ಬೆಂಗಳೂರು: ಕಳ್ಳತನಕ್ಕೆಂದು ಬಂದ ಕಳ್ಳ ಕತ್ತಲಲ್ಲಿ ಮೊಬೈಲ್ ಟಾರ್ಚ್ ಆನ್ ಮಾಡಲು ಹೋಗಿ ಎಮರ್ಜೆನ್ಸಿ ನಂಬರಿಗೆ ಕರೆ ಮಾಡಿ ಪೊಲೀಸ್ ಅತಿಥಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆಶಾ ಕಾರ್ಯಕರ್ತೆಯರಿಗೆ ಹಂಚಲು ಜಯನಗರ 2ನೇ ಬ್ಲಾಕ್‌ನಲ್ಲಿರುವ ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರಿಸಿದ್ದ ಟ್ಯಾಬ್‌ಗಳನ್ನು ಕದ್ದೊಯ್ದಿದ್ದ ಶ್ರೀನಿವಾಸ್ ಎಂಬಾತನನ್ನು ಸಿದ್ದಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಆರೋಗ್ಯ ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರದ ಆಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಕಳ್ಳತನಕ್ಕೆ ಎಂದು ಸಂಚು ರೂಪಿಸಿಕೊಂಡು ನಕಲಿ ಕೀ ಸಿದ್ದಪಡಿಸಿಕೊಂಡಿದ್ದ.
ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಹಂಚಲು ಖರೀದಿಸಿದ್ದ ಟ್ಯಾಬ್‌ಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಸ್ತನು ಮಾಡಲಾಗಿತ್ತು. ಜುಲೈ 9 ರಂದು ರಾತ್ರಿ ನಕಲಿ ಕೀ ಬಳಸಿ ಆರೋಗ್ಯ ಕೇಂದ್ರಕ್ಕೆ ಬಂದಿದ್ದ ಆರೋಪಿ, 62 ಟ್ಯಾಬ್‌ಗಳನ್ನು ಕಳ್ಳತನ ಮಾಡಿದ್ದ. ಮರುದಿನ ಕಳ್ಳತನವಾಗಿರುವುದನ್ನು ಗಮನಿಸಿದ್ದ ವೈದ್ಯಕೀಯ ಅಧಿಕಾರಿ, ಸಿದ್ದಾಪುರ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಕೃತ್ಯ ನಡೆದ ಸಂದರ್ಭದಲ್ಲಿ ಅದೇ ಸ್ಥಳದಿಂದ ಪೊಲೀಸ್ ತುರ್ತು ಸಹಾಯವಾಣಿಗೆ ಕರೆಯೊಂದು ಬಂದು ಸ್ಥಗಿತವಾಗಿರುವ ಮಾಹಿತಿ ಲಭ್ಯವಾಗಿತ್ತು. ಕಳ್ಳತನ ಮಾಡಲು ಬಂದಿದ್ದ ಆರೋಪಿ ಕತ್ತಲಿನಲ್ಲಿ ಮೊಬೈಲ್ ಟಾರ್ಚ್ ಆನ್ ಮಾಡಲು ಹೋಗಿ ಎಮರ್ಜೆನ್ಸಿ ನಂಬರಿಗೆ ಕರೆ ಮಾಡಿದ್ದ. ತಕ್ಷಣ ಆ ನಂಬರ್ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದಾಗ ಆರೋಪಿಯ ಕೃತ್ಯ ಬಯಲಾಗಿದೆ.
ಸದ್ಯ ಆರೋಪಿ ಶ್ರೀನಿವಾಸ್‌ನನ್ನು ಬಂಧಿಸಿರುವ ಸಿದ್ದಾಪುರ ಠಾಣಾ ಪೊಲೀಸರು, ಆತನಿಂದ 61 ಟ್ಯಾಬ್‌ಗಳು, 2 ಯುಪಿಎಸ್ ಬ್ಯಾಟರಿಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ವಾಹನ ಮಾರಾಟ: ಇಬ್ಬರ ಬಂಧನ, 2.5 ಕೋಟಿ ಮೌಲ್ಯದ 17 ಕಾರುಗಳು ವಶಕ್ಕೆ - Two Arrested