ಬೆಂಗಳೂರು: ಲೋಕಸಭೆ ಚುನಾವಣೆಯ ಸಿದ್ಧತೆ ಕುರಿತಂತೆ ಇಂದು ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತಂತೆ ಚರ್ಚೆ ನಡೆಯಲಿದೆ. ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದ್ದು, ಮಾಜಿ ಮುಖ್ಯಮಂತ್ರಿ ಹಾಗು ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಕಾರ್ಯತಂತ್ರದ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್ ಪಕ್ಷವು ಎನ್‍ಡಿಎ ಮೈತ್ರಿಕೂಟ ಸೇರಿದ್ದು, ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಪಕ್ಷಕ್ಕೆ ದೊರೆತಿರುವ 3 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.
ಕುಮಾರಸ್ವಾಮಿ ಅಥವಾ ನಿಖಿಲ್ ಸ್ಪರ್ಧೆಗೆ ಒತ್ತಾಯ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಈಗಾಗಲೇ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಬ್ಬರಲ್ಲಿ ಒಬ್ಬರು ಸ್ಪರ್ಧಿಸುವಂತೆ ಪಕ್ಷದ ಸ್ಥಳೀಯ ಮುಖಂಡರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.
ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅವರನ್ನು ಸ್ಪರ್ಧೆಗಿಳಿಸುವ ಬಗ್ಗೆ ಪಕ್ಷದ ವರಿಷ್ಠರಲ್ಲಿ ಹೆಚ್ಚು ಒಲವಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೋಲಾರ ಮೀಸಲು ಕ್ಷೇತ್ರದಲ್ಲಿ ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಮಲ್ಲೇಶ್ ಬಾಬು ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇಂದಿನ ಸಭೆಯಲ್ಲಿ ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ ಎಂದು ಮೂಲಗಳು ಹೇಳಿವೆ.
ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಹಾಗೂ ಅವರ ಪತ್ನಿ ಅನುಸೂಯ ಮಂಜುನಾಥ್ ಭೇಟಿಯಾಗಿದ್ದರು. ಈ ಭೇಟಿಯ ಸಂದರ್ಭದಲ್ಲಿ ಕ್ಷೇತ್ರ ಹಂಚಿಕೆ, ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ್ರಚಾರ ಹಾಗೂ ಅಭ್ಯರ್ಥಿಗಳ ಗೆಲುವಿನ ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಎಐಸಿಸಿ ವಕ್ತಾರ ಸಂಕೇತ್ ಏಣಗಿ ರಾಜೀನಾಮೆ