂಗದ ಅತ್ಯುನ್ನತ ಹುದ್ದೆಯನ್ನು ಪತಿಯ ನಂತರ ಪತ್ನಿ ವಹಿಸಿಕೊಳ್ಳುವುದು ಇದು ಎರಡನೇ ಬಾರಿ. 2000ರ ಡಿಸೆಂಬರ್‌ನಲ್ಲಿ ಬಿ.ಕೆ.ಭಟ್ಟಾಚಾರ್ಯ ನಂತರ ಅವರ ಪತ್ನಿ ಥೆರೇಸಾ ಭಟ್ಟಾಚಾರ್ಯ ಸಿಎಸ್ ಆಗಿದ್ದರು.
ಶಾಲಿನಿ ರಜನೀಶ್ 1989 ಬ್ಯಾಚ್‌ನ ಐಎಎಸ್ ಅಧಿಕಾರಿ. ಇವರಿಗೆ ಇನ್ನೂ 3 ವರ್ಷದ ಸೇವಾವಧಿ ಇದೆ.
ಅಜಯ್ ಸೇಠ್ ರಾಜ್ಯಕ್ಕೆ ಮರಳುವುದು ಅನುಮಾನ?: ಜೇಷ್ಠತೆಯ ಪ್ರಕಾರ ನೋಡುವುದಾದರೆ, ಅಜಯ್ ಸೇಠ್ ಹಿರಿಯ ಐಎಎಸ್ ಅಧಿಕಾರಿ. ಇವರ ಬಳಿಕ ಶಾಲಿನಿ ರಜನೀಶ್ ಹಿರಿಯರು. ಆದರೆ ಸೇಠ್ ಕೇಂದ್ರದಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿ ಮಹತ್ವದ ಹುದ್ದೆಯಲ್ಲಿದ್ದು, ರಾಜ್ಯಕ್ಕೆ ಮರಳುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಸೇಠ್ ಸೇವಾವಧಿ ಇನ್ನು 10 ತಿಂಗಳು ಇದೆ. ಕರ್ನಾಟಕ ಕೇಡರ್‌ನ 1987ರ ಬ್ಯಾಚ್ ಅಧಿಕಾರಿಯಾಗಿರುವ ಇವರು ಏಪ್ರಿಲ್ 2021ರಿಂದ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಿಎಸ್ ಆಗಿ ಎಲ್.ಕೆ.ಅತೀಕ್?: ಈ ಹುದ್ದೆಗೆ ಮೂರನೇಯವರಾಗಿ ಎಲ್.ಕೆ.ಅತೀಕ್ ಹೆಸರೂ ಕೇಳಿ ಬರುತ್ತಿದೆ. ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಯಾಗಿರುವ ಜೊತೆಗೆ ಹಣಕಾಸು ಇಲಾಖೆಯ ಪ್ರಭಾರಿ ಅಪರ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪರ ಸಿಎಂ ಸಿದ್ದರಾಮಯ್ಯ ಒಲವು ಹೊಂದಿದ್ದಾರೆ ಎಂಬ ಮಾತುಗಳಿವೆ.
1991ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಅತೀಕ್, ವಿವಿಧ ಮಹತ್ವದ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಿ. ಇವರ ಸೇವಾವಧಿ 2025ರವರೆಗೆ ಇದೆ. ಆದರೆ, ಸೇವಾ ಜೇಷ್ಠತೆಯಂತೆ ಅತೀಕ್ ಕಿರಿಯವರು. ಜೇಷ್ಠತೆಯ ಆಧಾರದಲ್ಲಿ ಶಾಲಿನಿ ರಜನೀಶ್ ಮುಂಚೂಣಿಯಲ್ಲಿದ್ದಾರೆ. ಒಂದು ವೇಳೆ ಜೇಷ್ಠತೆ ಮೀರಿ ನೇಮಕ ಮಾಡಿದರೆ, ಕಾನೂನು ತೊಡಕು ಎದುರಾಗುವ ಸಾಧ್ಯತೆಯಿಂದಾಗಿ ಶಾಲಿನಿ ರಜನೀಶ್ ಬಹುತೇಕ ಮುಂದಿನ ಮುಖ್ಯ ಕಾರ್ಯದರ್ಶಿಯಾಗುವುದು ಖಚಿತ ಎನ್ನಲಾಗುತ್ತಿದೆ.
ಇದನ್ನೂ ಓದಿ: 'ಡಿಸಿಎಂ' ಚರ್ಚೆ ಮತ್ತೆ ಮುನ್ನೆಲೆಗೆ: ಉಪಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟ ಸಚಿವರಾರು? - ADDITIONAL DCM ISSUE