ಬೆಂಗಳೂರು: ಏಳನೇ ವೇತನ ಆಯೋಗದ ವರದಿ ಶಿಫಾರಸಿನಂತೆ ವೇತನ ಪರಿಷ್ಕರಿಸಿದರೆ ಸರ್ಕಾರದ ಬೊಕ್ಕಸಕ್ಕೆ 2024-25 ಸಾಲಿನಲ್ಲಿ 17,440.15 ಕೋಟಿ ರೂ. ವಾರ್ಷಿಕ ಹೆಚ್ಚುವರಿ ಹೊರೆ ಬೀಳಲಿದೆ.
ಆರ್ಥಿಕ ಇಲಾಖೆಯ ಪ್ರಕಾರ, ಆರ್ಥಿಕ ವರ್ಷ 2022-23ರ ವಾಸ್ತವಿಕ ವೆಚ್ಚಗಳ ಅಂಕಿ - ಸಂಖ್ಯೆಗಳ ಆಧಾರದ ಮೇಲೆ ಆರ್ಥಿಕ ವರ್ಷ 2024-25ನೇ ಸಾಲಿಗಾಗಿ ಹೆಚ್ಚುವರಿ ಆರ್ಥಿಕ ಪರಿಣಾಮಗಳನ್ನು ಅಂದಾಜಿಸಲಾಗಿದೆ. ಅಂದಾಜಿಸಲಾದ ಹೆಚ್ಚುವರಿ ವೆಚ್ಚವಾದ ರೂ.17440.15 ಕೋಟಿಗಳು ಅಸ್ತಿತ್ವದಲ್ಲಿರುವ ಮಧ್ಯಂತರ ಪರಿಹಾರದ ಮೇಲಿನ ವೆಚ್ಚವನ್ನು ಒಳಗೊಂಡಿರುತ್ತದೆ ಎಂದು ಏಳನೇ ವೇತನ ಆಯೋಗ ತಿಳಿಸಿದೆ.
2022-23ನೇ ಸಾಲಿನಲ್ಲಿ ವೇತನ, ಪಿಂಚಣಿಗಳು ಮತ್ತು ಅನುದಾನಿತ ಸಂಸ್ಥೆಗಳ ವೇತನಾನುದಾನದ ವೆಚ್ಚ ರೂ.74,081 ಕೋಟಿಗಳಾಗಿದೆ. ಮುಂದಿನ ವರ್ಷ 2023-24ರ ಪರಿಷ್ಕೃತ ಆಯವ್ಯಯ ಅಂದಾಜುಗಳಲ್ಲಿ ವೇತನಗಳಿಗಾಗಿ ರೂ.65,003 ಕೋಟಿ ಮತ್ತು ನಿವೃತ್ತಿ ವೇತನಗಳಿಗಾಗಿ ರೂ.25,116 ಕೋಟಿ ಸೇರಿ ಒಟ್ಟಾಗಿ ರೂ.90,119 ಕೋಟಿಗಳನ್ನು ಮುಂಗಡವಾಗಿ ಒದಗಿಸಲಾಗಿರುತ್ತದೆ. ಇದು ಹಿಂದಿನ ವರ್ಷದ ವೆಚ್ಚಕ್ಕಿಂತ ಶೇ.21.65 ರಷ್ಟು ಹೆಚ್ಚಳವಾಗಿದೆ.
2024-25ರ ಆಯವ್ಯಯ ಅಂದಾಜುಗಳಲ್ಲಿ ವೇತನಕ್ಕಾಗಿ ರೂ.80,434 ಕೋಟಿ ಮತ್ತು ಪಿಂಚಣಿಗಳಿಗಾಗಿ ರೂ.32,355 ಕೋಟಿ ರೂ. ಒಟ್ಟಾಗಿ ರೂ.1,12,789 ಕೋಟಿಗಳನ್ನು ಒದಗಿಸಲಾಗಿರುತ್ತದೆ. ಇದು 2023-24 ರಲ್ಲಿ ಅಂದಾಜಿಸಲಾಗಿರುವುದಕ್ಕಿಂತ ರೂ.22,670 ಕೋಟಿಗಳನ್ನು ಹೆಚ್ಚಳವಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ.25 ರಷ್ಟು ಹೆಚ್ಚಾಗಿದೆ. ಮಧ್ಯಮಾವಧಿ ವಿತ್ತೀಯ ಯೋಜನೆಯಂತೆ ನೌಕರರ ವೇತನ ಮತ್ತು ಭತ್ಯೆಗಳು, ಪಿಂಚಣಿಗಳು ಮತ್ತು ಇತರ ನಿವೃತ್ತಿ ವೇತನ ಸೌಲಭ್ಯಗಳ ಪರಿಷ್ಕರಣೆಯ ಕಾರಣದಿಂದ ರೂ.15,000 ಕೋಟಿಯಿಂದ ರೂ.20,000 ಕೋಟಿಗಳವರೆಗಿನ ಹೆಚ್ಚುವರಿ ವೆಚ್ಚವನ್ನು ಅಂದಾಜಿಸಿದೆ.
ವಾರ್ಷಿಕ ಹೆಚ್ಚುವರಿ ವೆಚ್ಚ ಏನಿರಲಿದೆ?:
- ವೇತನ/ಪರಿಷ್ಕೃತ ವೇತನದ ಹೆಚ್ಚುವರಿ ವೆಚ್ಚ- 7,408.79 ಕೋಟಿ ರೂ.
- ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ಇತರ ಭತ್ಯೆಯ ಹೆಚ್ಚುವರಿ ವೆಚ್ಚ- 824 ಕೋಟಿ ರೂ.
- ವೈದ್ಯಕೀಯ ಭತ್ಯೆಗಳ ಹೆಚ್ಚುವರಿ ವೆಚ್ಚ- 109.30 ಕೋಟಿ ರೂ.
- ಪಿಂಚಣಿ ಮತ್ತು ಕುಟುಂಬ ಪಿಂಚಣಿ ಮೇಲಿನ ಹೆಚ್ಚುವರಿ ವೆಚ್ಚ- 3,791.43 ಕೋಟಿ
- ಎನ್ಪಿಎಸ್ ವಂತಿಕೆಗೆ ಹೆಚ್ಚುವರಿ ವೆಚ್ಚ- 530.45 ಕೋಟಿ
- ಮರಣ ಮತ್ತು ನಿವೃತ್ತಿ ಉಪದಾನ ಹೆಚ್ಚುವರಿ ವೆಚ್ಚ- 1,083.56 ಕೋಟಿ
- ರಜೆ ನಗದೀಕರಣದ ಹೆಚ್ಚುವರಿ ವೆಚ್ಚ- 241.02 ಕೋಟಿ
- ನಿವೃತ್ತಿ ವೇತನದ ಪರಿವರ್ತನೆಯ ಹೆಚ್ಚುವರಿ ವೆಚ್ಚ- 563.41 ಕೋಟಿ
- ಹೆಚ್ಚುವರಿ ಪಿಂಚಣಿ/ಕುಟುಂಬ ಪಿಂಚಣಿಯ ಹೆಚ್ಚುವರಿ ವೆಚ್ಚ- 373.89 ಕೋಟಿ
- ನಿವೃತ್ತಿದಾರರರಿಗೆ ವೈದ್ಯಕೀಯ ಸೌಲಭ್ಯದ ಮೇಲಿನ ಹೆಚ್ಚುವರಿ ವೆಚ್ಚ- 315 ಕೋಟಿ
- ಅನುದಾನಿತ ಸಂಸ್ಥೆಗಳ ವೇತನಾನುದಾನದ ಹೆಚ್ಚುವರಿ ವೆಚ್ಚ- 2,599.30 ಕೋಟಿ
ಓದಿ: ಚುನಾವಣೆಗೂ ಮುನ್ನ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಗುಡ್ ನ್ಯೂಸ್: ಬಾಕಿ ಮೊತ್ತ ಪಾವತಿಗೆ ಆದೇಶ